

ಪ್ರಮುಖ ಮುಖ್ಯಾಂಶಗಳು
ಹೊಸಪೇಟೆ: ಹಂಪಿಯ ಐತಿಹಾಸಿಕ ಮತ್ತು ಸಾಂಸ್ಕೃತಿಕ ಪರಿಸರದಲ್ಲಿ ನೆಲೆಸಿರುವ ಕನ್ನಡ ವಿವಿ ತನ್ನ ವಿಶಿಷ್ಟವಾದ ದೇಸಿ ಸಂಶೋಧನೆ ಮೂಲಕ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯುತ್ತಿದೆ ಎಂದು ರಾಜ್ಯಪಾಲ ಥಾವರಚಂದ್ ಗೆಹಲೋತ್ ಹೇಳಿದರು.
ಕನ್ನಡ ವಿವಿಯಲ್ಲಿ ಮಂಗಳವಾರ ನಡೆದ 34ನೇ ನುಡಿಹಬ್ಬದಲ್ಲಿ ಗೌರವ ನಾಡೋಜ ಪದವಿ ಪ್ರದಾನ ಮಾಡಿದ ನಂತರ ಮಾತನಾಡಿದರು.
ವಿಕಸಿತ ಭಾರತದಲ್ಲಿ ಯುವಕರು ಸದೃಢವಾಗಿ ಬೆಳೆಯಬೇಕು. ಪದವಿಗಳನ್ನು ಪಡೆದು ಮನೆಯಲ್ಲಿ ಉಳಿಯದೇ ಬಲಿಷ್ಠ ಭಾರತದ ನಿರ್ಮಾಣಕ್ಕೆ ಸಹಕಾರಿ ಆಗಬೇಕು. ಆಗ ಮಾತ್ರ ಕಷ್ಟಪಟ್ಟು ಪಡೆದ ಪದವಿಗೆ ಗೌರವ ಸಿಗಲಿದೆ ಎಂದು ವಿದ್ಯಾರ್ಥಿಗಳಿಗೆ ಕವಿಮಾತು ಹೇಳಿದರು.
ಕನ್ನಡ ವಿವಿಯಲ್ಲಿ ನಾಲ್ಕು ನಿಕಾಯಗಳು ಹಾಗೂ 19 ಅಧ್ಯಯನ ವಿಭಾಗಗಳ ಮೂಲಕ ಜ್ಞಾನದ ವಿಸ್ತರಣೆ ಮಾಡುತ್ತಿದೆ. ಇಲ್ಲಿನ ಹಸ್ತಪ್ರತಿ ಭಂಡಾರದಲ್ಲಿರುವ ಸುಮಾರು ಐದು ಸಾವಿರ ಅಪರೂಪದ ಹಸ್ತಪ್ರತಿಗಳು ನಮ್ಮ ಸಂಸ್ಕೃತಿಯ ಅಸ್ಮಿತೆಯಾಗಿವೆ.
ಬುಡಕಟ್ಟು ಅಧ್ಯಯನ ವಿಭಾಗವು ಸಂಗ್ರಹಿಸಿರುವ ವಿಶಿಷ್ಟ ಮಹಾಕಾವ್ಯಗಳು ನಮ್ಮ ದೇಸಿ ಪರಂಪರೆಯನ್ನು ಮುಂದಿನ ಪೀಳಿಗೆಗೆ ದಾಟಿಸುವಲ್ಲಿ ಯಶಸ್ವಿಯಾಗಿವೆ. ಪ್ರಸಾರಾಂಗವು ಕನ್ನಡದ ಜತೆಗೆ ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಪುಸ್ತಕಗಳನ್ನು ಪ್ರಕಟಿಸುತ್ತಿರುವುದು ಶ್ಲಾಘನೀಯ.
ಕನ್ನಡದ ಜ್ಞಾನವು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟಕ್ಕೆ ತಲುಪಲು ಇಂತಹ ಅನುವಾದಿತ ಪ್ರಕಟಣೆಗಳು ಹೆಚ್ಚಾಗಬೇಕು. ವಿವಿ ಐದು ಗ್ರಾಮಗಳನ್ನು ದತ್ತು ಪಡೆದು ಶೈಕ್ಷಣಿಕ ಚಟುವಟಿಕೆಗಳನ್ನು ಗ್ರಾಮೀಣ ಮಟ್ಟಕ್ಕೆ ಕೊಂಡೊಯ್ದಿರುವುದು ಮತ್ತು ಸಮುದಾಯ ಬಾನುಲಿ ಕೇಂದ್ರದ ಮೂಲಕ ಸಾಮಾಜಿಕ ಬದಲಾವಣೆಗೆ ಮುಂದಾಗಿರುವುದು ಆದರ್ಶಪ್ರಾಯವಾಗಿದೆ.
ಸಾಂಪ್ರದಾಯಿಕ ಶೈಲಿಯಲ್ಲಿ ನುಡಿಹಬ್ಬದ ಪರಂಪರೆಯು ಅತ್ಯಂತ ಆಕರ್ಷಕ ಮತ್ತು ಸ್ಮರಣೀಯವಾಗಿದೆ. ವಿವಿ ಆವರಣದ ವಾಸ್ತುಶಿಲ್ಪ, ಗಿರಿಸೀಮೆ ಮತ್ತು ವಸ್ತುಸಂಗ್ರಹಾಲಯಗಳು ಹಂಪಿಯ ಇತಿಹಾಸವನ್ನು ಮರುಸೃಷ್ಟಿಸುತ್ತಿವೆ. ಇಲ್ಲಿನ ವಸ್ತುಸಂಗ್ರಹಾಲಯವನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ಅಗತ್ಯವಿದೆ ಎಂದರು.