ಕಾಲುವೆಗಳ ಮಾಲಿನ್ಯಮುಕ್ತಕ್ಕೆ ಗ್ರೀನ್ ಸ್ಕ್ವಡ್?

AI
AI
Published on

ಪ್ರಮುಖ ಮುಖ್ಯಾಂಶಗಳು

  • ಜೀವನಾಡಿ ಕಾಲುವೆಗಳ ರಕ್ಷಣೆಗೆ ನಗರಸಭೆಯಿಂದ ಚಿಂತನೆ
  • ಕಸ, ಚರಂಡಿ ನೀರು ಬಿಟ್ಟರೆ ಬಿಳಲಿದೆ ದಂಡ
ಹೊಸಪೇಟೆ: ನಗರದ ನಡುವೆ ಹರಿದು ಬರುವ ಕಾಲುವೆಗಳನ್ನು ಮಾಲಿನ್ಯಮುಕ್ತಗೊಳಿಸಲು ನಗರಸಭೆ ಈಗ ಬಿಗಿ ಕ್ರಮಕ್ಕೆ ಮುಂದಾಗಿದ್ದು, ವಿಶೇಷ ಗ್ರೀನ್ ಸ್ಕ್ವೈಡ್ (ಹಸಿರು ಪಡೆ) ರಚಿಸಲು ನಗರಸಭೆ ಗಂಭೀರ ಚಿಂತನೆ ನಡೆಸಿದೆ.
ಜೀವನಾಡಿಯಂತಿರುವ ಎಚ್ ಎಲ್ ಸಿ, ಎಲ್ ಎಲ್ ಸಿ, ಹಾಗೂ ಅರಸರ ಕಾಲ ರಾಯ, ಬಸವ ಕಾಲುವೆಗಳ ಪ್ರಮುಖ ಕಾಲುವೆಗಳು ನಗರದಲ್ಲಿ ಅಂದಾಜು 25 ಕಿಮೀ ನಷ್ಟು ಹರಿಯುತ್ತಿದೆ. ಸುದೀರ್ಘ ವಿಸ್ತರಣೆ ಹೊಂದಿರುವ ಈ ಕಾಲುವೆಗಳು ಲಕ್ಷಾಂತರ ಜನರ ಕುಡಿಯುವ ನೀರು ಹಾಗೂ ಕೃಷಿಯ ಆಸರೆಯಾಗಿವೆ. ಆದರೆ, ಸಾರ್ವಜನಿಕರು ಹಾಗೂ ಕೆಲವು ವಾಣಿಜ್ಯ ಮಳಿಗೆಗಳವರು ತ್ಯಾಜ್ಯ ಚೆಲ್ಲುವುದರಿಂದ ಈ ನೀರು ಸಂಪೂರ್ಣ ಕಲುಷಿತಗೊಳ್ಳುತ್ತಿತ್ತು. ಇವುಗಳಲ್ಲಿ ಚರಂಡಿ ನೀರು, ಯುಜಿಡಿ ಸಂಪರ್ಕ ಮತ್ತು ಪ್ಲಾಸ್ಟಿಕ್ ಸೇರಿದಂತೆ ತ್ಯಾಜ್ಯ ಎಸೆಯುವುದಕ್ಕೆ ಶಾಶ್ವತ ತಡೆ ನೀಡುವ ಉದ್ದೇಶದಿಂದ ವಿಶೇಷ ಗ್ರೀನ್ ಸ್ಕ್ವಾಡ್ (ಹಸಿರು ಪಡೆ) ರಚಿಸಲು ನಗರಸಭೆ ಗಂಭೀರ ಚಿಂತನೆ ನಡೆಸಿದೆ.
ಕಠಿಣ ಕಾನೂನು ಕ್ರಮದ ಎಚ್ಚರಿಕೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದರ ಜತೆಗೆ, ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲು ಹಾಗೂ ಸ್ಥಳದಲ್ಲೇ ಭಾರೀ ದಂಡ ವಿಧಿಸಲು ಈ ಪಡೆಗೆ ಪೂರ್ಣ ಅಧಿಕಾರ ನೀಡಲಾಗುತ್ತಿದೆ. ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಕಾಲುವೆ ನೈರ್ಮಲ್ಯೀಕರಣ ಸಮಸ್ಯೆಗೆ ಈ ಹಸಿರು ಪಡೆ ರಚನೆಯಿಂದ ಶಾಶ್ವತ ಪರಿಹಾರ ಸಿಗಲಿದೆ ಎಂಬ ಭರವಸೆ ಸಾರ್ವಜನಿಕರಲ್ಲಿ ವ್ಯಕ್ತವಾಗಿದೆ. ನಗರಸಭೆಯ ಈ ದಿಟ್ಟ ಹೆಜ್ಜೆಯಿಂದ ನಗರದ ಕಾಲುವೆಗಳಿಗೆ ಶೀಘ್ರದಲ್ಲೇ ಹೊಸ ಕಳೆ ಬರಲಿದೆ.

