ಕೂಡ್ಲಿಗಿ: ಸಾರ್ವಜನಿಕರಿಗೆ ಸಮರ್ಪಕವಾಗಿ ವಿದ್ಯುತ್ ಸರಬರಜು ಮಾಡುವುದು ನಿಮ್ಮ ಕರ್ತವ್ಯವಾಗಿದ್ದು, ಸಕಾಲದಲ್ಲಿ ಸಮಸ್ಯೆಗಳನ್ನು ಬಗೆಹರಿಸುವಂತೆ ಜೆಸ್ಕಾಂ ಅಧಿಕಾರಿಗಳಿಗೆ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಸೂಚಿಸಿದರು.
ಪಟ್ಟಣದ ಜೆಸ್ಕಾಂ ಕಚೇರಿಯಲ್ಲಿ ಜೆಸ್ಕಾಂ ಅಧಿಕಾರಿಗಳು ಹಾಗೂ ಸಿಬ್ಬಂದಿಯೊಂದಿಗೆ ನಡೆದ ಸಭೆಯಲ್ಲಿ ಸೋಮವಾರ ಮಾತನಾಡಿದರು. ಪಟ್ಟಣದಲ್ಲಿ ರಾತ್ರಿ ವಿದ್ಯುತ್ ಸಮಸ್ಯೆಗೆ ಸ್ಪಂದಿಸಲು ಪಾಳಿಯಲ್ಲಿ ಸಿಬ್ಬಂದಿ ನಿಯೋಜನೆ ಮಾಡಿ ಕೆಲಸ ಮಾಡಿಸಬೇಕು. ವಿದ್ಯುತ್ ಮಾರ್ಗಕ್ಕೆ ಆಡಚಣೆಯಾಗಿರುವ ಗಿಡ ಮರಗಳನ್ನು ತೆರವುಗೊಳಿಸಿ ಎಂದು ಸೂಚನೆ ನೀಡಿದರು.
ಎಇ ವೆಂಕಟೇಶ್ ಮಾತನಾಡಿ, ರಾತ್ರಿ ಕರ್ತವ್ಯಕ್ಕೆ ಸಿಬ್ಬಂದಿ ನಿಯೋಜಿಸಲಾಗಿದೆ ಎಂದರು. ಕೆಲವರು ಅನಗತ್ಯ ಫೋನ್ ಮಾಡುತ್ತಾರೆ. ಅಂಥವರಿಗೆ ಸೂಕ್ತ ಉತ್ತರ ನೀಡಬೇಕಾಗುತ್ತದೆ. ಕೆಲವೊಂದು ಸಲ ಜೀವ ಪಣಕ್ಕಿಟ್ಟು ನೀವು ಕೆಲಸ ಮಾಡುತ್ತೀರಿ. ನಿಮಗೆ ಅಗತ್ಯ ಸಲಕರಣೆಗಳನ್ನು ಕೊಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಭರವಸೆ ನೀಡಿದರು.
ನಮಗೆ ಬಿಎಸ್‌ಎನ್‌ಎಲ್ ಸಿಮ್ ನೀಡಿದ್ದು, ಕೆಲವೆಡೆ ನೆಟ್‌ವರ್ಕ್ ಬರುವುದಿಲ್ಲ. ಇದರಿಂದ ಸಮಸ್ಯೆಯಾಗುತ್ತದೆ ಎಂದು ಜೆಸ್ಕಾಂ ಸಿಬ್ಬಂದಿ ಶಾಸಕರ ಗಮನಕ್ಕೆ ತಂದರು. ಮೇಲಧಿಕಾರಿಗಳೊಂದಿಗೆ ಮಾತನಾಡಿ, ಬೇರೆ ಕಂಪನಿಗೆ ಪೋರ್ಟ್ ಮಾಡಿಸಲು ಪ್ರಯತ್ನ ಮಾಡಿಸುವುದಾಗಿ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ತಿಳಿಸಿದರು.
ಸಮಸ್ಯೆಗಳ ಬಗ್ಗೆ ಚರ್ಚಿಸಲು ಸಭೆ ಕರೆಯಲಾಗಿದೆ. ಆದರೆ, ಸಂಬಂಧಿಸಿದ ಅಧಿಕಾರಿಗಳೇ ಬಾರದಿದ್ದರೆ ಹೇಗೆ ಎಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಅಸಮಾಧಾನ ವ್ಯಕ್ತಪಡಿಸಿದರು. ದಾಸ್ತಾನು ವಿಭಾಗದ ರಾಘವೇಂದ್ರಗೆ ಮೊದಲೇ ತಿಳಿಸಿದ್ದರೂ ಸಭೆಗೆ ಏಕೆ ಬಂದಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.
ತಾಲೂಕಿನ ರೈತರಿಗೆ ತೊಂದರೆಯಾಗಬಾರದು ಎನ್ನುವ ಕಾರಣಕ್ಕೆ ಪಟ್ಟಣದಲ್ಲಿಯೇ ಟ್ರಾನ್ಸ್‌ಫಾರ್ಮರ್ ದುರಸ್ತಿ ಕೇಂದ್ರ ಆರಂಭ ಮಾಡಲಾಗಿದೆ. ಆದರೆ, ಏನೇನೋ ಕಾರಣಗಳನ್ನು ಹೇಳಿ ರೈತರನ್ನು ಹಗರಿಬೊಮ್ಮನಹಳ್ಳಿ, ಕೊಟ್ಟೂರಿಗೆ ಅಲೆಯುವಂತೆ ಮಾಡಲಾಗುತ್ತಿದೆ. ಯಾವುದೇ ಕಾರಣ ಹೇಳದೆ ಕೂಡ್ಲಿಗಿಯಲ್ಲಿಯೇ ಟ್ರಾನ್ಸ್‌ಫಾರ್ಮರ್‌ಗಳನ್ನು ದುರಸ್ತಿ ಮಾಡಬೇಕು ಎಂದು ಶಾಸಕ ಎನ್.ಟಿ.ಶ್ರೀನಿವಾಸ್ ತಾಕೀತು ಮಾಡಿದರು.