ಹೊಸಪೇಟೆಯಲ್ಲಿ ಮಂಗಳವಾರ ಕೆಲ ಪ್ರದೇಶಗಳನ್ನು ಕೊಳೆಗೇರಿ ಎಂದು ಘೋಷಿಸಬೇಕು ಎಂದು ಆಗ್ರಹಿಸಿ ಸ್ಲಂ ಜನರ ಸಂಘಟನೆಯಿಂದ ನಗರಸಭೆ ಅಧ್ಯಕ್ಷ ರೂಪೇಶ್ ಕುಮಾರ್ ಹಾಗೂ ಪೌರಾಯುಕ್ತ ಶಿವಕುಮಾರ್ ಎರಗುಡಿ ಅವರಿಗೆ ಮನವಿ ಸಲ್ಲಿಸಿದರು. ಸಂಘದ ಗೌರವಾಧ್ಯಕ್ಷ ಶ್ಯಾಮ್ ಚೌದರಿ, ಅಧ್ಯಕ್ಷ ಎಚ್.ಶೇಷು, ಪ್ರಮುಖರಾದ ತನ್ವೀರ್ ಅಹ್ಮದ್, ರಾಜಭಕ್ತಿ ಬರಕಾತಿ, ವಿ.ಪರಸಪ್ಪ, ಎನ್.ವೆಂಕಟೇಶ್, ಇತರರಿದ್ದರು.
ಹೊಸಪೇಟೆ: ನಗರದ ಪಿಂಜಾರ್ ಓಣಿ ಹಾಗೂ ಕೊಂಡನಾಯಕನಹಳ್ಳಿ ಭಾಗ-2 ಪ್ರದೇಶಗಳನ್ನು ಕೊಳೆಗೇರಿ (ಸ್ಲಂ) ಎಂದು ಘೋಷಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸ್ಲಂ ಜನರ ಸಂಘಟನೆಯ ಜಿಲ್ಲಾ ಸಮಿತಿ ಪದಾಧಿಕಾರಿಗಳು ಇಲ್ಲಿನ ನಗರಸಭೆ ಅಧ್ಯಕ್ಷ ರೂಪೇಶ್ ಕುಮಾರ್ ಹಾಗೂ ಪೌರಾಯುಕ್ತ ಶಿವಕುಮಾರ್ ಎರಗುಡಿ ಅವರಿಗೆ ಮನವಿ ಸಲ್ಲಿಸಿದರು.
ಚಿತ್ತವಾಡಗಿಯ ಸರ್ವೆ ನಂ. 223, 249/1 ಹಾಗೂ ಕೊಂಡನಾಯಕನಹಳ್ಳಿಯ ಸರ್ವೆ ನಂ. 30 (ಹಿಸ್ಸಾ 1 ಮತ್ತು 2) ವ್ಯಾಪ್ತಿಯಲ್ಲಿ ಕಳೆದ 40-50 ವರ್ಷಗಳಿಂದ ನೂರಾರು ಬಡ ಕುಟುಂಬಗಳು ವಾಸಿಸುತ್ತಿವೆ. ಈ ಪ್ರದೇಶಗಳು ಸ್ಲಂ ಘೋಷಣೆಗೆ ಸಂಪೂರ್ಣ ಅರ್ಹವಾಗಿದ್ದರೂ ಇದುವರೆಗೆ ಅಧಿಕೃತ ಮಾನ್ಯತೆ ಸಿಕ್ಕಿಲ್ಲ. ಇದರಿಂದಾಗಿ ಇಲ್ಲಿನ ನಿವಾಸಿಗಳು ಹಕ್ಕುಪತ್ರ ಹಾಗೂ ಮೂಲಭೂತ ಭೂಮಿ ಹಕ್ಕಿನಿಂದ ವಂಚಿತರಾಗಿದ್ದಾರೆ. ಆದ್ದರಿಂದ ಆಡಳಿತ ಮಂಡಳಿಯು ತಕ್ಷಣವೇ ಅಗತ್ಯ ಪೂರ್ವಸಿದ್ಧತೆ ನಡೆಸಿ ಈ ಭಾಗಗಳನ್ನು ಸ್ಲಂ ಎಂದು ಘೋಷಿಸಬೇಕು. ಹಾಗೂ ನಗರ ಕೇಂದ್ರ ಗ್ರಂಥಾಲಯಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ಗ್ರಂಥಾಲಯ ಎಂದು ಮರುನಾಮಕರಣ ಮಾಡಬೇಕು ಎಂದು ಒತ್ತಾಯಿಸಿದರು.