ರಾಜ್ಯ ಸರ್ಕಾರದ ಆಶಯಗಳ ಕುರಿತು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಡೆಸಿದ ವೀಡಿಯೋ ಕಾನ್ಫರೆನ್ಸ್ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಹಾಗೂ ಜಿ.ಪಂ. ಸಿಇಒ ನೋಂಗ್ಜಾಯ್ ಮಹ್ಮದ್ ಅಲಿ ಅಕ್ರಂ ಷಾ ಮಾಹಿತಿ ನೀಡಿದರು. ಎಸ್ಪಿ ಎಸ್.ಜಾಹ್ನವಿ, ಇತರರಿದ್ದರು.
ಸಿಎಂ ಜತೆ ನಡೆದ ರಾಜ್ಯ ಸರ್ಕಾರದ ಆಶಯಗಳ ಮೊದಲ ವೀಡಿಯೋ ಕಾನ್ಫರೆನ್ಸ್ ಮೂಲಕ ಮಹತ್ವದ ಚರ್ಚೆ
ಹೊಸಪೇಟೆ: ವಿಜಯನಗರ ಜಿಲ್ಲೆಯಲ್ಲಿ ಶೇ.60 ರಷ್ಟು ಮಳೆ ಕೊರತೆಯಾಗಿದ್ದು, ಬಿತ್ತನೆಯಾದ ಕೃಷಿ ಭೂಮಿಯಲ್ಲಿ ಶೇ.80 ರಷ್ಟು ಬೆಳೆ ಹಾನಿಯಾಗಿದೆ ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮಾಹಿತಿ ನೀಡಿದ್ದಾರೆ.
ರಾಜ್ಯ ಸರ್ಕಾರದ ಆಶಯಗಳ ಕುರಿತು ಮುಖ್ಯಮಂತ್ರಿ ನಡೆಸಿದ ಮೊದಲ ವೀಡಿಯೋ ಕಾನ್ಫರೆನ್ಸ್ ಕಾರ್ಯಕ್ರಮದಲ್ಲಿ ಜಿಲ್ಲೆಯ ಬರ ಪರಿಸ್ಥಿತಿ ಕುರಿತು ವಿವರಣೆ ನೀಡಿದರು. ಜಿಲ್ಲಾಡಳಿತ ಕೈಗೊಂಡಿರುವ ತುರ್ತು ಪರಿಹಾರ ಕ್ರಮಗಳನ್ನು ಸಿಎಂ ಗಮನಕ್ಕೆ ತಂದರು.
ಜಿಲ್ಲೆಯಲ್ಲಿ ವಾಡಿಕೆಗಿಂತ ಶೇ. 60 ರಷ್ಟು ಮಳೆ ಕೊರತೆಯಾಗಿದೆ. ಬಿತ್ತನೆಯಾಗಿದ್ದ ಶೇ. 65 ರಷ್ಟು ಕೃಷಿ ಭೂಮಿಯಲ್ಲಿ ಭಾರಿ ಪ್ರಮಾಣದ (ಶೇ. 80) ಬೆಳೆ ಹಾನಿ ಸಂಭವಿಸಿದೆ. ಗ್ರಾಮೀಣ ಭಾಗದ ಜನರು ಉದ್ಯೋಗ ಅರಸಿ ಗುಳೆ ಹೋಗುವುದನ್ನು ತಡೆಯಲು ತಹಸೀಲ್ದಾರ್ ನೇತೃತ್ವದಲ್ಲಿ ಕಂದಾಯ, ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಗಳು ಜಂಟಿಯಾಗಿ ಜಾಗೃತಿ ಮೂಡಿಸುತ್ತಿವೆ. ವಿಬಿ ರಾಮ್ ಜಿ ಯೋಜನೆಯಡಿ ಸ್ಥಳೀಯವಾಗಿಯೇ ಉದ್ಯೋಗ ಒದಗಿಸಲಾಗುತ್ತಿದ್ದು, ವಲಸೆ ಹೋಗುವ ಕುಟುಂಬಗಳ ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ವಿಶೇಷ ಹಾಸ್ಟೆಲ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ಎಸ್ಪಿ ಎಸ್.ಜಾಹ್ನವಿ, ಅರಣ್ಯ ಇಲಾಖೆ ಉಪ ಸಂರಕ್ಷಣಾಧಿಕಾರಿ ಅನುಪಮ, ಅಪರ ಜಿಲ್ಲಾಧಿಕಾರಿ ಈ.ಬಾಲಕೃಷ್ಣ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮನೋಹರ್, ಉಪವಿಭಾಗಾಧಿಕಾರಿ ವಿವೇಕಾನಂದ, ನಗರಸಭೆ ಪೌರಾಯುಕ್ತ ಎರಗುಡಿ ಶಿವಕುಮಾರ್ ಇತರರಿದ್ದರು.
