ಸಿರಗುಪ್ಪದ ವಿಕೆಜಿ ಕಾಲೇಜಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಾದಕ ವಸ್ತುಗಳ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಸಿರಗುಪ್ಪ: ದುಶ್ಚಟಮುಕ್ತ ಸಮಾಜದ ಸಂಕಲ್ಪದೊಂದಿಗೆ ಪ್ರೌಢಾವಸ್ಥೆಯ ಮಕ್ಕಳಲ್ಲಿ ಮಾದಕ ವಸ್ತುಗಳ ಬಗ್ಗೆ ತಿಳಿವಳಿಕೆ ಮೂಡಿಸಿ ಉತ್ತಮ ಸಮಾಜ ನಿರ್ಮಿಸುವುದು ಎಲ್ಲರ ಕರ್ತವ್ಯವಾಗಿದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ತಾಲೂಕು ಕ್ಷೇತ್ರ ಯೋಜನಾಧಿಕಾರಿ ವಸಂತ್ ಹೇಳಿದರು.
ವಿಕೆಜಿ ಕಾಲೇಜ್, ಸರ್ಕಾರಿ ಪದವಿಪೂರ್ವ ಕಾಲೇಜ್, ವಿಶ್ವಜ್ಯೋತಿ ಪದವಿಪೂರ್ವ ಕಾಲೇಜ್ ಹಾಗೂ ದೇಶನೂರು ಸದಾಶಿವ ರೆಡ್ಡಿ ವಸತಿ ಪ್ರೌಢಶಾಲೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬೆಳ್ತಂಗಡಿಯ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ, ಮಧ್ಯಪಾನ ಸಂಯಮ ಮಂಡಳಿ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮಾದಕ ವಸ್ತು ವಿರೋಧಿ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಾಜ್ಯಾದ್ಯಂತ ಏಕಕಾಲಕ್ಕೆ 1018 ಶಾಲಾ-ಕಾಲೇಜುಗಳಲ್ಲಿ ಕಾರ್ಯಕ್ರಮ ಆಯೋಜಿಲಾಗಿದೆ. ಯುವಕರು ಮಾದಕ ವಸ್ತುಗಳ ಸೇವನೆಗೆ ಮಾರುಹೋಗುತ್ತಿದ್ದಾರೆ. ಆದ್ದರಿಂದ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಮೂಲಕ ವಿಶ್ವ ತಂಬಾಕು ವಿರೋಧಿ ದಿನಾಚರಣೆ, ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ, ಮದ್ಯವರ್ಜನ ಶಿಬಿರ, ಮಾದಕ ವಸ್ತು ವಿರೋಧಿ ದಿನಾಚರಣೆ ಆಯೋಜಿಸುತ್ತಿದ್ದು, ಸದ್ಬಳಕೆ ಮಾಡಿಕೊಳ್ಳಿ ಎಂದರು. ನಂತರ ಪ್ರತಿಜ್ಞಾವಿಧಿ ಬೋಧಿಸಲಾಯಿತು.
ಸದಾಶಿವರೆಡ್ಡಿ ಶಾಲೆಯ ಮುಖ್ಯಶಿಕ್ಷಕ ಕುಮಾರ್ ಗೌಡ, ಜನಜಾಗೃತಿ ವೇದಿಕೆ ಸದಸ್ಯ ಶಿವಶಂಕರ್ ರೆಡ್ಡಿ, ಕ್ಷೇತ್ರ ಯೋಜನಾಧಿಕಾರಿ ಎಸ್.ವಸಂತ್, ಕೃಷಿ ಮೇಲ್ವಿಚಾರಕ ವೀರೇಶ, ವಲಯ ಮೇಲ್ವಿಚಾರಕರಾದ ಚಂದ್ರಕಲಾ, ರೇಣುಕಾ, ಪ್ರಿಯಾ, ಸಿಬ್ಬಂದಿ ಇದ್ದರು.