ಹಗರಿಬೊಮ್ಮನಹಳ್ಳಿ: ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಬಾಲಕಾರ್ಮಿಕ ಪದ್ಧತಿಯನ್ನು ಕಾನೂನು ಬದ್ಧಗೊಳಿಸಲಿದೆ ಎಂದು ಮರಬ್ಬಿಹಾಳ್ ಗ್ರಾಮದಲ್ಲಿ ಎಐಡಿಎಸ್‌ಒದಿಂದ ಗುರುವಾರ ಪ್ರತಿಭಟನೆ ನಡೆಯಿತು.
ಸಂಘಟನೆ ವಿಜಯನಗರ ಜಿಲ್ಲಾಧ್ಯಕ್ಷ ರವಿಕಿರಣ ಮಾತನಾಡಿ, ಬಾಲಕಾರ್ಮಿಕ ಪದ್ಧತಿಯನ್ನು ಕಾನೂನು ಬದ್ಧಗೊಳಿಸುವ ಮತ್ತು ರಾಜ್ಯದೆಲ್ಲೆಡೆ 40 ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಮುಚ್ಚಲ್ಪಡುವ ಕೆಪಿಎಸ್ ಮ್ಯಾಗ್ನೆಟ್ ಯೋಜನೆಯನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿದರು.
ಎಐಡಿವೈಒ ಜಿಲ್ಲಾಧ್ಯಕ್ಷ ಪಂಪಾಪತಿ ಮಾತನಾಡಿ, ಕೆಪಿಎಸ್‌ಗಳಲ್ಲಿ ಕೌಶಲಗಳ ತರಬೇತಿ ಹೆಸರಿನಲ್ಲಿ ಬಡವರ ಮಕ್ಕಳನ್ನು ಕಾರ್ಮಿಕರನ್ನಾಗಿಸುವ ದೃಷ್ಟಿಯಿಂದ 6ನೇ ತರಗತಿಯಿಂದಲೇ ವೃತ್ತಿ ಶಿಕ್ಷಣವನ್ನು ಕಡ್ಡಾಯಗೊಳಿಸಲಾಗಿದೆ. ಈ ಕುರಿತಾದ ಪಠ್ಯಕ್ರಮವನ್ನು ಉದ್ಯಮ ಪಾಲುದಾರರೊಂದಿಗೆ ರೂಪಿಸಲು ಹೊರಟಿರುವ ಸರ್ಕಾರ ರೈತರು, ಕಾರ್ಮಿಕರ ಮಕ್ಕಳನ್ನು ಕಾರ್ಖಾನೆಗಳಲ್ಲಿ ಅಗ್ಗದ ಕೂಲಿಗೆ ದೂಡುವ ಹುನ್ನಾರ ನಡೆಸಿದೆ ಎಂದು ಆರೋಪಿಸಿದರು.
ಎಐಡಿಎಸ್‌ಒ ಜಿಲ್ಲಾ ಕಾರ್ಯದರ್ಶಿ ಯು.ಉಮಾದೇವಿ, ಜಿಲ್ಲಾ ಜಂಟಿ ಕಾರ್ಯದರ್ಶಿ ಆದಿತ್ಯ, ಸದಸ್ಯರಾದ ಶ್ರೀನಿವಾಸ, ಎಸ್‌ಡಿಎಂಸಿ ಅಧ್ಯಕ್ಷ ಹುಲುಗಪ್ಪ, ಗ್ರಾಪಂ ಸದಸ್ಯ ಹುಲುಗಪ್ಪ, ಪ್ರಮುಖರಾದ ಅಶೋಕಪ್ಪ, ಪಕ್ಕೀರಪ್ಪ, ಹನುಮಂತಪ್ಪ, ಆನಂದಪ್ಪ, ಪಿ.ಹನುಮಂತಪ್ಪ, ಎ.ನಾಗಪ್ಪ ಮತ್ತಿತರರು ಇದ್ದರು.