ಸರ್ಕಾರಿ ಬಸ್‌ಗಳು ಫುಲ್ ರಷ್!

ಹೊಸಪೇಟೆ ಎಸ್ ನಿಲ್ದಾಣದಲ್ಲಿ ಬಸ್ ಹತ್ತಲು ಪರದಾಡುತ್ತಿರುವ ಸಾರ್ವಜನಿಕರು.
ಹೊಸಪೇಟೆ ಎಸ್ ನಿಲ್ದಾಣದಲ್ಲಿ ಬಸ್ ಹತ್ತಲು ಪರದಾಡುತ್ತಿರುವ ಸಾರ್ವಜನಿಕರು.
Published on

ಪ್ರಮುಖ ಮುಖ್ಯಾಂಶಗಳು

  • ಪ್ರಯಾಣಿಕರ ಪರದಾಟ
  • ಸೀಟು ಹಿಡಿಯಲು ನೂಕುನುಗ್ಗಲು
ಹೊಸಪೇಟೆ: ಮದುವೆ-ಮುಹೂರ್ತಗಳ ಸಾಲು, ಶಾಲಾ-ಕಾಲೇಜು ರಜೆ ಹಾಗೂ ಮಹಿಳೆಯರ ಉಚಿತ ಪ್ರಯಾಣದ ಶಕ್ತಿ ಯೋಜನೆ ಹಿನ್ನೆಲೆಯಲ್ಲಿ ಸಾರಿಗೆ ಬಸ್‌ಗಳ ಕೊರತೆ ಎದುರಾಗಿದ್ದು, ಪ್ರಯಾಣಿಕರು ಸುಖಕರ ಪ್ರಯಾಣಕ್ಕಾಗಿ ಪರದಾಡುವಂತಾಗಿದೆ.
ಶಕ್ತಿ ಯೋಜನೆ ಜಾರಿ ಬಳಿಕ ಬಸ್‌ಗಳ ವೇಳಾಪಟ್ಟಿಯಲ್ಲಿ ಬದಲಾವಣೆ ಹಾಗೂ ಮಾರ್ಗಗಳ ಸಂಚಾರ ಮೊಟಕುಗೊಳಿಸುವ ಪ್ರಕ್ರಿಯೆ ನಡೆದಿದೆ. ಅದರಲ್ಲೂ ಈಗ ಮದುವೆ, ನಿಶ್ಚಿತಾರ್ಥ ಹಾಗೂ ರಜೆಗಳ ಕಾರಣದಿಂದ ಗಣನೀಯ ಸಂಖ್ಯೆ ಪ್ರಯಾಣಿಕರು ನಿಲ್ದಾಣಗಳಲ್ಲಿ ಜಮಾಯಿಸುತ್ತಿದ್ದಾರೆ. ತಾಸುಗಟ್ಟಲೆ ನಿಂತರೂ ಬಂದ ಬಸ್ ಕ್ಷಣಾರ್ಧದಲ್ಲಿಯೇ ಭರ್ತಿಯಾಗುತ್ತಿದೆ. ಟಿಕೆಟ್ ವಿತರಣೆಗಾಗಿ ಮಾರ್ಗಮಧ್ಯೆ ಬಸ್ ನಿಲ್ಲಿಸಿ ಮುಂದೆ ಸಂಚರಿಸುವಷ್ಟರಲ್ಲಿ ಸಮಯ ಪಾಲನೆ ಕೂಡ ಸಾಧ್ಯವಾಗುತ್ತಿಲ್ಲ. ಇದರಿಂದ ಮಹಿಳೆಯರು, ಮಕ್ಕಳು ಹಾಗೂ ವೃದ್ಧರ ಗೋಳು ಹೇಳತೀರದಾಗಿದೆ.
ಹೊಸಪೇಟೆ ಕೇಂದ್ರ ಬಸ್ ನಿಲ್ದಾಣವು ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಬೀದರ್, ಕಲಬುರಗಿ, ಮಂಗಳೂರು, ಧರ್ಮಸ್ಥಳ ಸೇರಿದಂತೆ ರಾಜ್ಯದ ನಾನಾ ಭಾಗಗಳಿಗೆ ಹಾಗೂ ಅಂತರರಾಜ್ಯ ಸಂಪರ್ಕಕ್ಕೆ ಕೇಂದ್ರಸ್ಥಾನವಾಗಿದೆ. ಜಿಲ್ಲೆಯಲ್ಲಿ ಸ್ಥಳೀಯವಾಗಿ ಸಂಚರಿಸಲು 480 ಬಸ್ ಗಳಿವೆ. ಅನ್ಯ ಜಿಲ್ಲೆಗಳಿಂದ ನೂರಾರು ಬಸ್‌ಗಳು ಇಲ್ಲಿ ಸಂಚರಿಸುತ್ತವೆ. ಎಲ್ಲ ಬಸ್‌ಗಳು ಸೇರಿದರೆ ಅಂದಾಜು 1,200 ಬಸ್‌ಗಳು ಜಿಲ್ಲೆಯಲ್ಲಿ ಕಾರ್ಯಾಚರಣೆ ನಡೆಸುತ್ತವೆ. ಆದರೂ ಪ್ರಯಾಣಿಕರ ದಟ್ಟಣಿಗೆ ಇವು ಸಾಕಾಗುತ್ತಿಲ್ಲ. ಅದರಲ್ಲೂ ಮದುವೆಗಳಿಗೆ ತೆರಳಲು ಮಹಿಳಾ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತಿದ್ದಾರೆ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಯ ಲಾಭವನ್ನು ಸಂಪೂರ್ಣವಾಗಿ ಬಳಸಿಕೊಳ್ಳುತ್ತಿರುವ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಶುಭಕಾರ್ಯಗಳಿಗೆ ತೆರಳುತ್ತಿರುವು ದರಿಂದ ದಟ್ಟಣೆ ನಿರ್ವಹಣೆ ಮಾಡುವುದು ಕಠಿಣವಾಗಿದೆ ಎನ್ನುತ್ತಾರೆ ಅಧಿಕಾರಿಗಳು.

