ಕೆಪಿಎಸ್‌ಸಿ ಅಕ್ರಮದಲ್ಲಿ ಮತ್ತಷ್ಟು ವಿಕೆಟ್ ಪತನ ಖಚಿತ

ಆರ್.ಅಶೋಕ್
ಆರ್.ಅಶೋಕ್
Published on

ಪ್ರಮುಖ ಮುಖ್ಯಾಂಶಗಳು

  • ಸರ್ಕಾರಕ್ಕೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಖಡಕ್ ಎಚ್ಚರಿಕೆ
ಹೊಸಪೇಟೆ: ವಾಲ್ಮೀಕಿ ನಿಗಮದ ಹಗರಣ, ರಾಜ್ಯದ ಬರ ಪರಿಸ್ಥಿತಿ ಹಾಗೂ ಕೆಪಿಎಸ್‌ಸಿ ಅಕ್ರಮಗಳನ್ನು ಖಂಡಿಸಿ ಸರ್ಕಾರದ ವಿರುದ್ಧ ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ತಿಳಿಸಿದ್ದಾರೆ.
ನಗರದಲ್ಲಿ ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಾದಯಾತ್ರೆಗೆ ಚಾಲನೆ ನೀಡಲು ಆಗಮಿಸಿದ್ದೇನೆ. ಚಾಲನೆ ನೀಡಿದ ಬಳಿಕ ನನಗೆ ಸಣ್ಣ ಶಸ್ತ್ರಚಿಕಿತ್ಸೆ ಇರುವುದರಿಂದ, ಅದನ್ನು ಮುಗಿಸಿಕೊಂಡು ಮತ್ತೆ ಪಾದಯಾತ್ರೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವೆ. ಪಾದಯಾತ್ರೆಯಲ್ಲಿ ಜೆಡಿಎಸ್ ಭಾಗವಹಿಸುವ ವಿಚಾರವಾಗಿ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಚರ್ಚಿಸುತ್ತೇನೆ. ಎನ್‌ಡಿಎ ಮೈತ್ರಿಕೂಟದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದು ಸ್ಪಷ್ಟಪಡಿಸಿದರು.
ವಾಲ್ಮೀಕಿ ನಿಗಮದ ಅಕ್ರಮದ ಕುರಿತು ಮಾತನಾಡಿದ ಅವರು, ಸದನದಲ್ಲಿ ನಾವು ನಡೆಸಿದ ನಿರಂತರ ಹೋರಾಟದ ಫಲವಾಗಿಯೇ ಮಾಜಿ ಸಚಿವ ನಾಗೇಂದ್ರ ರಾಜೀನಾಮೆ ನೀಡಿದ್ದಾರೆ. ಬಡವರ ಹಣ ಅವರಿಗೆ ಮರಳುವವರೆಗೂ ನಮ್ಮ ಹೋರಾಟ ನಿಲ್ಲದು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ನಾಯಕರು ಎಷ್ಟೇ ಸುದ್ದಿಗೋಷ್ಠಿಗಳನ್ನು ನಡೆಸಿದರೂ, ದಲಿತರ ಹಣ ದುರುಪಯೋಗವಾಗಿರುವುದಕ್ಕೆ ಜನರಿಗೆ ಉತ್ತರಿಸಲೇಬೇಕು ಎಂದರು.
ಕೆಪಿಎಸ್‌ಸಿ ಹಗರಣವನ್ನು ತಾವೇ ಮೊದಲು ಬಯಲಿಗೆಳೆದಿದ್ದಾಗಿ ತಿಳಿಸಿದ ಅವರು, ಕೇವಲ ಐಎಎಸ್ ಅಧಿಕಾರಿಯನ್ನು ಬಂಧಿಸಿದರೆ ಸಾಲದು. ಕೆಪಿಎಸ್‌ಸಿ ಅಧ್ಯಕ್ಷರ ಪ್ರಭಾವ ಬಳಸಿದ ಪ್ರತಿಯೊಬ್ಬರನ್ನೂ ಮುಲಾಜಿಲ್ಲದೆ ತನಿಖೆಗೆ ಒಳಪಡಿಸಿ ಬಂಧಿಸಬೇಕು. ವಾಲ್ಮೀಕಿ ಹಗರಣದಲ್ಲಿ ಈಗಾಗಲೇ ಒಂದು ವಿಕೆಟ್ ಬಿದ್ದಿದ್ದು, ಕೆಪಿಎಸ್‌ಸಿ ಹಗರಣದಲ್ಲಿ ಪ್ರಿಯಾಂಕ್ ಖರ್ಗೆ ಸೇರಿದಂತೆ ಮತ್ತಷ್ಟು ವಿಕೆಟ್‌ಗಳು ಪತನಗೊಳ್ಳುವುದು ಖಚಿತ ಎಂದು ಎಚ್ಚರಿಸಿದರು.
ಇದೇ ವೇಳೆ ಶಾಸಕ ಬಸವರಾಜ್ ರಾಯರೆಡ್ಡಿ ಒಂದು ಧರ್ಮದ ಓಲೈಕೆ ಮಾಡುತ್ತಿದ್ದು, ಸಚಿವ ಸಂಪುಟದಲ್ಲಿರಲು ಅವರಿಗೆ ಯಾವುದೇ ಅರ್ಹತೆಯಿಲ್ಲ. ಕಾಂಗ್ರೆಸ್ ಕೂಡಲೇ ಅವರ ರಾಜೀನಾಮೆ ಪಡೆಯಬೇಕು ಎಂದು ಅವರು ಆಗ್ರಹಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net