ಕೊಟ್ಟೂರು:ರಾಜ್ಯದಲ್ಲಿ ಇತ್ತೀಚೆಗೆ ಮಾದಕ ವಸ್ತುಗಳ ಸೇವನೆ ಹೆಚ್ಚಾಗಿದ್ದು, ಈ ವ್ಯಸನ ಹಳ್ಳಿಗಳಿಗೂ ವ್ಯಾಪಿಸಿ ಯುವ ಸಮುದಾಯವನ್ನು ಹಾಳು ಮಾಡುತ್ತಿದೆ. ವಿದ್ಯಾರ್ಥಿಗಳು ಇದರಿಂದ ದೂರ ಇರಬೇಕು ಎಂದು ಸಿಪಿಐ ಡಿ.ದುರುಗಪ್ಪ ಹೇಳಿದರು.
ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಎನ್ನೆಸ್ಸೆಸ್ ಘಟಕ ಹಾಗೂ ಪೋಲಿಸ್ ಇಲಾಖೆ ಸಹಯೋಗದೊಂದಿಗೆ ಆಯೋಜಿಸಿದ್ದ ಮಾದಕ ವಸ್ತುಗಳ ವಿರೋಧಿ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು. ಮಾದಕ ವಸ್ತುಗಳ ನಿಯಂತ್ರಣಕ್ಕೆ ಪೋಲಿಸ್ ಇಲಾಖೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾದರೆ ಜೀವನ ಹಾಳಾಗುತ್ತದೆ. ಮಾದಕ ವಸ್ತುಗಳಿಂದ ದೂರವಿದ್ದು ಆರೋಗ್ಯಪೂರ್ಣ ಜೀವನ ನಡೆಸಬೇಕೆಂದು ತಿಳಿಸಿದರು.
ಮಾದಕ ವಸ್ತುಗಳು ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಿ ಸಮಾಜಘಾತಕ ವ್ಯಕ್ತಿಗಳನ್ನಾಗಿ ಮಾಡುತ್ತದೆ. ಇದಕ್ಕೆ ಸಾಮಾಜಿಕ ಜಾಲತಾಣಗಳು ಕೂಡ ಕಾರಣವಾಗಿದ್ದು, ಕೆಲ ಸಾಮಾಜಿಕ ಜಾಲತಾಣಗಳಿಂದ ದೂರವಿರಬೇಕು. ವಿದ್ಯಾಬ್ಯಾಸದ ಕಡೆ ಹೆಚ್ಚಿನ ಒಲವು ತೋರಿ ಸ್ಪರ್ಧಾತ್ಮಕ ಜಗತ್ತಿನೊಳಗೆ ಯಶಸ್ಸು ಕಾಣಬೇಕೆಂದು ಸಲಹೆ ನೀಡಿದರು.
ಪಿಎಸ್‌ಐ ಗೀತಾಂಜಲಿ ಸಿಂಧೆ ಮಾತನಾಡಿ, ಇತ್ತೀಚೆಗೆ ಮಹಿಳೆಯರ ಮೇಲೆ ಅತ್ಯಾಚಾರ ಪ್ರಕರಣಗಳು ಹೆಚ್ಚಾಗಿವೆ. ವಿದ್ಯಾರ್ಥಿನಿಯರು ಜಾಗೃತರಾಗಿದ್ದು, ಆರೋಗ್ಯಪೂರ್ಣ ಬದುಕು ಕಟ್ಟಿಕೊಳ್ಳಬೇಕೆಂದು ತಿಳಿಸಿದರು.
ಪ್ರಾಚಾರ್ಯ ಡಾ.ಜಿ.ಸೋಮಶೇಖರಪ್ಪ, ಪ್ರೊಬೇಷನರಿ ಪಿಎಸ್‌ಐ ಶಿವಪ್ಪ, ಉಪನ್ಯಾಸಕರಾದ ಜಗದೀಶ್‌ಚಂದ್ರ ಬೋಸ್, ಸಕ್ರಪ್ಪ ರೆಡ್ಡಿ, ಡಿ.ಅಂಜಿನಪ್ಪ, ವಿದ್ಯಾರ್ಥಿಗಳು ಇದ್ದರು.