

ಪ್ರಮುಖ ಮುಖ್ಯಾಂಶಗಳು
ಹೊಸಪೇಟೆ: ದಾಸ ಸಾಹಿತ್ಯವು ಸಾಮಾನ್ಯ ಜನರ ಬದುಕಿನ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ಜೀವನಾಧಾರಿತ ಸಾಹಿತ್ಯವಾಗಿದ್ದು, ಸಮಾಜಕ್ಕೆ ಮಾರ್ಗದರ್ಶಕವಾಗುತ್ತದೆ. ವಚನ ಸಾಹಿತ್ಯ ಮತ್ತು ದಾಸ ಸಾಹಿತ್ಯವನ್ನು ಎರಡು ಕಣ್ಣುಗಳಿಗೆ ಹೋಲಿಸಿ, ತುಂಗಭದ್ರ ನದಿಯ ದಂಡೆಯ ಪ್ರದೇಶದಲ್ಲಿ ದಾಸ ಸಾಹಿತ್ಯವು ವಿಶಿಷ್ಟವಾಗಿ ಬೆಳವಣಿಗೆಯಾಗಿದೆ ಎಂದು ಹುಬ್ಬಳ್ಳಿಯ ದಾಸಸಾಹಿತ್ಯ ಸಂಶೋಧಕ ಇಂ.ಭೀಮಸೇನ ಬಡಿಗೇರ ಅಭಿಪ್ರಾಯಪಟ್ಟರು.
ಕನ್ನಡ ವಿವಿಯ ಪುರಂದರದಾಸ ಅಧ್ಯಯನ ಪೀಠ ಹಾಗೂ ಹಸ್ತಪ್ರತಿಶಾಸ್ತ್ರ ವಿಭಾಗದ ಸಹಯೋಗದಲ್ಲಿ ದಾಸ ಸಾಹಿತ್ಯ: ಪಠ್ಯ ಮತ್ತು ಪರಿಸರ ಶೋಧ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪುರಂದರದಾಸರು ತಮ್ಮ ಕೀರ್ತನೆಗಳಲ್ಲಿ ವಿಷಯವನ್ನು ಮೃದುವಾಗಿ ಅಭಿವ್ಯಕ್ತಿಸಿದರೆ, ಕನಕದಾಸರು ಕೆಲವು ಸಂದರ್ಭಗಳಲ್ಲಿ ನೇರ ಮತ್ತು ಸ್ಪಷ್ಟವಾದ ಮಾತುಗಳನ್ನು ಹೇಳಿದ್ದಾರೆ. ವಿಷಯವನ್ನು ನೇರವಾಗಿ, ಸ್ಪಷ್ಟವಾಗಿ ಹೇಳುವ ಶೈಲಿಯೇ ದಾಸ ಸಾಹಿತ್ಯ. ದಾಸ ದೀಕ್ಷೆಯನ್ನು ಯಾರೂ ಬೇಕಾದರೂ ಸ್ವೀಕರಿಸಬಹುದಾಗಿದ್ದು, ಅದರಲ್ಲಿ ಯಾವುದೇ ಕುಲ-ಮತ ಭೇದ ಇರಲಿಲ್ಲ. ಆದರೆ ಅದಕ್ಕಾಗಿ ಅರ್ಹತೆ ಮುಖ್ಯವಾಗಿತ್ತು. ಎಲ್ಲಾ ವರ್ಗದ ಜನರನ್ನು ಮನದಲ್ಲಿಟ್ಟುಕೊಂಡು ದಾಸ ಸಾಹಿತ್ಯವನ್ನು ರಚಿಸಲಾಗಿದೆ. ಸಂಶೋಧನಾ ಕ್ಷೇತ್ರದಲ್ಲಿ ಭಾಷಾ ಜ್ಞಾನ ಮತ್ತು ಸಂಶೋಧಕರ ನಡವಳಿಕೆ ಪ್ರಮುಖವಾಗಿದ್ದು, ದಾಸ ಸಾಹಿತ್ಯದ ಕುರಿತು ಸಮಗ್ರವಾದ ಅಧ್ಯಯನ ಇನ್ನಷ್ಟು ನಡೆಯಬೇಕಿದೆ ಎಂದರು.