ಹಗರಿಬೊಮ್ಮನಹಳ್ಳಿ: ಹೊಳೆ ಮುತ್ಕೂರಿನಲ್ಲಿ ತುಂಗಭದ್ರಾ ಅಣೆಕಟ್ಟು ಯೋಜನೆ ಪುನರ್ವಸತಿ ಫಲಾನುಭವಿಗಳ ನಿವೇಶನಗಳು ಒತ್ತುವರಿಯಾಗಿದ್ದು, ತೆರವುಗೊಳಿಸುವಂತೆ ಒತ್ತಾಯಿಸಿ ತಹಸೀಲ್ದಾರ್ ಆರ್.ಕವಿತಾಗೆ ಪುನರ್ವಸತಿ ನಿರಾಶ್ರಿತರ ಹೋರಾಟ ಸಮಿತಿಯಿಂದ ಬುಧವಾರ ಮನವಿ ಸಲ್ಲಿಸಲಾಯಿತು.
ಹೋರಾಟ ಸಮಿತಿ ಅಧ್ಯಕ್ಷ ಡಾ.ಬಿ.ಲೋಕೇಶ ಮಾತನಾಡಿ, ತುಂಗಭದ್ರಾ ಅಣೆಕಟ್ಟು ನಿರ್ಮಾಣ ವೇಳೆ 1951-52ರಲ್ಲಿ ಹೊಲ, ಮನೆ ಕಳೆದುಕೊಂಡು ನಿರಾಶ್ರಿತರಾದವರಿಗೆ ಸರ್ಕಾರ ಅಂದಿನ ಮಲ್ಲಾಪುರ ತಾಲೂಕು ತಹಸೀಲ್ದಾರ್ ಮೂಲಕ 41 ಕುಟುಂಬಗಳಿಗೆ ಎಂ.ಬಿ.ಕಾಲನಿ ಹತ್ತಿರ ಸರ್ವೇ ನಂ.12 ಬಿ ಯಲ್ಲಿ ತಲಾ 100*45 ಅಳತೆಯ ನಿವೇಶನ ನೀಡಿತ್ತು. ಕೆಲ ಕುಟುಂಬಗಳು ನಿಗದಿತ ಸ್ಥಳದಲ್ಲಿ ವಾಸವಾಗಿದ್ದು, ಕೆಲವು ಕುಟುಂಬಗಳು ಆರ್ಥಿಕ ತೊಂದರೆ ಹಾಗೂ ವೈಯಕ್ತಿಕ ಕಾರಣಗಳಿಂದ ಮನೆ ನಿರ್ಮಿಸಿಕೊಳ್ಳಲಾಗದೆ ನಿವೇಶನ ಖಾಲಿ ಬಿಟ್ಟಿದ್ದಾರೆ. ಖಾಲಿ ನಿವೇಶನಗಳನ್ನು ಅತಿಕ್ರಮಿಸಿಕೊಳ್ಳಲಾಗಿದೆ ಎಂದು ದೂರಿದರು.
ಉಪಾಧ್ಯಕ್ಷ ಎಚ್.ಅನಂತಕುಮಾರ ಮಾತನಾಡಿ, ನಿರಾಶ್ರಿತರಿಗೆ ಮಂಜೂರಾಗಿರುವ ನಿವೇಶನಗಳಿಗೆ ಇತ್ತೀಚಿಗೆ ಉತ್ತಮ ಬೆಲೆ ಬಂದಿರುವುದರಿಂದ ಕೆಲವರು ಭೂ ಮಾಫಿಯಾದೊಂದಿಗೆ ಅತಿಕ್ರಮಣ ಮಾಡಿಕೊಂಡಿದ್ದಾರೆ. ನಿವೇಶನ ಕಳೆದುಕೊಂಡ ಕುಟುಂಬಗಳಿಗೆ, ರಕ್ಷಣೆ ನೀಡುವುದರೊಂದಿಗೆ ನ್ಯಾಯ ಒದಗಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.