ಕಮಲಾಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಭಾನುವಾರ ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಮಗುವಿಗೆ ಪಲ್ಸ್ ಪೋಲಿಯೋ ಹಾಕಿದರು. ಸಂಸದ ಇ.ತುಕಾರಾಂ, ಶಾಸಕರಾದ ಎಚ್.ಆರ್.ಗವಿಯಪ್ಪ, ಡಾ.ಎನ್.ಟಿ.ಶ್ರೀನಿವಾಸ್, ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಎಸ್‌ಪಿ ಎಸ್.ಜಾಹ್ನವಿ, ಜಿಪಂ ಸಿಇಒ ಮೊಹಮ್ಮದ್ ಅಲಿ ಅಕ್ರಂ ಷಾ, ಡಿಸಿಎಫ್ ಎಚ್.ಅನುಪಮಾ, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಜಂಬಯ್ಯ ಇತರರು ಇದ್ದರು.
ಮಕ್ಕಳಿಗೆ ಪಲ್ಸ್ ಪೋಲಿಯೊ ಲಸಿಕೆ ಹಾಕಿ ವಿತ್ತವ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿಕೆ
ಹೊಸಪೇಟೆ: ಸಾಮ್ರಾಜ್ಯ ಸಂಪದ್ಭರಿತವಾಗಿದ್ದರೆ ಜನರೂ ಖುಷಿಯಿಂದ ಇರುತ್ತಾರೆ ಎಂದು ವಿಜಯನಗರ ಕಾಲದ ಅರಸರಿಗೆ ಕಾಳಜಿ ಇತ್ತು. ಜನಸಾಮಾನ್ಯರ ಅಭಿವೃದ್ಧಿಯೇ ಅರಸ ಗುರಿಯಾಗಿತ್ತು. ಇದೇ ಹಾದಿಯನ್ನು ಪ್ರಧಾನಿ ಮೋದಿ ಅವರೂ ತುಳಿದಿದ್ದಾರೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
ತಾಲೂಕಿನ ಕಮಲಾಪುರದಲ್ಲಿ ಸಸಿನೆಡುವ ಕಾರ್ಯಕ್ರಮ ಹಾಗೂ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಕ್ಕಳಿಗೆ ಪಲ್ಸ್ ಪೋಲಿಯೊ ಲಸಿಕೆ ಹಾಕಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
2047ರ ವೇಳೆಗೆ ದೇಶವು ಸಂಪದ್ಭರಿತ ದೇಶವಾಗಿ ಹೊರಹೊಮ್ಮುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ. ನೆಮ್ಮದಿಯಿಂದ ಬದುಕುವಂತೆ ಮಾಡುವ ಸಲುವಾಗಿಯೇ ಹಲವಾರು ಯೋಜನೆಗಳನ್ನು ಪ್ರಧಾನಿ ಅವರು ಜಾರಿಗೆ ತಂದಿದ್ದು, ಸಮರ್ಪಕವಾಗಿ ಅನುಷ್ಠಾನ ಆಗುತ್ತಿವೆ. ವಿಜಯನಗರ ಪ್ರೇರಣೆಯಿಂದ ವಿಜಯನಗರ ಅರಸರ ಹಾದಿಯಲ್ಲೇ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಆಡಳಿತ ನಡೆಸುತ್ತಿದೆ ಎಂದರು.
