ಕ್ರಸ್ಟ್ ಗೇಟ್ ಗಳ ಉದ್ಘಾಟನೆ ಶೀಘ್ರ

ತುಂಗಭದ್ರಾ ಜಲಾಶಯದ ಕ್ರಸ್ಟ್‌ ಗೃಟ್ ಚೈನ್ ಬದಲಿಸುವ ಕಾರ್ಯ
ತುಂಗಭದ್ರಾ ಜಲಾಶಯದ ಕ್ರಸ್ಟ್‌ ಗೃಟ್ ಚೈನ್ ಬದಲಿಸುವ ಕಾರ್ಯ
Published on

ಪ್ರಮುಖ ಮುಖ್ಯಾಂಶಗಳು

  • ತುಂಗಭದ್ರಾ ಜಲಾಶಯದ ಕ್ರಸ್ಟ್‌ಗೇಟ್ ದುರಸ್ತಿ ಅಂತ್ಯ ಸನಿಹ
  • ಜೂ.25ಕ್ಕೆ ಉದ್ಘಾಟನೆಯಾಗುವ ಸಾದ್ಯತೆ
ಮಂಜುನಾಥ ಅಯ್ಯಸ್ವಾಮಿ ಹೊಸಪೇಟೆ
ತ್ರಿವಳಿ ರಾಜ್ಯವನ್ನೇ ಆತಂಕಕ್ಕೆ ತಳ್ಳಿದ್ದ ತುಂಗಭದ್ರಾ ಜಲಾಶಯದ ಕ್ರಸ್ಟ್‌ಗೇಟ್ ದುರಸ್ತಿ ಕಾರ್ಯ ಇದೀಗ ಯಶಸ್ವಿಯಾಗಿ ಮುಕ್ತಾಯದ ಹಂತಕ್ಕೆ ತಲುಪಿದೆ. ಜಲಾಶಯದ ಸುರಕ್ಷತೆಯ ಹಿತದೃಷ್ಟಿಯಿಂದ ಕೈಗೊಳ್ಳಲಾಗಿದ್ದ ಗೇಟ್‌ಗಳ ಚೈನ್ ಬದಲಾವಣೆ ಪ್ರಕ್ರಿಯೆ ಯುದ್ಧೋಪಾದಿಯಲ್ಲಿ ಸಾಗುತ್ತಿದ್ದು, ಉದ್ಘಾಟನಾ ಕಾರ್ಯಕ್ರಮಕ್ಕೆ ಭರದ ಸಿದ್ಧತೆಗಳು ಆರಂಭವಾಗಿವೆ. ಜೂ.25 ರಂದು ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಈ ನೂತನ ಗೇಟ್‌ಗಳ ಲೋಕಾರ್ಪಣೆ ಕಾರ್ಯಕ್ರಮ ನಡೆಯುವ ಸಾಧ್ಯತೆ ಇದೆ.
ಗೇಟ್ ಸಂಖ್ಯೆ 19ರ ದುರಂತದ ಬಳಿಕ ಎಚ್ಚೆತ್ತುಕೊಂಡ ಸರ್ಕಾರಗಳು, ಜಲಾಶಯದ ಸುರಕ್ಷತೆಯ ದೃಷ್ಟಿಯಿಂದ ಇತಿಹಾಸದಲ್ಲೇ ಮೊದಲ ಬಾರಿಗೆ ಎಲ್ಲಾ 33 ಕ್ರಸ್ಟ್‌ಗೇಟ್‌ಗಳನ್ನು ಹಾಗೂ ಅದರ ಚೈನ್‌ ಲಿಂಕ್‌ಗಳನ್ನು ಬರೋಬ್ಬರಿ 57.8 ಕೋಟಿ ರೂ. ವೆಚ್ಚದಲ್ಲಿ ಆಧುನೀಕರಣಗೊಳಿಸಿದೆ. ಅಹಮದಾಬಾದ್ ಮೂಲದ ಕಂಪನಿ ಹಾಗೂ ನುರಿತ ಎಂಜಿನಿಯರ್‌ಗಳ ಹಗಲಿರುಳು ಶ್ರಮದ ಫಲವಾಗಿ ಮುಂಗಾರು ಆರಂಭದ ವೇಳೆಗೆ ಜಲಾಶಯವು ಸಂಪೂರ್ಣವಾಗಿ ಸಜ್ಜುಗೊಂಡಿದೆ. ಸದ್ಯ ಗೇಟ್‌ಗಳ ಪ್ರಾಯೋಗಿಕ ಚಾಲನೆ  ಯಶಸ್ವಿಯಾಗಿದ್ದು, ಜೂ.25ಕ್ಕೆ ತ್ರಿವಳಿ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಗಣ್ಯರ ಸಮ್ಮುಖದಲ್ಲಿ ಜಲಾಶಯವು ಅಧಿಕೃತವಾಗಿ ಸಾರ್ವಜನಿಕ ಸೇವೆಗೆ ಸಮರ್ಪಣೆಯಾಗಲಿದೆ. ಇದರಿಂದ ಈ ಬಾರಿ ತುಂಗಭದ್ರಾ ಜಲಾಶಯದ ಪ್ರದೇಶದ ರೈತರಿಗೆ ಯಾವುದೇ ನೀರಿನ ಕೊರತೆ ಎದುರಾಗುವುದಿಲ್ಲ ಎಂಬ ವಿಶ್ವಾಸ ಮೂಡಿದೆ.
