ಸುದ್ದಿಗೋಷ್ಠಿಯಲ್ಲಿ ವಿಜಯನಗರ ಜಿಲ್ಲಾ ಕಾಂಗ್ರೆಸ್ ಉಸ್ತುವಾರಿ ಹರ್ಕಾರ್ ವೇಣುಗೋಪಾಲ ಹೇಳಿಕೆ
ಹೊಸಪೇಟೆ: ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯ ತೀರ್ಮಾನದಂತೆ ಜಿಲ್ಲಾದ್ಯಂತ ಸಂಘಟನಾ ಸೃಜನ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ ಎಂದು ತೆಲಂಗಾಣ ಸರ್ಕಾರದ ಸಲಹೆಗಾರ ಹಾಗೂ ವಿಜಯನಗರ ಜಿಲ್ಲಾ ಕಾಂಗ್ರೆಸ್ ಉಸ್ತುವಾರಿ ಹರ್ಕಾರ್ ವೇಣುಗೋಪಾಲ ತಿಳಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಭಿಯಾನದ ಹಿನ್ನೆಲೆಯಲ್ಲಿ ಪಕ್ಷವನ್ನು ತಳಮಟ್ಟದಿಂದ ಬಲಪಡಿಸಲು ಪ್ರತಿಯೊಂದು ಜಿಲ್ಲೆಗೂ ಎಐಸಿಸಿ ಮತ್ತು ಕೆಪಿಸಿಸಿ ವೀಕ್ಷಕರನ್ನು ನಿಯೋಜಿಸಲಾಗಿದೆ. ಆರು ದಿನಗಳ ಕಾಲ ವಿಜಯನಗರ ಜಿಲ್ಲೆಯಲ್ಲೇ ಇದ್ದು, ಎಲ್ಲಾ ಹಂತದ ನಾಯಕರು ಹಾಗೂ ಕಾರ್ಯಕರ್ತರೊಂದಿಗೆ ಸುದೀರ್ಘ ಸಮಾಲೋಚನೆ ನಡೆಸಲಾಗುವುದು. ಪಕ್ಷದಲ್ಲಿ ಭಿನ್ನಾಭಿಪ್ರಾಯಗಳಿರುವುದು ಸಹಜ, ಆದರೆ ಯಾವುದೇ ಭೇದಾಭಿಪ್ರಾಯಗಳಿಲ್ಲ. ನಾಯಕರ ಒಳಗಿನ ಬೇಗುದಿ ಹಾಗೂ ಸ್ಥಳೀಯ ಸಮಸ್ಯೆಗಳನ್ನು ವೈಯಕ್ತಿಕವಾಗಿ ಆಲಿಸಿ ಸರಿಪಡಿಸುವ ಕೆಲಸ ಮಾಡಲಾಗುವುದು ಎಂದರು.
ಮುAಬರುವ ಸ್ಥಳೀಯ ಸಂಸ್ಥೆಗಳು ಹಾಗೂ ವಿಧಾನಸಭೆ ಚುನಾವಣೆಗಳಿಗೆ ಸೂಕ್ತ ಕಾರ್ಯತಂತ್ರ ರೂಪಿಸಲು ಈ ಅಭಿಪ್ರಾಯ ಸಂಗ್ರಹಣೆ ನೆರವಾಗಲಿದೆ. ಜತೆಗೆ ನೂತನ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಕುರಿತಾಗಿಯೂ ವಿವಿಧ ಆಯಾಮಗಳಲ್ಲಿ ಚರ್ಚೆ ನಡೆಸಿ, ಆ.16ರೊಳಗೆ ಅಂತಿಮ ವರದಿಯನ್ನು ಎಐಸಿಸಿಗೆ ಸಲ್ಲಿಸುವುದಾಗಿ ಹೇಳಿದರು.
ರಾಜ್ಯದಲ್ಲಿ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಹಾಗೂ ಬಿ.ಕೆ. ಹರಿಪ್ರಸಾದ್ ಅವರ ನಾಯಕತ್ವದಲ್ಲಿ ಸರ್ಕಾರ ಸಮರ್ಥವಾಗಿ ನಡೆಯುತ್ತಿದೆ. ಸರ್ಕಾರದ ಗ್ಯಾರಂಟಿ ಯೋಜನೆಗಳು ಜನಮೆಚ್ಚುಗೆ ಗಳಿಸಿದ್ದು, ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಮತ್ತಷ್ಟು ಹೆಚ್ಚಿನ ಬಹುಮತದೊಂದಿಗೆ ಅಧಿಕಾರಕ್ಕೆ ತರಲು ಈ ಅಭಿಯಾನ ದಾರಿದೀಪವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಶಾಸಕ ಎಚ್ ಆರ್ ಗವಿಯಿಪ್ಪ , ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿರಾಜ್ ಶೇಖ್, ಕೆಪಿಸಿಸಿ ವೀಕ್ಷಕ ಮರಿಯೋಜಿ ರಾವ್, ಕೆಪಿಸಿಸಿ ಉಪಾಧ್ಯಕ್ಷ ಸುಭಾಷ್ ರಾಥೋಡ್, ಆರತಿ ಚಂದ್ರಶೇಖರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸೂರಜ್, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಕೆ.ರವಿಕುಮಾ, ಕೆ.ಅಲ್ಲಾಭಕ್ಷಿ ಇದ್ದರು.