ಶೇ.80 ಸ್ತ್ರೀಯರು ಸಂಚಾರ

ಪ್ರಯಾಣಿಕರಲ್ಲಿ ಶೇ. 80 ಮಹಿಳೆಯರಿದ್ದರೆ, ಶೇ.20 ಪುರುಷರಿದ್ದಾರೆ. ಬಸ್‌ಗಳಲ್ಲಿ ಪುರುಷರು, ಮಹಿಳೆಯರು, ವಿದ್ಯಾರ್ಥಿಗಳು ಹೀಗೆ ಎಲ್ಲರ ಸಂಖ್ಯೆಯೂ ಏರಿಕೆಯಾಗಿದೆ. ಮದುವೆ, ದೇಗುಲ, ಧಾರ್ಮಿಕ ಕೇಂದ್ರ ಹಾಗೂ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಮಹಿಳೆಯರ ಕನಸಿಗೆ ಶಕ್ತಿ ಯೋಜನೆ ಬಲ ತುಂಬಿದೆ. ಇದರಿಂದ ಕುಟುಂಬ ಸಮೇತ ಸರ್ಕಾರಿ ಬಸ್‌ನಲ್ಲಿ ಪ್ರಯಾಣಿಸುವವರ ಸಂಖ್ಯೆ ಹೆಚ್ಚಿದೆ. ಈ ಹಿಂದೆ 2-3 ಕಿ.ಮೀ. ನಡೆದುಕೊಂಡೇ ಹೋಗುತ್ತಿದ್ದ ಮಹಿಳಾ ಕೂಲಿ ಕಾರ್ಮಿಕರು ಹಾಗೂ ಗಾರ್ಮೆಂಟ ನೌಕರರು ಈಗ ಬಸ್‌ಗಳಲ್ಲೇ ಸಂಚರಿಸುತ್ತಿರುವುದು ಪ್ರಯಾಣಿಕರ ಸಂಖ್ಯೆ ಹೆಚ್ಚಾಗಲು ಪ್ರಮುಖ ಕಾರಣವಾಗಿದೆ.

