

ಪ್ರಮುಖ ಮುಖ್ಯಾಂಶಗಳು
ಹೊಸಪೇಟೆ: ವಿಶ್ವ ಪಾರಂಪರಿಕ ತಾಣ ಹಂಪಿಗೆ ಶನಿವಾರ ದಿಢೀರ್ ಭೇಟಿ ನೀಡಿದ ಉಪ ಲೋಕಾಯುಕ್ತ ಬಿ.ವೀರಪ್ಪ, ನಿಯಮ ಬಾಹಿರವಾಗಿ ನಡೆಯುತ್ತಿರುವ 200ಕ್ಕೂ ಹೆಚ್ಚು ಅನಧಿಕೃತ ಹೋಂ ಸ್ಟೇಗಳ ಕುರಿತು ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಪಂಚಾಯಿತಿ, ಪ್ರಾಧಿಕಾರದ ಪರವಾನಗಿ ಇಲ್ಲದೆ ಇಷ್ಟೊಂದು ಸಂಖ್ಯೆಯ ಹೋಂ ಸ್ಟೇಗಳು ನಡೆಯುತ್ತಿರುವುದಕ್ಕೆ ಕಠಿಣವಾಗಿ ಪ್ರಶ್ನಿಸಿದ ಅವರು, ಕರ್ತವ್ಯ ಲೋಪ ಎಸಗಿದ ಸಂಬಂಧಪಟ್ಟ ಪ್ರಾಧಿಕಾರಗಳ ಮೇಲೆ ಸುಮೋಟೊ ಪ್ರಕರಣ ದಾಖಲಿಸಲು ಸೂಚನೆ ನೀಡಿದರು.
ಕೃಷಿ ಅಥವಾ ವಾಸಯೋಗ್ಯ ಭೂಮಿಯಲ್ಲಿ ಕಾನೂನುಬಾಹಿರವಾಗಿ ನಡೆಸಲಾಗುತ್ತಿರುವ ವಾಣಿಜ್ಯ ಹೋಂ ಸ್ಟೇಗಳಿಗೆ ವಿದ್ಯುತ್ ಸಂಪರ್ಕ ನೀಡಿದ ಜೆಸ್ಕಾಂ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಅವರು, ಪಿಡಿಒ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ಜತೆ ತಕ್ಷಣವೇ ಪರಿಶೀಲನೆ ನಡೆಸಿ ಅನಧಿಕೃತ ಹೋಂ ಸ್ಟೇಗಳನ್ನು ತೆರವುಗೊಳಿಸಲು ನಿರ್ದೇಶಿಸಿದರು.
ಸಂರಕ್ಷಿತ 100 ಮೀಟರ್ ವ್ಯಾಪ್ತಿಯಲ್ಲಿರುವ ಜನತಾ ಪ್ಲಾಟ್ನಲ್ಲಿ ವಾಣಿಜ್ಯ ವ್ಯಾಪಾರ ನಡೆಸುತ್ತಿರುವವರಿಗೆ ಪರ್ಯಾಯ ಸ್ಥಳ ಗುರುತಿಸಿ, ಅಲ್ಲಿಗೆ ಪ್ರವಾಸಿಗರು ಹೋಗಿ ಬರಲು ಪ್ರತ್ಯೇಕ ವಾಹನ ವ್ಯವಸ್ಥೆ ಕಲ್ಪಿಸಿಕೊಡಿ. ಶ್ರೀ ವಿರೂಪಾಕ್ಷೇಶ್ವರ ಗರ್ಭಗುಡಿಗೆ ಭೇಟಿ ನೀಡಿ ಸೌಲಭ್ಯಗಳನ್ನು ವೀಕ್ಷಿಸಿದರು. ಗರ್ಭಗುಡಿಯಲ್ಲಿ ಗಾಳಿಯ ಚಲನೆ ಇಲ್ಲದ ಕಾರಣ ಎಎಸ್ಐ ಅನುಮತಿ ಪಡೆದು ಶೀಘ್ರದಲ್ಲೇ ಎಸಿ ಅಳವಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಮಾಹಿತಿ ನೀಡಿದರು.