ಕಂಪ್ಲಿಯಲ್ಲಿ ನೀರಿಗಾಗಿ ನಡೆದ ರೈತರ ಸಭೆಯಲ್ಲಿ ರೈತ ಸಂಘದ ಕಾರ್ಯಾಧ್ಯಕ್ಷ ಬಿ.ವಿ.ಗೌಡ ಮಾತನಾಡಿದರು. ಪ್ರಮುಖರಾದ ವಿ.ವೀರೇಶ್, ಕೊಟ್ಟೂರು ರಮೇಶ, ಎನ್.ತಿಮ್ಮಪ್ಪನಾಯಕ, ಇಟಗಿ ಶರಣಗೌಡ, ಗುತ್ತಿಗೆನೂರು ಶಿವಜಾತ ಇತರರಿದ್ದರು.
ಕೂಡಲೇ ಐಸಿಸಿ ಸಭೆ ಕರೆದು ಕಾಲುವೆಗಳಿಗೆ ನೀರು ಹರಿಸಬೇಕು. ಇಲ್ಲವೆ ಎಕರೆಗೆ 50 ಸಾವಿರ ರೂ. ಬರ ಪರಿಹಾರ ನೀಡುವಲ್ಲಿ ಸರ್ಕಾರ ಬದ್ಧತೆ ತೋರಬೇಕು ಎಂದು ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಬಿ.ವಿ. ಗೌಡ ಒತ್ತಾಯಿಸಿದರು.
ಸಾಂಗತ್ರಯ ಸಂಸ್ಕೃತ ಪಾಠಶಾಲೆಯಲ್ಲಿ ಶುಕ್ರವಾರ ನಡೆದ ನೀರಿಗಾಗಿ ರೈತರ ಸಂಘಟನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
ಜಲಾಶಯದಲ್ಲಿ ಸದ್ಯ 70ಟಿಎಂಸಿ ಅಡಿ ನೀರಿದೆ. ನೀರಿನ ಲಭ್ಯತೆ ಮೇರೆಗೆ ಬೆಳೆದು ನಿಂತ ಬೆಳೆಗೆ, ಎಲ್‌ಎಲ್‌ಸಿ, ಎಚ್‌ಎಲ್‌ಸಿ, ವಿಜಯನಗರ ಕಾಲುವೆಗಳು ಹಾಗೂ ನದಿಗೆ ನೀರು ಹರಿಸಬೇಕು. ಈಗಾಗಲೇ ಆ.7ರೊಳಗೆ ಐಸಿಸಿ ಸಭೆ ಕರೆದು ನೀರು ಹರಿಸುವಂತೆ ಮನವಿ ಸಲ್ಲಿಸಿದ್ದರೂ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿಲ್ಲ. ಮುನಿರಾಬಾದ್ ಕೇಂದ್ರ ಕಚೇರಿಯ ಅಧಿಕಾರಿಗಳು ರೈತರ ಬೆಳೆಗೆ ಸಕಾಲಕ್ಕೆ ನೀರು ಹರಿಸುವಲ್ಲಿ ವಿಫಲರಾಗಿದ್ದಾರೆ. ಇದೆಲ್ಲವನ್ನು ಖಂಡಿಸಿ, ಆ.11ರಂದು ಮುನಿರಾಬಾದ್‌ನ ಮುಖ್ಯಕಚೇರಿಗೆ ಮುತ್ತಿಗೆ ಹಾಕಲು ಕಂಪ್ಲಿಯ ಸಾಂಗತ್ರಯ ಸಂಸ್ಕೃತ ಪಾಠಶಾಲೆಯಿಂದ ಬೆಳಗ್ಗೆ 9ಗಂಟೆಗೆ ಬೈಕ್‌ರ‌್ಯಾಲಿ ಹಮ್ಮಿಕೊಳ್ಳಲಾಗಿದೆ. ತುಂಗಭದ್ರಾ ಅಚ್ಚುಕಟ್ಟು ರೈತರು ಹೆಚ್ಚಿನ ಸಂಖ್ಯೆಯಲ್ಲಿ ರ‌್ಯಾಲಿಯಲ್ಲಿ ಪಾಲ್ಗೊಳ್ಳಬೇಕು. ನೀರು ಬಿಡುವತನಕ ಪ್ರತಿಭಟನೆ ನಿಲ್ಲುವುದಿಲ್ಲ ಎಂದು ಎಚ್ಚರಿಸಿದರು.
ರೈತ ಸಂಘ ತಾಲೂಕು ಅಧ್ಯಕ್ಷ ವಿ.ವೀರೇಶ್, ಕಾರ್ಯಾಧ್ಯಕ್ಷ ಕೊಟ್ಟೂರು ರಮೇಶ, ನಗರ ಅಧ್ಯಕ್ಷ ಎನ್.ತಿಮ್ಮಪ್ಪನಾಯಕ, ಪದಾಧಿಕಾರಿಗಳಾದ ಇಟಗಿ ಶರಣಗೌಡ, ಗುತ್ತಿಗೆನೂರು ಶಿವಜಾತ, ಕಾಗೆ ಈರಣ್ಣ, ಜಿ.ಅಮರಗೌಡ, ರವಿಚಂದ್ರ ಕಂಠಂನೇನಿ, ವೆಂಕಟರಮಣ, ಪ್ರಕಾಶ, ಬಿ.ನಾಗರಾಜಗೌಡ, ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ರೈತರಿದ್ದರು.