ಸದ್ಯ ಲಭ್ಯವಿರುವ ಮಾಹಿತಿ ಪ್ರಕಾರ, ಈಗಾಗಲೇ 24 ಹೊಸ ಚೈನ್‌ಗಳು ಜಲಾಶಯದ ಆವರಣ ತಲುಪಿದ್ದು, ಮಂಗಳವಾರದ ವೇಳೆಗೆ ಒಟ್ಟು 20 ಗೇಟ್‌ಗಳಿಗೆ ಯಶಸ್ವಿಯಾಗಿ ಚೈನ್‌ಗಳನ್ನು ಅಳವಡಿಸಲಾಗಿದೆ. ಜಲಾಶಯದ ಕ್ರಸ್ಟ್‌ಗೇಟ್‌ಗಳ ಚೈನ್ ಬದಲಾಯಿಸುವ ಮಹತ್ವದ ದುರಸ್ತಿ ಕಾರ್ಯ ಈಗ ಅಂತಿಮ ಹಂತ ತಲುಪಿದ್ದು, ಬಹುನಿರೀಕ್ಷಿತ ಉದ್ಘಾಟನಾ ಸಮಾರಂಭಕ್ಕೆ ಭರ್ಜರಿ ಸಿದ್ಧತೆಗಳು ಆರಂಭವಾಗಿವೆ. ಮೂರು ರಾಜ್ಯಗಳ ಜನಪ್ರತಿನಿಧಿಗಳ ಲಭ್ಯತೆಯ ಆಧಾರದ ಮೇಲೆ ಇದೇ ತಿಂಗಳು ತಿಂಗಳಲ್ಲಿ ಅದ್ಧೂರಿ ಕಾರ್ಯಕ್ರಮ ಆಯೋಜಿಸಲು ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸುತ್ತಿದ್ದಾರೆ.
2024ರ ಆಗಸ್ಟ್ 10ರಂದು ಜಲಾಶಯದ 19ನೇ ಕ್ರಸ್ಟ್‌ಗೇಟ್‌ನ ಚೈನ್ ತುಂಡಾಗಿ ಭಾರಿ ದುರಂತ ಸಂಭವಿಸಿತ್ತು. ತದನಂತರ ತಜ್ಞರ ತಂಡದ ಸಲಹೆಯಂತೆ 52 ಕೋಟಿ ರೂ ವೆಚ್ಚದಲ್ಲಿ ಗೇಟ್‌ಗಳ ಆಧುನೀಕರಣ ಕಾಮಗಾರಿ ಕೈಗೊಳ್ಳಲಾಯಿತು. ಹಾಗೂ ಎರಡು ತಿಂಗಳ ಹಿಂದೆ 5.8 ಕೋಟಿ ರೂ. ವೆಚ್ಚದಲ್ಲಿ ಚೈನ್‌ಗಳನ್ನು ಬದಲಾಯಿಸುವ ಕಾರ್ಯಕ್ಕೆ ಚುರುಕು ಪಡೆದಿದೆ. ಗೇಟ್‌ಗಳ ಕೆಲಸವೂ ಮುಕ್ತಾಯದ ಹಂತದಲ್ಲಿದೆ.
ತ್ರಿವಳಿ ರಾಜ್ಯಗಳ ಮುಖ್ಯಮಂತ್ರಿಗಳ ಸಮ್ಮಿಲನ?
ಕೇಂದ್ರ ನೀರಾವರಿ ಸಚಿವ ಸಿ.ಆರ್. ಪಾಟೀಲ್ ಅವರು ಜೂ.25 ರಂದು ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ತುಂಗಭದ್ರಾ ಜಲಾಶಯ ಆಡಳಿತ ಮಂಡಳಿ (ಟಿಬಿಬಿ) ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಅಧಿಕೃತ ಆಹ್ವಾನ ನೀಡಿದೆ. ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಈಗಾಗಲೇ ಕಾರ್ಯಕ್ರಮದಲ್ಲಿ ಭಾಗವಹಿಸಲು ಒಪ್ಪಿಗೆ ಸೂಚಿಸಿದ್ದಾರಂತೆ. ಈ ಹಿಂದೆ ಡಿ.ಕೆ.ಶಿವಕುಮಾರ್ ಅವರು ಉಪಮುಖ್ಯಮಂತ್ರಿಯಾಗಿದ್ದಾಗ ಇದಕ್ಕೆ ಸಮ್ಮತಿಸಿದ್ದರು. ಸದ್ಯ ಅವರು ಮುಖ್ಯಮಂತ್ರಿಯಾಗಿರುವುದರಿಂದ ಮತ್ತೊಮ್ಮೆ ಅಧಿಕೃತ ಆಹ್ವಾನ ನೀಡಲು ಟಿಬಿಬಿ ನಿರ್ಧರಿಸಿದೆ. ತೆಲಂಗಾಣ ಸಿಎಂ ಅವರಿಗೂ ಆಹ್ವಾನ ರವಾನಿಸಲಾಗಿದ್ದು, ಇನ್ನು ಅಧಿಕೃತ ದಿನ ನಿಗದಿಯಾಗಿಲ್ಲ. ತ್ರಿವಳಿ ರಾಜ್ಯಗಳ ಮುಖ್ಯಮಂತ್ರಿಗಳ ಸಮ್ಮಿಲನ ಕಾರ್ಯಕ್ರಮ ನಡೆಯಲಿದೆ. ಆದ್ದರಿಂದ ವಿಜಯನಗರ ಹಾಗೂ ಕೊಪ್ಪಳ ಜಿಲ್ಲೆಗಳ ಪೊಲೀಸರು ಭದ್ರತೆ ಸಂಭಂದಿಸಿದಂತೆ ಸಿದ್ದತೆ ನಡೆಸಿದ್ದಾರೆ. 

