ವಿದ್ಯುತ್ ಸರಬರಾಜು ಸ್ಥಗಿತಗೊಂಡಿದ್ದರಿಂದ ವಿಶ್ವವಿದ್ಯಾಲಯದ ದೈನಂದಿನ ಪಾಠ-ಪ್ರವಚನಗಳಿಗೆ ಮತ್ತು ಸಂಶೋಧನಾ ಚಟುವಟಿಕೆಗಳಿಗೆ ತೀವ್ರ ಅಡಚಣೆ ಉಂಟಾಗಿದೆ. ಅತ್ಯಂತ ದಯನೀಯ ಸ್ಥಿತಿ ಎಂದರೆ, ವಿದ್ಯಾರ್ಥಿಗಳ ಹಾಸ್ಟೆಲ್‌ಗಳು ಕತ್ತಲ ಕೂಪವಾಗಿ ಮಾರ್ಪಟ್ಟಿವೆ. ತೀವ್ರ ಸೆಕೆಯಲ್ಲಿ ಹಾಗೂ ಕತ್ತಲಲ್ಲಿ ಕಲಿಯುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಭಾಷೆ-ಸಂಸ್ಕೃತಿ ಬೆಳೆಸುವ ವಿಶ್ವವಿದ್ಯಾಲಯವೊಂದು ಹೀಗೆ ಹಣದ ಕೊರತೆಯಿಂದ ಕತ್ತಲಲ್ಲಿ ಮುಳುಗಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಇದೊಂದಿಗೆ ಭದ್ರತೆಯ ಆತಂಕವೂ ಎದುರಾಗಿದೆ. ವಿವಿ ಆವರಣವು ದಟ್ಟವಾದ ಗಿಡಗಂಟಿಗಳಿಂದ ಕೂಡಿದ್ದು, ವನ್ಯಮೃಗಗಳ ಆವಾಸಸ್ಥಾನಕ್ಕೆ ಹತ್ತಿರದಲ್ಲಿದೆ. ಸದ್ಯ ಕ್ಯಾಂಪಸ್ ಆವರಣದಲ್ಲಿ ಚಿರತೆ, ಕರಡಿ ಹಾಗೂ ವಿಜಂತುಗಳ ಕಾಟ ವಿಪರೀತವಾಗಿದೆ. ರಾತ್ರಿಯಾಗುತ್ತಿದ್ದಂತೆ ಇಡೀ ಕ್ಯಾಂಪಸ್ ಅಂಧಕಾರದಲ್ಲಿ ಮುಳುಗುತ್ತಿರುವುದರಿಂದ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಹಾಸ್ಟೆಲ್‌ನಿಂದ ಹೊರಬರಲು ಹೆದರುವಂತ ಪರಿಸ್ಥಿತಿಯಿದೆ.