ಬಜೆಟ್ ಕುರಿತಂತೆ ಹಾಗೂ ದೇಶದ ಆರ್ಥಿಕ ಸ್ಥಿತಿಗತಿ ಕುರಿತಂತೆ ಎರಡು ವರ್ಷಗಳಿಗೆ ಒಮ್ಮೆ ಚಿಂತನ ಶಿಬಿರ ನಡೆಯುತ್ತದೆ, ಈ ಬಾರಿ ಅದನ್ನು ಹಂಪಿಯಲ್ಲಿ ನಡೆಸಿರುವುದಕ್ಕೆ ನಮಗೆ ಬಹಳ ಖುಷಿಯಾಗಿದೆ. ನನ್ನ ಜತೆಗೆ ಇಲಾಖೆಯ 120ಕ್ಕೂ ಅಧಿಕ ಅಧಿಕಾರಿಗಳು ಬಂದಿದ್ದಾರೆ. ಕಾರ್ಪೊರೇಟ್ ವ್ಯವಹಾರ ಖಾತೆ ರಾಜ್ಯ ಸಚಿವ ಹರ್ಷ ಮಲ್ಹೋತ್ರಾ ಸಹಿತ ಇಲ್ಲಿದ್ದಾರೆ. ಎಲ್ಲರೂ ವಿಶ್ವ ಪಾರಂಪರಿಕ ತಾಣ ಹಂಪಿಯನ್ನು ನೋಡಿ ಬಹಳ ಪ್ರೇರಿತರಾಗಿದ್ದಾರೆ ಎಂದರು.
ನೀವು ಚಿಂತನ ಶಿಬಿರದಲ್ಲಿ ಪಾಲ್ಗೊಂಡರಷ್ಟೇ ಸಾಲದು, ಇಲ್ಲಿ ನಿಮ್ಮ ಹೆಜ್ಜೆಗುರುತನ್ನು ಬಲವಾಗಿ ಊರಬೇಕು ಎಂದು ನಾನು ಅಧಿಕಾರಿಗಳಿಗೆ ಹೇಳಿದೆ, ಅದೇ ಕಾರಣಕ್ಕೆ ಅವರೆಲ್ಲರೂ ಇಲ್ಲಿಗೆ ಗಿಡ ನೆಡುವ ಕಾರ್ಯಕ್ರಮಕ್ಕೆ ಬಂದಿದ್ದಾರೆ ಹಾಗೂ ಅವರೆಲ್ಲರೂ ತಮ್ಮ ಹೆಸರಲ್ಲಿ ಒಂದೊಂದು ಗಿಡವನ್ನು ಇಲ್ಲಿ ನೆಟ್ಟಿದ್ದಾರೆ. ದೇಶದ ಭವಿಷ್ಯ ಇರುವುದು ಹಸಿರಿನಲ್ಲಿ, ಹಸಿರನ್ನು ಉಳಿಸುವ ಕೆಲಸ ಆಗಬೇಕು ಎಂಬ ಸಂದೇಶ ಈ ವಿಶ್ವಪಾರಂಪರಿಕ ತಾಣದಿಂದ ರವಾನೆಯಾಗಬೇಕಾಗಿದೆ’ ಎಂದು ಸಚಿವರು ಹೇಳಿದರು.
ಆರೋಗ್ಯ ಇಲಾಖೆಯ ಜತೆಗೆ ಸಾರ್ವಜನಿಕರು ಸಹಕರಿಸಿದ್ದರಿಂದ ದೇಶದಿಂದ ಇಂದು ಪೋಲಿಯೊ ನಿರ್ಮೂಲನೆ ಆಗಿದೆ. ಮತ್ತೆ ಬರಬಾರದೆಂದು ಪಲ್ಸ್ ಪೋಲಿಯೊ ಅಭಿಯಾನ ನಡೆಯುತ್ತಿದೆ. ಈ ಅಭಿಯಾನದಲ್ಲಿ ತೊಡಗಿರುವ ವೈದ್ಯಕೀಯ, ಅರೆವೈದ್ಯಕೀಯ ಹಾಗೂ ಇತರ ಸಿಬ್ಬಂದಿಗೆ ನಾವೆಲ್ಲ ಸಹಕಾರ ನೀಡಬೇಕಾಗಿದೆ. ದೇಶವನ್ನು ಪೋಲಿಯೋ ಮುಕ್ತ ಮಾಡಲು ಶ್ರಮಿಸಬೇಕಿದೆ ಎಂದರು.