ವಿದ್ಯುತ್ ಖಾಸಗೀಕರಣ ರೈತರಿಗೆ ಮರಣಶಾಸನ

ಜೆ.ಎಂ.ವೀರಸಂಗಯ್ಯ
ಜೆ.ಎಂ.ವೀರಸಂಗಯ್ಯ
Published on
* ರಾಜ್ಯ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಜೆ.ಎಂ. ವೀರಸಂಗಯ್ಯ
* ನ.30ಕ್ಕೆ ಹಗರಿಬೊಮ್ಮನಹಳ್ಳಿಯಲ್ಲಿ ಬೃಹತ್ ಹೋರಾಟ
ಹಗರಿಬೊಮ್ಮನಹಳ್ಳಿ: ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಸಿ, ಪ್ರಿ-ಪೇಡ್ ವಿದ್ಯುತ್ ವಿತರಣೆ ಮಾಡಲು ಸರ್ಕಾರಗಳು ಮುಂದಾಗಿವೆ. ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣಗೊಳಿಸುವ ದುರುದ್ದೇಶ ಹೊಂದಿರುವ ಸರ್ಕಾರಗಳ ಈ ನಿಲುವು ಸರಿಯಲ್ಲ ಎಂದು ರಾಜ್ಯ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಜೆ.ಎಂ. ವೀರಸಂಗಯ್ಯ ಹೇಳಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸ್ಮಾರ್ಟ್ ಮೀಟರ್ ಅಳವಡಿಕೆ ಮತ್ತು ಪ್ರಿ-ಪೇಡ್ ವಿದ್ಯುತ್ ವಿತರಣೆ ವಿರೋಧಿಸಿ ಹಾಗೂ ತಿದ್ದುಪಡಿ ಮಸೂದೆ ಹಿಂಪಡೆಯಲು ಆಗ್ರಹಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು. ಇದರ ಭಾಗವಾಗಿ ನ.30ರಂದು ಪಟ್ಟಣದಲ್ಲಿ ಬೃಹತ್ ಮಟ್ಟದ ರಾಜ್ಯಮಟ್ಟದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.
2014ರಿಂದಲೂ ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣಗೊಳಿಸುವ ಪ್ರಯತ್ನ ನಿರಂತರ ನಡೆದಿದೆ. ಚುನಾವಣೆ ವೇಳೆ ರೈತರ ಪರ ಧ್ವನಿ ಎತ್ತುವ ನೆಪದಲ್ಲಿ ಮತ ಗಳಿಸುವ ರಾಜಕೀಯ ಪಕ್ಷಗಳು, ಅಧಿಕಾರಕ್ಕೆ ಬಂದ ಮೇಲೆ ಮರೆಯುತ್ತಿವೆ. ವಿದ್ಯುತ್ ಸಂಪರ್ಕಗಳ ಅಕ್ರಮ-ಸಕ್ರಮಕ್ಕಾಗಿ ರೈತರೇ 1.50 ಲಕ್ಷ ರೂ. ಭರಿಸಬೇಕು ಎಂದು ಹೇಳಿಕೆ ನೀಡಿ ಅನ್ನದಾತರನ್ನು ತೀವ್ರ ಗೊಂದಲಕ್ಕೆ ದೂಡಲಾಗಿದೆ ಎಂದು ಕಿಡಿಕಾರಿದರು.'
ವಿದ್ಯುತ್ ಖಾಸಗೀಕರಣದ ಹುನ್ನಾರದಿಂದಾಗಿ ಮುಂದಿನ ದಿನಗಳಲ್ಲಿ ದರ ಭಾರಿ ಪ್ರಮಾಣದಲ್ಲಿ ಏರಿಕೆಯಾಗಲಿದೆ. ಇದರಿಂದ ಬಡವರು ಮತ್ತು ಗ್ರಾಮೀಣ ಬಳಕೆದಾರರಿಗೆ ಹೊರೆಯಾಗುವುದಲ್ಲದೆ, ವಿದ್ಯುತ್ ಅವಲಂಬಿತ ಉತ್ಪಾದನಾ ವಲಯದ ಕೈಗಾರಿಕೆಗಳಿಗೂ ಹಿನ್ನಡೆಯಾಗಲಿದೆ. ರಾಜ್ಯದಲ್ಲಿ 92 ವಿಧದ ಬೆಳೆಗಳಿಗೆ ಪೂರಕವಾಗಿರುವ 45 ಲಕ್ಷ ಕೃಷಿ ಪಂಪ್‌ಸೆಟ್‌ಗಳು ಸ್ಥಗಿತಗೊಳ್ಳುವ ಸಾಧ್ಯತೆಯಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಪ್ರಿ-ಪೇಡ್ ಪದ್ಧತಿಯು ಬಡವರು ಮತ್ತು ಕೃಷಿಕರ ಪಾಲಿಗೆ ಕರಾಳಕೂಪವಾಗಿದೆ. ಸ್ಮಾರ್ಟ್‌ಮೀಟರ್ ಅಳವಡಿಕೆ ಸದ್ಯಕ್ಕೆ ಗೃಹ, ವಾಣಿಜ್ಯ ಮತ್ತು ಕೈಗಾರಿಕಾ ಕ್ಷೇತ್ರಗಳಿಗೆ ಮಾತ್ರ ಅನ್ವಯವಾಗುತ್ತಿದ್ದು, ಒಂದು ವೇಳೆ ಇದು ಕೃಷಿ ಕ್ಷೇತ್ರಕ್ಕೂ ವಿಸ್ತರಣೆಯಾದರೆ ರೈತರ ಪಾಲಿಗೆ ಮರಣಶಾಸನವಾಗಲಿದೆ. ಕಳೆದ ಹಲವಾರು ವರ್ಷಗಳಿಂದ ಭಾಗ್ಯಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಸೌಲಭ್ಯ ಪಡೆಯುತ್ತಿರುವ ಬಡವರ ಬದುಕು ಇದರಿಂದ ಕತ್ತಲಾಗಲಿದೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net