ಜಿಲ್ಲಾಧಿಕಾರಿ ಕಚೇರಿ ಮುಂದೆ ಅಂಗನವಾಡಿ ನೌಕರರಿಂದ ಕರಾಳ ದಿನಾಚರಣೆ
ಹೊಸಪೇಟೆ: ಐಸಿಡಿಎಸ್ ಯೋಜನೆ ಬಲವರ್ಧನೆ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಅಂಗನವಾಡಿ ನೌಕರರ ಸಂಘದ (ಸಿಐಟಿಯು) ನೇತೃತ್ವದಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಬುಧವಾರ ಕರಾಳ ದಿನ ಆಚರಿಸಲಾಯಿತು.
ಕೇಂದ್ರ ಸರ್ಕಾರವು ಐಸಿಡಿಎಸ್ ಯೋಜನೆಗೆ ನೀಡುತ್ತಿದ್ದ ಅನುದಾನವನ್ನು ನಿರಂತರವಾಗಿ ಕಡಿತಗೊಳಿಸುತ್ತಿದ್ದು, ರಾಷ್ಟ್ರೀಯ ಶಿಕ್ಷಣ ನೀತಿ (ಎನ್ ಇಪಿ) ನೆಪದಲ್ಲಿ 3 ರಿಂದ 6 ವರ್ಷದ ಮಕ್ಕಳನ್ನು ಅಂಗನವಾಡಿಗಳಿAದ ದೂರವಿಡಲಾಗುತ್ತಿದೆ ಎಂದು ಪ್ರತಿಭಟನಾಕಾರರು ದೂರಿದ್ದಾರೆ. ಗುಣಮಟ್ಟದ ಮೊಬೈಲ್ ಹಾಗೂ ಫೈಜಿ ಇಂಟರ್ನೆಟ್ ನೀಡದೇ ಪೋಷಣ್ ಟ್ರ‍್ಯಾಕರ್, ಎಫ್ ಆರ್ ಎಸ್, ಇ-ಕೆವೈಸಿ ನಂತಹ ಆನ್‌ಲೈನ್ ಕೆಲಸಗಳನ್ನು ಮಾಡುವಂತೆ ತೀವ್ರ ಒತ್ತಡ ಹೇರಲಾಗುತ್ತಿದೆ. ಜತೆಗೆ ಬಿಎಲ್ ಒ ಹಾಗೂ ಜನಗಣತಿಯಂತಹ ಇಲಾಖೇತರ ಹೆಚ್ಚುವರಿ ಕೆಲಸಗಳಿಂದ ತಮಗೆ ಮುಕ್ತಿ ನೀಡಬೇಕೆಂದು ಅವರು ಆಗ್ರಹಿಸಿದರು.
ಚುನಾವಣಾ ಭರವಸೆಯಂತೆ ಕಾರ್ಯಕರ್ತೆಯರಿಗೆ 15 ಸಾವಿರ ರೂ ಹಾಗೂ ಸಹಾಯಕಿಯರಿಗೆ 10 ಸಾವಿರ ರೂ. ವೇತನ ಹೆಚ್ಚಳವನ್ನು ತಕ್ಷಣ ಜಾರಿಗೊಳಿಸಬೇಕು.
ಎಲ್ಲಾ 10 ಸಾವಿರ ಕೇಂದ್ರಗಳಲ್ಲಿ ಎಲ್‌ಕೆಜಿ-ಯುಕೆಜಿ ಪ್ರಾರಂಭಿಸಲು ಸೂಕ್ತ ಅನುದಾನ ಬಿಡುಗಡೆ ಮಾಡಬೇಕು. ಅಂಗನವಾಡಿ ನೌಕರರನ್ನು ಕಾರ್ಮಿಕರೆಂದು ಪರಿಗಣಿಸಿ, ಕಾರ್ಯಕರ್ತೆಯರಿಗೆ 41 ಸಾವಿರ ರೂ. ಹಾಗೂ ಸಹಾಯಕಿಯರಿಗೆ 35 ಸಾವಿರ ರೂ. ಕನಿಷ್ಠ ವೇತನ ಮತ್ತು 18 ಸಾವಿರ ರೂ. ಮಾಸಿಕ ಪಿಂಚಣಿ ನೀಡಬೇಕು. ಡಿಜಿಟಲ್ ಕೆಲಸಕ್ಕಾಗಿ ಉತ್ತಮ ಗುಣಮಟ್ಟದ ಟ್ಯಾಬ್ಲೆಟ್ ಹಾಗೂ ಡೇಟಾ ಪ್ಯಾಕ್ ಒದಗಿಸಬೇಕು. ಕೇಂದ್ರಗಳಿಗೆ ಮಾರುಕಟ್ಟೆ ದರಕ್ಕೆ ಅನುಗುಣವಾಗಿ ಬಾಡಿಗೆ ಹೆಚ್ಚಿಸಬೇಕು.
45ನೇ ಭಾರತೀಯ ಕಾರ್ಮಿಕ ಸಮ್ಮೇಳನದ ಶಿಫಾರಸುಗಳನ್ನು ಜಾರಿಗೊಳಿಸಿ, ಸಾಮಾಜಿಕ ಭದ್ರತೆ ಒದಗಿಸುವವರೆಗೆ ತಮ್ಮ ಹೋರಾಟ ಮುಂದುವರಿಯಲಿದೆ ಎಂದು ಸಿಐಟಿಯು ಸಂಘಟನೆಯ ಪದಾಧಿಕಾರಿಗಳು ಎಚ್ಚರಿಸಿದ್ದಾರೆ.