ಹೊಸಪೇಟೆ: ಕೇಂದ್ರ ಸರ್ಕಾರವು 2026–27ರಿಂದ 2030–31ರವರೆಗೆ ಮುಂದಿನ ಐದು ವರ್ಷಗಳ ಅವಧಿಗೆ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ 3.15 ಲಕ್ಷ ಕೋಟಿ ರೂ. ಅನುದಾನ ಮಂಜೂರು ಮಾಡಿ ಮುಂದುವರಿಸಲು ಅನುಮೋದನೆ ನೀಡಿರುವುದು ರೈತರ ಕಲ್ಯಾಣಕ್ಕೆ ಸರ್ಕಾರಕ್ಕಿರುವ ಬದ್ಧತೆಯನ್ನು ಸಾಬೀತುಪಡಿಸಿದೆ ಎಂದು ವಿಜಯನಗರ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಕಿಚಡಿ ಕೊಟ್ರೇಶ್ ತಿಳಿಸಿದರು.
2019ರಲ್ಲಿ ಆರಂಭವಾದ ಈ ಯೋಜನೆ ವಿಶ್ವದ ಅತಿದೊಡ್ಡ ನೇರ ನಗದು ವರ್ಗಾವಣೆ ಯೋಜನೆಯಾಗಿದೆ. ಅರ್ಹ ರೈತರಿಗೆ ವರ್ಷಕ್ಕೆ 6,000 ರೂ. ಹಣವನ್ನು ಮೂರು ಕಂತುಗಳಲ್ಲಿ ಖಾತೆಗೆ ಜಮೆ ಮಾಡಲಾಗುತ್ತಿದೆ. ಇದುವರೆಗೆ 23 ಕಂತುಗಳಲ್ಲಿ 4.46 ಲಕ್ಷ ಕೋಟಿ ರೂ.ಗೂ ಅಧಿಕ ಮೊತ್ತ ನೀಡಲಾಗಿದೆ.
ಈ ಯೋಜನೆಯು ಸಣ್ಣ ಮತ್ತು ಅತಿ ಸಣ್ಣ ರೈತರ ಕೃಷಿ ವೆಚ್ಚ ಹಾಗೂ ಬಿತ್ತನೆ ಕಾರ್ಯಕ್ಕೆ ಆಸರೆಯಾಗಿದ್ದು, ಸಾಲದ ಮೇಲಿನ ಅವಲಂಬನೆ ತಗ್ಗಿಸಿದೆ. ರೈತರು ಇ-ಕೆವೈಸಿ ಪೂರ್ಣಗೊಳಿಸಿ ಯೋಜನೆಯ ಸೌಲಭ್ಯ ಪಡೆಯಬೇಕೆಂದು ಅವರು ಕರೆ ನೀಡಿದ್ದಾರೆ.