ಹರಪನಹಳ್ಳಿ: ರೈತರು, ಕಾರ್ಮಿಕರ ವಿರೋಧಿ ನೀತಿಗಳನ್ನು ಜಾರಿಗೊಳಿಸುವ ಮೂಲಕ ಕೇಂದ್ರ ಸರ್ಕಾರ ದೇಶದ ಸಂಪತ್ತನ್ನು ಲೂಟಿ ಹೊಡೆಯುತ್ತಿದೆ ಎಂದು ಸಿಪಿಐಎಂಎಲ್ ಸ್ಥಾಯಿ ಸಮಿತಿ ಸದಸ್ಯ ಪಿ.ಆರ್.ಎಸ್ ಮಣಿ ಆರೋಪಿಸಿದರು.
ಸರ್ಕಾರಿ ನೌಕರರ ಭವನದಲ್ಲಿ ಸಿಪಿಐಎಂಎಲ್ 4ನೇ ಜಿಲ್ಲಾ ಸಮ್ಮೇಳನದಲ್ಲಿ ಭಾನುವಾರ ಮಾತನಾಡಿದರು. ಕಾರ್ಪೋರೇಟ್ ಕೋಮುವಾದವನ್ನು ಹಿಮ್ಮೆಟ್ಟಿಸಲು ನಾಗರೀಕರು ಸಂಘಟಿತರಾಗಬೇಕೆಂದು ಕರೆ ನೀಡಿದರು.
ರಾಜ್ಯ ಸಮಿತಿ ಸದಸ್ಯ ನಾಗರಾಜ್ ಪೂಜಾರ್ ಮಾತನಾಡಿ, ತೆರಿಗೆ ಹೊರೆಯನ್ನು ದುಡಿಯುವ ವರ್ಗದ ಮೇಲೆ ಹೇರಿ ಬಂಡವಾಳಶಾಹಿಗಳಿಗೆ ತೆರಿಗೆಯಲ್ಲಿ ವಿನಾಯಿತಿ ನೀಡುವ ಕೆಲಸವಾಗುತ್ತಿದೆ. ರೈತ ಹಾಗೂ ಕಾರ್ಮಿಕ ವಿರೋಧಿ ನೀತಿಗಳಿಂದ ಬಡವರು ಬೀದಿಗೆ ಬೀಳುವಂತಾಗಿದೆ. ಅಗತ್ಯ ವಸ್ತುಗಳನ್ನು ಖರೀದಿಸಲು ಆಗದಂತಹ ಪರಿಸ್ಥಿತಿ ಎದುರಾಗಿದೆ. ಜನರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಹೋರಾಟ ಮಾಡುವ ಸಂಘಟನೆಗಳ ಮೇಲೆ ಸರ್ಕಾರ ದಬ್ಬಾಳಿಕೆ ನಡೆಸುತ್ತಿದೆ. ಇದರಿಂದ ಪ್ರಜಾತಂತ್ರದ ಮೌಲ್ಯಗಳನ್ನು ಗಾಳಿಗೆ ತೂರಿದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾ ಸಮಿತಿಗೆ 16 ಜನ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಜಿಲ್ಲಾ ಕಾರ್ಯದರ್ಶಿ ಸಂದೇರ ಪರಶುರಾಮ್, ಮೋಹನ್, ಕೃಷ್ಣ ಯಾದವ್, ಮೊಹಮ್ಮದ್ ರಫೀಕ್, ಬಾಬು ಬಾಣಗೆರೆ, ಅಜ್ಜಪ್ಪ, ಟಿ.ದೊಡ್ಡಬಸಪ್ಪ, ಬಾಲಗಂಗಾಧರ ಇತರರಿದ್ದರು.