ಕಾನಹೊಸಹಳ್ಳಿ ಸಮೀಪದ ಚಿಕ್ಕಜೋಗಿಹಳ್ಳಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಭೇಟಿ ನೀಡಿ ಅಭಿವೃದ್ಧಿ ಕಾಮಗಾರಿ ಪರಿಶೀಲಿಸಿದರು. ಎಪಿಎಂಸಿ ಅಧ್ಯಕ್ಷ ಕುರಿಹಟ್ಟಿ ಬೋಸಣ್ಣ, ತಾಪಂ ಮಾಜಿ ಸದಸ್ಯ ಹುಡೇಂ ಪಾಪನಾಯಕ, ಪ್ರಮುಖರಾದ ಬುಡ್ಡಾರೆಡ್ಡಿ, ಡಾ.ವಿಜಯ, ಧನುಂಜಯ ಇದ್ದರು.
ಕಾನಹೊಸಹಳ್ಳಿ: ಕಳೆದ ಆರು ದಶಕದಿಂದ ಗ್ರಾಮೀಣ ಭಾಗದ ಜನರಿಗೆ ಉತ್ತಮ ಆರೋಗ್ಯ ಸೇವೆ ನೀಡುತ್ತಿರುವ ಚಿಕ್ಕಜೋಗಿಹಳ್ಳಿ ಆಸ್ಪತ್ರೆ ಅಭಿವೃದ್ಧಿಗೆ ಮೂರು ಕೋಟಿ ರೂ. ನೀಡಲಾಗಿದ್ದು, ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಸೂಚಿಸಿದರು.
ಚಿಕ್ಕಜೋಗಿಹಳ್ಳಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸೋಮವಾರ ಭೇಟಿ ನೀಡಿ ವೈದ್ಯರು ಮತ್ತು ಸಿಬ್ಬಂದಿ ವಸತಿಗೃಹ ನವೀಕರಣ ಕಾಮಗಾರಿ ಪರಿಶೀಲಿಸಿ ಮಾತನಾಡಿದರು.
ಎಕ್ಸರೇ ಸೇವೆ ಕೂಡ್ಲಿಗಿ ಸಾರ್ವಜನಿಕ ಆಸ್ಪತ್ರೆ ಬಿಟ್ಟರೆ ಚಿಕ್ಕಜೋಗಿಹಳ್ಳಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಇತ್ತು. ಈ ಹಿಂದೆ ಇದ್ದ ಯಂತ್ರೋಪಕರಣ 60ವರ್ಷ ಹಳೆಯದಾಗಿದ್ದು, ಅಧುನಿಕ ಯಂತ್ರ ಖರೀದಿಗೆ ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ.
ಜತೆಗೆ ಎಕ್ಸರೇ ಕೊಠಡಿ ದುರಸ್ತಿ ಕಾಮಗಾರಿ ಕೈಗೊಂಡಿದ್ದು, ಮುಂದಿನ 4ರಿಂದ 5 ತಿಂಗಳಲ್ಲಿ ಎಕ್ಸರೇ ಸೇವೆ ಸ್ಥಳೀಯ ಜನರಿಗೆ ಸಿಗಲಿದೆ ಎಂದರು.
ಕೂಡ್ಲಿಗಿ ಎಪಿಎಂಸಿ ಅಧ್ಯಕ್ಷ ಕುರಿಹಟ್ಟಿ ಬೋಸಣ್ಣ, ತಾಪಂ ಮಾಜಿ ಸದಸ್ಯ ಹುಡೇಂ ಪಾಪನಾಯಕ, ಗುತ್ತಿಗೆದಾರ ಜಿ.ಪಿ.ಅಶೊಕ, ಗ್ರಾಪಂ ಮಾಜಿ ಅಧ್ಯಕ್ಷ ರಾಜೇಶನಾಯ್ಕ, ಪ್ರಮುಖರಾದ ಡಾ.ವಿಜಯ, ಧನುಂಜಯ, ಗುಂಡುಮುಣುಗು ಚಿದಾನಂದ ಇತರರಿದ್ದರು.