ವಿವಿಧ ಇಲಾಖೆಗಳ ಸಮನ್ವಯ

ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ಕಾರ್ಯಾಚರಣೆ ಕಾಲುವೆಗಳ ರಕ್ಷಣೆ ಮಾಡಲಾಗುತ್ತದೆ. ಕೇವಲ ಒಂದು ಇಲಾಖೆಯಿಂದ ಸಾಧ್ಯವಿಲ್ಲ ಎಂಬುದನ್ನು ಅರಿತಿರುವ ನಗರಸಭೆ, ಬೃಹತ್ ಪಡೆ ಕಟ್ಟಲು ಯೋಜಿಸಿದೆ. ನಗರಸಭೆ, ಪೊಲೀಸ್ ಇಲಾಖೆ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ನೀರಾವರಿ ನಿಗಮ ಹಾಗೂ ತುಂಗಭದ್ರಾ ಆಡಳಿತ ಮಂಡಳಿ ಸೇರಿದಂತೆ ಇತರೆ ಪ್ರಮುಖ ಇಲಾಖೆಗಳನ್ನು ಒಂದೇ ಸೂರಿನಡಿ ತಂದು ಈ ಜಂಟಿ ತಂಡವನ್ನು ರಚಿಸಲಾಗುತ್ತದೆ.

ಏನಿರಲಿದೆ ಯೋಜನೆಯಲ್ಲಿ?

ವಿವಿಧ ಇಲಾಖೆಗಳ ಸಹಕಾರದೊಂದಿಗೆ ನಗರದಲ್ಲಿ ಒಟ್ಟು ಮೂರು ಗ್ರೀನ್ ಸ್ಕ್ವಾಡ್ ಪಡೆಯನ್ನು ರಚಿಸಲಾಗುತ್ತದೆ. ಪ್ರತಿಯೊಂದು ತಂಡದೊAದಿಗೆ ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಇರಲಿದ್ದಾರೆ. ಇವರು ಪ್ರತ್ಯೇಕ ವಾಹನಗಳಲ್ಲಿ ನಗರದ ಕಾಲುವೆಗಳ ಉದ್ದಕ್ಕೂ ನಿರಂತರ ಗಸ್ತು ತಿರುಗಲಿದ್ದಾರೆ. ಕಾಲುವೆ ದಂಡೆಗಳಲ್ಲಿ ಕಸ ಹಾಕುವವರನ್ನು ಹಾಗೂ ಅಕ್ರಮವಾಗಿ ಚರಂಡಿ ನೀರು ಬಿಡುವವರನ್ನು ಪತ್ತೆಹಚ್ಚಲು ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತದೆ.

ಕುಡಿಯುವ ನೀರಿನ ಆಸರೆ

ನಗರ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಭಾಗದ ಲಕ್ಷಾಂತರ ಜನರಿಗೆ ಇದುವೇ ಮೂಲ ಕುಡಿಯುವ ನೀರಿನ ಆಸರೆ. ಆದರೆ, ಕಾಲುವೆಗಳಿಗೆ ಚರಂಡಿ ಹಾಗೂ ಯುಜಿಡಿ ನೀರು ಸೇರುತ್ತಿರುವುದರಿಂದ ಕಲುಷಿತ ನೀರನ್ನು ಸಾರ್ವಜನಿಕರು ಬಳಸುವಂತಾಗಿದೆ. ಇದರಿಂದ ಕ್ರಮೇಣ ಸಾಂಕ್ರಾಮಿಕ ರೋಗಗಳು ಹಾಗೂ ಕರುಳಿನ ಸಂಬAಧಿ ಕಾಯಿಲೆಗಳು ಹರಡುವ ಭೀತಿ ಎದುರಾಗಿದೆ. ನಾವು ಎಸೆಯುವ ಪ್ರತಿಯೊಂದು ಪ್ಲಾಸ್ಟಿಕ್ ಹಾಗೂ ತ್ಯಾಜ್ಯ, ಕೊನೆಗೆ ನಮ್ಮ ಕುಡಿಯುವ ನೀರನ್ನೇ ವಿಷವಾಗಿಸುತ್ತಿದೆ ಎಂಬ ಕನಿಷ್ಠ ನಾಗರಿಕ ಪ್ರಜ್ಞೆ ಎಲ್ಲರಲ್ಲೂ ಮೂಡಬೇಕಿದೆ. ಈ ಹಿನ್ನೆಲೆಯಲ್ಲಿ ಹಸಿರು ಪಡೆ ರಕ್ಷಣಾ ಕವಚದಂತೆ ಕೆಲಸ ಮಾಡಲಿದ್ದು, ಶುದ್ಧ ಕುಡಿಯುವ ನೀರು ಪೂರೈಕೆಗೆ ಆದ್ಯತೆ ನೀಡಲಿದೆ.

