ಕತ್ತಲಲ್ಲಿ ಮಾಯವಾದ ಹಂಪಿ ಬೈನೈಟ್

ಹಂಪಿಯಲ್ಲಿ ಸ್ಮಾರಕ ಹಾಗೂ ಕಲ್ಲುಗಳಿಗೆ ವಿದ್ಯುತ್ ಅಲಂಕಾರ
ಹಂಪಿಯಲ್ಲಿ ಸ್ಮಾರಕ ಹಾಗೂ ಕಲ್ಲುಗಳಿಗೆ ವಿದ್ಯುತ್ ಅಲಂಕಾರ
Published on

ಪ್ರಮುಖ ಮುಖ್ಯಾಂಶಗಳು

  • 75 ಲಕ್ಷ ರೂ. ಬಿಲ್ ಬಾಕಿ
  • ತುಕ್ಕು ಹಿಡಿಯುತ್ತಿವೆ 11 ಕೋಟಿ ರೂ.ಗಳ ಪರಿಕರಗಳು
ಮಂಜುನಾಥ ಅಯ್ಯಸ್ವಾಮಿ ಹೊಸಪೇಟೆ
ವಿಜಯನಗರ ಗತವೈಭವವನ್ನು ರಾತ್ರಿ 7 ವೇಳೆಯೂ ಕಣ್ಣುಂಬಿಕೊಳ್ಳುವ ಸೌಭಾಗ್ಯ ಪ್ರವಾಸಿಗರಿಗೆ ಸಿಗಬೇಕೆಂಬ ಉದ್ದೇಶದಿಂದ ಆರಂಭವಾದ ಮಹತ್ವಾಕಾಂಕ್ಷಿ ಬೈ ನೈಟ್' ಯೋಜನೆಗೆ ಕತ್ತಲು ಕವಿದಿದೆ. ಜನಸಾಮಾನ್ಯರಿಗೆ ಅತೀವ ದುಬಾರಿಯಾಗಿ, ಕೇವಲ ವಿಐಪಿಗಳ ಪ್ರದರ್ಶನಕ್ಕೆ ಮಾತ್ರ ಸೀಮಿತವಾದ ಈ ಯೋಜನೆಯ 11 ಕೋಟಿ ರೂ. ಮೊತ್ತದ ಪರಿಕರಗಳು ನಿರ್ವಹಣೆಯಿಲ್ಲದೆ ತುಕ್ಕು ಹಿಡಿಯುತ್ತಿವೆ. ಕೇವಲ 75 ಲಕ್ಷ ರೂ. ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿರುವುದು ಇಡೀ ಯೋಜನೆಗೆ ಗ್ರಹಣ ಹಿಡಿಯುವಂತೆ ಮಾಡಿದ್ದು, ಸರ್ಕಾರದ ಕೋಟ್ಯಂತರ ಅನುದಾನ ವ್ಯರ್ಥವಾಗಿದೆ.
ಉತ್ತರ ಭಾರತದವರೆಗೆ ವಿಸ್ತರಿಸಿದ್ದ ವಿಜಯನಗರ ಸಾಮ್ರಾಜ್ಯದ ಗತವೈಭವದ ಸಾಕ್ಷಿಯಾಗಿರುವ ತಾಣವೇ ದಕ್ಷಿಣ ಕಾಶಿ ಹಂಪಿ. ಕಣ್ಣಿದ್ದರೆ ಕನಗಿರಿ ನೋಡು, ಕಾಲಿದ್ದರೆ ಹಂಪಿ ನೋಡು ಎಂಬ ನಾಣ್ಣುಡಿಯಂತೆ ಹಂಪಿ ವೀಕ್ಷಿಸಲು ಪ್ರತಿದಿನ ಸಾವಿರಾರು ಪ್ರವಾಸಿಗರು ಹಗಲಿನಲ್ಲಿ ಬರುತ್ತಾರೆ. ಇಲ್ಲಿನ ಸ್ಮಾರಕಗಳ ಸಮೂಹ ಹಾಗೂ ಪ್ರಕೃತಿ ಸೌಂದರ್ಯಕ್ಕೆ ಪ್ರವಾಸಿಗರು ಮಾರುಹೋಗುತ್ತಾರೆ. ಆದರೆ ಕತ್ತಲಾಗುತ್ತಿದ್ದಂತೆಯೇ ಇಡೀ ಹಂಪಿ ಪ್ರದೇಶ ನಿರ್ಜನವಾಗುತ್ತದೆ. ರಾತ್ರಿ ವೇಳೆಯೂ ಪ್ರವಾಸಿಗರನ್ನು ಸೆಳೆಯಲು ಹಾಗೂ ಸ್ಮಾರಕಗಳ ಇತಿಹಾಸವನ್ನು ಧ್ವನಿ-ಬೆಳಕಿನ ಮೂಲಕ ವಿವರಿಸಲು 2008-09ರಲ್ಲಿ ಹಂಪಿ ಬೈ ನೈಟ್ ಯೋಜನೆ ರೂಪಿಸಲಾಯಿತು. ಅದೇ ವರ್ಷ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ 11 ಕೋಟಿ ರೂ. ಅನುದಾನ ಬಿಡುಗಡೆ ಮಾಡಿತ್ತು. ಹಂಪಿ ವಿಶ್ವ ಪಾರಂಪರಿಕ ಪ್ರದೇಶ ನಿರ್ವಹಣಾ ಪ್ರಾಧಿಕಾರವು (ಹವಾಮಾ) ಆರಂಭದಲ್ಲಿ ಹೆಚ್ಚಿನ ಮುತುವರ್ಜಿ ವಹಿಸಿ ಕೆಲಸ ಆರಂಭಿಸಿತಾದರೂ, ಕೆಲವೇ ದಿನಗಳಲ್ಲಿ ಯೋಜನೆ ಹಳ್ಳಹಿಡಿಯಿತು.
ಹಂಪಿಯ ವಿರೂಪಾಕ್ಷೇಶ್ವರ ದೇಗುಲ, ರಥಬೀದಿ, ಎದುರು ಬಸವಣ್ಣ, ಮಾತಂಗ ಪರ್ವತ, ಸುಗ್ರೀವ ಗುಹೆ, ವಿಜಯವಿಠಲ ಸೇರಿದಂತೆ ಪ್ರಮುಖ ಸ್ಮಾರಕಗಳ ಬಳಿ ವಿದ್ಯುದ್ದೀಪಗಳನ್ನು ಅಳವಡಿಸಲಾಗಿತ್ತು. ಯೋಜನೆ ರೂಪಿಸಿದ 10 ವರ್ಷಗಳ ಬಳಿಕ (2020ರಲ್ಲಿ) ಇದಕ್ಕೆ ಚಾಲನೆ ದೊರೆಯಿತು. ಕೆಎಸ್‌ಟಿಡಿಸಿ ಅಡಿ ಇನ್ವೆಟಿವ್ ಲೈಟಿಂಗ್ ಸಿಸ್ಟಂ ಸಂಸ್ಥೆ ಇದರ ನಿರ್ವಹಣೆ ಜವಾಬ್ದಾರಿ ವಹಿಸಿತ್ತು. ಆದರೆ, ಕೋವಿಡ್ ಹಿನ್ನೆಲೆಯಲ್ಲಿ ಯೋಜನೆ ಸ್ಥಗಿತಗೊಂಡಿತು. ಅಂದಿನಿಂದ ಇಲ್ಲಿಯವರೆಗೆ ಯೋಜನೆ ಮರುಚಾಲನೆ ನೀಡುವಲ್ಲಿ ಆಡಳಿತಾರೂಢರ ಇಚ್ಛಾಶಕ್ತಿಯ ಕೊರತೆ ಎದುರಾಗಿದೆ. ಕೋವಿಡ್ ಕಾಲದ 75 ಲಕ್ಷ ರೂ. ವಿದ್ಯುತ್ ಬಿಲ್ ಬಾಕಿ ಉಳಿದಿದ್ದು, ನಿರ್ವಹಣೆ ಹೊತ್ತ ಕಂಪನಿಯಾಗಲಿ ಅಥವಾ ಸರ್ಕಾರವಾಗಲಿ ಇದನ್ನು ಪಾವತಿಸಿಲ್ಲ. ಪರಿಣಾಮ 75 ಲಕ್ಷ ರೂ. ವಿದ್ಯುತ್ ಬಾಕಿಗಾಗಿ 11 ಕೋಟಿ ರೂ. ವೆಚ್ಚದ ಉಪಕರಣಗಳು ಹಾಳಾಗುತ್ತಿವೆ.

