ಹಗರಿಬೊಮ್ಮನಹಳ್ಳಿ: ಕೇಂದ್ರ ಸರ್ಕಾರದ ಫಿಟ್ ಇಂಡಿಯಾ ಅಭಿಯಾನ ಅಂಗವಾಗಿ ಹಂಪಾಪಟ್ಟಣ ಗ್ರಾ.ಪಂ.ಯಿಂದ ಭಾನುವಾರ ಗ್ರಾಮದಲ್ಲಿ ಸೈಕಲ್ ಸ್ವಚ್ಛತಾ ರೈಡ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಗ್ರಾ.ಪಂ.ಅಧ್ಯಕ್ಷೆ ಗೀತಾ ಪತ್ರಿ ಯಲ್ಲಪ್ಪ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಆರೋಗ್ಯವೇ ನಿಜವಾದ ಸಂಪತ್ತು. ಯುವ ಜನರು ಹಾಗೂ ಸಾರ್ವಜನಿಕರು ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ಸೈಕಲ್ ಬಳಕೆಯನ್ನು ಹೆಚ್ಚಿಸಬೇಕು. ಗ್ರಾಮವನ್ನು ಸ್ವಚ್ಛ ಹಾಗೂ ಸುಂದರವಾಗಿಡಲು ಪ್ರತಿಯೊಬ್ಬರೂ ಸಹಕರಿಸಬೇಕು ಎಂದು ಹೇಳಿದರು.
ಪಿಡಿಒ ಖಾಜಾಬನ್ನಿ ಮಾತನಾಡಿ, ಕೇಂದ್ರ ಸರ್ಕಾರದ ಫಿಟ್ ಇಂಡಿಯಾ ಅಭಿಯಾನ ಜನರಲ್ಲಿ ಆರೋಗ್ಯಕರ ಜೀವನಶೈಲಿ, ದೈಹಿಕ ಸದೃಢತೆ ಹಾಗೂ ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವುದಾಗಿದೆ ಎಂದರು.
ಗ್ರಾ.ಪಂ.ಉಪಾಧ್ಯಕ್ಷ ಟಿ.ಮಂಜುನಾಥ, ಸದಸ್ಯ ಸಿ.ಎಲ್.ಕುಮಾರ, ಸುಡುಗಾಡು ಸಿದ್ಧರ ಮಹಾಸಭಾ ತಾಲೂಕು ಅಧ್ಯಕ್ಷ ಪತ್ರಿ ಯಲ್ಲಪ್ಪ, ಪ್ರಭು ಗೌಡ, ಮಡಿವಾಳ ರಾಮಪ್ಪ, ತೀರ್ಥಪ್ರಸಾದ, ಶೀಗೇನಹಳ್ಳಿ ಸಣ್ಣ ಬಾಳಪ್ಪ, ಪಂಚಾಯಿತಿ ಸಿಬ್ಬಂದಿ ಮತ್ತಿತರರು ಇದ್ದರು.