ಗುಳೆ ತಡೆಗೆ ಉದ್ಯೋಗ ಖಾತರಿ
ಜಿಲ್ಲೆಯಲ್ಲಿ ಮಳೆ ಅಭಾವದಿಂದ ಸೃಷ್ಟಿಯಾಗಿರುವ ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಜಿಲ್ಲಾ ಪಂಚಾಯತ್ ವತಿಯಿಂದ ಹಲವು ಮಹತ್ವದ ಕ್ರಮಗಳನ್ನು ಕೈಗೊಳ್ಳಲಾಗಿದೆ. ಗ್ರಾಮೀಣ ಭಾಗದಲ್ಲಿ ಉದ್ಯೋಗ ಬಯಸುವ ಸಾರ್ವಜನಿಕರಿಗೆ ವಿಬಿ ರಾಮ್ ಜಿ (ಉದ್ಯೋಗ ಖಾತರಿ) ಯೋಜನೆಯಡಿ ಕೂಲಿ ಕೆಲಸ ನೀಡಲಾಗುತ್ತಿದ್ದು, ಶ್ರಮಿಸಿದ ಕಾರ್ಮಿಕರಿಗೆ ಕಾಲಮಿತಿಯಲ್ಲಿ ಭತ್ಯೆ ತಲುಪಿಸಲು ಕ್ರಮ ವಹಿಸಲಾಗಿದೆ.
ಗ್ರಾಮೀಣ ಜನರು ಉದ್ಯೋಗ ಅರಸಿ ಗುಳೆ ಹೋಗುವುದನ್ನು ತಡೆಯಲು ಗ್ರಾಮ ಪಂಚಾಯತಿಗಳ ಮೂಲಕ ವಿಶೇಷ ಜನಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿ, ಯೋಜನೆಗಳ ಅರಿವು ಮೂಡಿಸಲಾಗುತ್ತಿದೆ.ಬರ ಪರಿಸ್ಥಿತಿಯಿಂದ ಮಕ್ಕಳ ಶೈಕ್ಷಣಿಕ ಅಭ್ಯಾಸಕ್ಕೆ ಯಾವುದೇ ತೊಂದರೆಯಾಗದAತೆ ಹಾಸ್ಟೆಲ್ ಹಾಗೂ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದು ಸಿಎಂಗೆ ಜಿ.ಪಂ. ಸಿಇಒ ನೋಂಗ್ಜಾಯ್ ಮಹ್ಮದ್ ಅಲಿ ಅಕ್ರಂ ಷಾ ತಿಳಿಸಿದರು.
ಎಸ್ ಆರ್ ಐ ಪ್ರಗತಿ ಪರಿಶೀಲಿಸಿದ ಸಿಎಂ
ವಿಜಯನಗರ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಕಾರ್ಯದ ಪ್ರಗತಿ ಕುರಿತು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಹಸೀಲ್ದಾರ್‌ರಿಂದ ವಿವರವಾದ ಮಾಹಿತಿ ಪಡೆದುಕೊಂಡರು. ವಿಜಯನಗರ ಕ್ಷೇತ್ರದಲ್ಲಿ ಪ್ರಸ್ತುತ 252288 ಮತದಾರರಿದ್ದಾರೆ. ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಗೈರುಹಾಜರಿ, ಸ್ಥಳಾಂತರ ಹಾಗೂ ಮೃತಪಟ್ಟ ಮತದಾರರ ವಿವರಗಳನ್ನು ಪರಿಶೀಲಿಸಲಾಗುತ್ತಿದೆ. ಯಾವುದೇ ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ತಡೆಯಲು ಬಿಎಲ್‌ಒಗಳು ಮನೆ ಮನೆಗೆ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ. ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ನಿಯಮಿತ ಸಭೆಗಳನ್ನು ನಡೆಸಿ ಮಾಹಿತಿ ಹಂಚಿಕೊಳ್ಳಲಾಗುತ್ತಿದೆ ಎಂದು ತಹಸೀಲ್ದಾರ್ ಶೃತಿ ಎಂ.ಮಳ್ಳಪ್ಪಗೌಡ್ರ್ ಮಾಹಿತಿ ನೀಡಿದರು. ಅರ್ಹ ಪ್ರಜೆಯೂ ಮತದಾನದ ಹಕ್ಕಿನಿಂದ ವಂಚಿತರಾಗದAತೆ ಮುನ್ನೆಚ್ಚರಿಕೆ ವಹಿಸಲು ಸಿಎಂ ಸೂಚನೆ ನೀಡಿದ್ದಾರೆ.