ಕಾಯುವುದೇ ಕಾಯಕ

ಪ್ರಸ್ತುತ ಜಿಲ್ಲೆಯಲ್ಲಿ 480 ಬಸ್‌ಗಳಿವೆ. ಹೊರಜಿಲ್ಲೆಯ ನೂರಾರು ಬಸ್‌ಗಳಿದ್ದರೂ ಪ್ರಯಾಣಿಕರ ಸಂಖ್ಯೆ ಮಿತಿ ಮೀರಿದೆ. ಹೆಚ್ಚಿದ ಜನಸಂಖ್ಯೆಗೆ ತಕ್ಕಂತೆ ಬಸ್ ಗಳನ್ನು ಓಡಿಸದ ಕಾರಣ, ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಿಂದ ಗ್ರಾಮಗಳಿಗೆ ತೆರಳುವ ಪ್ರಯಾಣಿಕರು ಬಸ್ ಹತ್ತಲು ಹರಸಾಹಸ ಪಡುತ್ತಿದ್ದಾರೆ. ಬಹುತೇಕ ಬಸ್‌ಗಳು ಕೇಂದ್ರ ನಿಲ್ದಾಣಗಳಲ್ಲೇ ಭರ್ತಿಯಾಗುತ್ತಿದ್ದು, ಹೆಚ್ಚುವರಿ ಜನರು ನಿಂತುಕೊಂಡೇ ಪ್ರಯಾಣಿಸುತ್ತಿದ್ದಾರೆ. ಇನ್ನು ರಸ್ತೆ ಮಧ್ಯೆ ಇರುವ ಗ್ರಾಮಗಳಲ್ಲಿ ಬಸ್‌ಗಳು ನಿಲ್ಲಿಸದೆ ಹೋಗುತ್ತಿವೆ. ಇದರಿಂದ ಅನಿವಾರ್ಯವಾಗಿ ಕೆಲವರು ಬಸ್‌ಗಳನ್ನು ಅಡ್ಡಗಟ್ಟಿ ಹತ್ತುತ್ತಿದ್ದರೆ, ಇನ್ನು ಹಲವರು ಭರ್ತಿಯಾದ ಬಸ್‌ಗಳನ್ನು ಹತ್ತಲಾಗದೆ ಗಂಟೆಗಟ್ಟಲೆ ಕಾಯುವುದು ಅನಿವಾರ್ಯವಾಗಿದೆ.
"

ಮದುವೆಗಳು ಇರುವುದರಿಂದ ಕೆಲವು ಬಸ್‌ಗಳು ಮುಂಗಡ ಕಾಯ್ದಿರಿಸಿ ಬಿಡಲಾಗಿದೆ. ಯಾವುದೇ ಬಸ್‌ಗಳು ಖಾಲಿ ಇದ್ದರೂ ಅವುಗಳನ್ನು ಓಡಿಸಲಾಗುತ್ತಿದೆ. ಆದರೂ ಕೂಡಾ ದಟ್ಟಣೆ ಕಡಿಮೆಯಾಗಿಲ್ಲ. ಡಿಪೋದಿಂದ ನಿಲ್ದಾಣಕ್ಕೆ ಬರುವಷ್ಟರಲ್ಲಿ ಬಸ್‌ಗಳಲ್ಲಿ ಹತ್ತುವಷ್ಟು ಪ್ರಯಾಣಿಕರು ಜಮೆ ಆಗುತ್ತಾರೆ. ಆದರೂ, ನಿರ್ವಹಣೆ ಮಾಡಲಾಗುತ್ತಿದೆ.

— ರಾಜೇಶ್ ಹುದ್ದಾರ್ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ, ಹೊಸಪೇಟೆ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net