ದುಬಾರಿ ದರ ವಸೂಲಿ

ಹಂಪಿ ಬೈ ನೈಟ್ ಯಶಸ್ವಿಯಾಗದಿರಲು ಅದರ ಅತೀವ ದುಬಾರಿ ದರವೂ ಪ್ರಮುಖ ಕಾರಣವಾಗಿದೆ. ಆರಂಭದಲ್ಲಿ ಒಬ್ಬರಿಗೆ 2500 ರೂ. ದರ ನಿಗದಿಪಡಿಸಿ, ವಿರೂಪಾಕ್ಷೇಶ್ವರ ರಥಬೀದಿಯಲ್ಲಿ ಟಿಕೆಟ್ ವಸೂಲಿ ಮಾಡಲಾಗುತ್ತಿತ್ತು. ಇಲ್ಲಿ ಕಿಕ್ಕಿಂಥ ಇತಿಹಾಸ ಹಾಗೂ ವಿಜಯನಗರದ ಗತವೈಭವವನ್ನು ಧ್ವನಿ-ಬೆಳಕಿನ ಮೂಲಕ ಪ್ರದರ್ಶಿಸಲಾಗುತ್ತಿತ್ತು. ವಿರೂಪಾಕ್ಷೇಶ್ವರ ದೇಗುಲದಿಂದ ಎದುರು ಬಸವಣ್ಣ, ಅಚ್ಚುತರಾಯ ಹಾಗೂ ಸುಗ್ರೀವ ಗುಹೆಯ ಋಷಿಮುಖ ಪರ್ವತ, ಮಾತಂಗ ಪರ್ವತ, ಬಳಿ ಪ್ರದರ್ಶನ ನೀಡಲಾಗುತ್ತಿತ್ತು. ನಂತರ ರಾಜ ತುಲಾಭಾರದ ಇತಿಹಾಸವನ್ನು ತಿಳಿಸಲಾಗುತ್ತಿತ್ತು. ದರ ಅಧಿಕವಾಗಿದ್ದರಿಂದ ಉಳ್ಳವರು ಮಾತ್ರ ಈ ಕಾರ್ಯಕ್ರಮಕ್ಕೆ ಬರುತ್ತಿದ್ದರು. ಬಳಿಕ ದರವನ್ನು 500 ರೂ.ಗೆ ಇಳಿಸಲಾಯಿತಾದರೂ, ವಿದ್ಯುತ್ ಬಿಲ್ ಪಾವತಿಸದ ಕಾರಣ ಸಂಪರ್ಕ ಕಡಿತಗೊಂಡು ಯೋಜನೆ ಸಂಪೂರ್ಣ ಸ್ಥಲಭ್ಯವಾಗುತ್ತಿಲ್ಲ.

ವಿಐಪಿ ಗಳು ಬಂದಾಗ ಮಾತ್ರ ಬೆಳಕು

ಪ್ರವಾಸಿಗರ ಗಮನ ಸೆಳೆಯಲು ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಆರಂಭವಾದ ಈ ಯೋಜನೆ ಇಂದು ಕೇವಲ ವಿಐಪಿಗಳಿಗೆ ಮಾತ್ರ ಸೀಮಿತವಾಗಿದೆ. ಕೇಂದ್ರ-ರಾಜ್ಯ ಸರ್ಕಾರದ ಸಚಿವರು ಹಾಗೂ ಉನ್ನತಾಧಿಕಾರಿಗಳು ಹಂಪಿಯಲ್ಲಿ ರಾತ್ರಿ ವಾಸ್ತವ್ಯ ಹೂಡಿದಾಗಷ್ಟೇ ಇದನ್ನು ಪ್ರದರ್ಶಿಸಲಾಗುತ್ತದೆ. ಗಣ್ಯರು ಬಂದಾಗ ಕಾರ್ಯಾರಂಭ ಮಾಡುವ ವ್ಯವಸ್ಥೆ, ಜನಸಾಮಾನ್ಯರಿಗೆ ಮಾತ್ರ ಲಭ್ಯವಾಗುತ್ತಿಲ್ಲ.
"

ಹಂಪಿ ಬೈ ನೈಟ್ ಕಾರ್ಯಕ್ರಮದ ವಿದ್ಯುತ್ ಬಿಲ್ ಬಾಕಿ ಹಿನ್ನೆಲೆಯಲ್ಲಿ ಕರೆಂಟ್ ಕಟ್ ಮಾಡಲಾಗಿದೆ. ಇಲ್ಲಿನ ಸ್ಥಿತಿಗತಿ ಬಗ್ಗೆ ಸರ್ಕಾರಕ್ಕೆ ವರದಿ ಒಪ್ಪಿಸಲಾಗಿದೆ. ಮುಂದಿನ ದಿನಗಳಲ್ಲಿ ಹೊಸ ಸಂಸ್ಥೆಗೆ ನೀಡಿ ಕಾರ್ಯಕ್ರಮ ಮರು ಚಾಲನೆ ನೀಡುವ ಸಾಧ್ಯತೆ ಇದೆ.

— ರಮೇಶ ವಟಿಗಲ್ ಹವಾಮಾ ಆಯುಕ್ತ, ಹಂಪಿ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net