ರೈತರಲ್ಲಿ‌ ಮಂದಹಾಸ

ರಾಜ್ಯದ ವಿಜಯನಗರ, ಬಳ್ಳಾರಿ, ಕೊಪ್ಪಳ, ರಾಯಚೂರು ಜಿಲ್ಲೆಗಳ 3.5ಲಕ್ಷ ಹೆಕ್ಟೇರ್‌ ಹಾಗೂ ಆಂದ್ರಪ್ರದೇಶದ ಅನಂತಪುರ, ಕರ್ನೂಲ್‌, ಕಡಪ ಜಿಲ್ಲೆಗಳ 1.46 ಲಕ್ಷ ಹೆಕ್ಟೇರ್‌ ಪ್ರದೇಶಕ್ಕೂ ತುಂಗಭದ್ರಾ ನೀರೇ ಆಧಾರ. ಆಂಧ್ರಪ್ರದೇಶದ ಅನಂತಪುರ, ಕರ್ನೂಲು, ಕಡಪ, ತೆಲಂಗಾಣದ ಮಹೆಬೂಬ್‌ನಗರ ಒಟ್ಟು ಜಿಲ್ಲೆಗಳ ರೈತರಿಗೆ ತುಂಗಭದ್ರಾ ತಾಯಿ  ವರದಾನವಾಗಿದೆ. ತುಂಗಭದ್ರಾ ಜಲಾಶಯದ ದುರಂತದಿಂದ ಬೆಚ್ಚಿ ಬಿದರೈತರಿಗೆ ಕೊನೆಗೂ ಭರವಸೆ ಮೂಡಿದೆ. ಕಳೆದ ಬಾರಿ ಎರಡನೇ ಬೆಳೆಗೆ ನೀರಿಲ್ಲದೇ ಕಂಗಾಲಾಗಿದ್ದ ರೈತರು ನಿಟ್ಟುಸಿರು ಬಿಡುವಂತಾಗಿದೆ.
"

ಜಲಾಶಯದಲ್ಲಿ ಈಗಾಗಲೇ ಚೈನ್ ಅಳವಡಿಕೆ ಕಾರ್ಯ ಚುರುಕಾಗಿ ಸಾಗಿದ್ದು, ಜೂನ್ 15ಕ್ಕೆ ಪೂರ್ಣಗೊಳ್ಳಲಿದೆ. ಮೂರು ರಾಜ್ಯಗಳ ಜನಪ್ರತಿನಿಧಿಗಳ ದಿನಾಂಕ ನಿಗದಿಯಾದ ತಕ್ಷಣವೇ ಹೊಸ ಗೇಟ್‌ಗಳ ಉದ್ಘಾಟನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು.

— ಒ.ಆರ್.ಕೆ.ರೆಡ್ಡಿ, ಕಾರ್ಯದರ್ಶಿ, ತುಂಗಭದ್ರಾ ಆಡಳಿತ ಮಂಡಳಿ, ಹೊಸಪೇಟೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net