ಕೃಷಿಕರ ಹಿತರಕ್ಷಣೆಗೆ ಆಸರೆ

ನಗರದ ವ್ಯಾಪ್ತಿಯಲ್ಲಿ ಹರಿಯುವ ತುಂಗಭದ್ರಾ ಎಚ್‌ಎಲ್‌ಸಿ, ಎಲ್‌ಎಲ್‌ಸಿ ಹಾಗೂ ರಾಯ-ಬಸವಣ್ಣ (ಅರಸರ ಕಾಲದ) ಕಾಲುವೆಗಳ ನೀರು ಬರಿ ಕುಡಿಯುವುದಕ್ಕಷ್ಟೇ ಅಲ್ಲದೆ, ವಿಜಯನಗರ ಜಿಲ್ಲೆಯ ಸಾವಿರಾರು ಎಕರೆ ಕೃಷಿ ಭೂಮಿಗೆ ಪ್ರಮುಖ ಆಸರೆಯಾಗಿದೆ. ಆದರೆ, ನಗರದಲ್ಲಿ ಈ ಕಾಲುವೆಗಳಿಗೆ ಚರಂಡಿ ಹಾಗೂ ಯುಜಿಡಿ ನೀರು ಸೇರುತ್ತಿರುವುದರಿಂದ ಕಲುಷಿತಗೊಂಡ ನೀರೇ ರೈತರ ಜಮೀನುಗಳಿಗೆ ತಲುಪುತ್ತಿತ್ತು. ಇದರಿಂದ ಬೆಳೆಗಳಿಗೆ ರೋಗಬಾಧೆ ಆವರಿಸುವುದರ ಜತೆಗೆ ಮಣ್ಣಿನ ಫಲವತ್ತತೆಯೂ ಕ್ಷೀಣಿಸುತ್ತಿತ್ತು. ಇದೀಗ ಗ್ರೀನ್ ಸ್ಕ್ವಾಡ್ (ಹಸಿರು ಪಡೆ) ಕಾರ್ಯಾಚರಣೆಗೆ ನಡೆಸಿದರೆ ಕಾಲುವೆಗಳಿಗೆ ವಿಷಕಾರಿ ತ್ಯಾಜ್ಯ ಸೇರುವುದು ಸಂಪೂರ್ಣ ಬಂದ್ ಆಗಲಿದ್ದು, ಕೊನೆಭಾಗದ ರೈತರ ಜಮೀನುಗಳಿಗೆ ಶುದ್ಧ ನೀರು ಸಿಗುವ ಭರವಸೆ ಸಿಗಲಿದೆ.
"

ನಗರದ ಕಾಲುವೆಗಳನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಎಷ್ಟೇ ಜಾಗೃತಿ ಮೂಡಿಸಿದರೂ ಕಾಲುವೆಗಳಿಗೆ ತ್ಯಾಜ್ಯ ಮತ್ತು ಯುಜಿಡಿ ನೀರು ಬಿಡುವುದು ನಿಂತಿಲ್ಲ. ಹಾಗಾಗಿ ಪೊಲೀಸ್ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿ ಸೇರಿದಂತೆ ವಿವಿಧ ಇಲಾಖೆಗಳನ್ನು ಒಗ್ಗೂಡಿಸಿ ಗ್ರೀನ್ ಸ್ಕ್ವಾಡ್ ರಚಿಸಲು ತೀರ್ಮಾನಿಸಿದ್ದೇವೆ. ಕಾಲುವೆಗೆ ಕಸ ಎಸೆಯುವವರ ವಿರುದ್ಧ ನಿರಂತರ ಗಸ್ತು ಮತ್ತು ಸಿಸಿಟಿವಿ ಮೂಲಕ ಕಣ್ಣಿಟ್ಟು, ಸ್ಥಳದಲ್ಲೇ ಭಾರೀ ದಂಡ ಹಾಗೂ ಕಾನೂನು ಕ್ರಮ ಜರುಗಿಸಲಾಗುವುದು.

— ಮನೋಹರ್, ಯೋಜನಾ ನಿರ್ದೇಶಕ, ಜಿಲ್ಲಾ ನಗರಾಭಿವೃದ್ಧಿ ಕೋಶ, ವಿಜಯನಗರ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net