ಬೆಳಗ್ಗೆಯಿಂದ ಸಂಜೆಯವರೆಗೆ ಸಾರ್ವಜನಿಕರ ಅಹವಾಲು ಆಲಿಸುವುದು, ಕಡತಗಳ ವಿಲೇವಾರಿ ಹಾಗೂ ಸರ್ಕಾರದ ಯೋಜನೆಗಳ ಅನುಷ್ಠಾನದಂತಹ ದೈನಂದಿನ ಒತ್ತಡದ ಕೆಲಸದ ನಡುವೆ ನೌಕರರು ತಮ್ಮ ಆರೋಗ್ಯದ ಕಡೆಗೆ ಗಮನ ಹರಿಸುವುದನ್ನೇ ಮರೆತುಬಿಡುತ್ತಾರೆ. ಆದ್ದರಿಂದ ಆರೋಗ್ಯ ಕೈಕೊಟ್ಟಾಗ ಆಸ್ಪತ್ರೆಗೆ ಓಡುವುದಕ್ಕಿಂತ, ಮುಂಜಾಗ್ರತೆಯಾಗಿ ವರ್ಷಕ್ಕೊಮ್ಮೆಯಾದರೂ ಸಂಪೂರ್ಣ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ. ಇಂತಹ ಉಚಿತ ಶಿಬಿರಗಳನ್ನು ಕೇವಲ ಔಪಚಾರಿಕ ಎನ್ನದೆ, ಪ್ರತಿಯೊಬ್ಬ ಮುಂಚೂಣಿ ಸಿಬ್ಬಂದಿಯೂ ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದ ಅವರು, ಜಿಲ್ಲಾಡಳಿತದ ಯಶಸ್ಸು ಸಿಬ್ಬಂದಿ ವರ್ಗದ ಕಾರ್ಯದಕ್ಷತೆಯ ಮೇಲೆ ನಿಂತಿರುತ್ತದೆ. ಸಿಬ್ಬಂದಿಗಳು ಆರೋಗ್ಯವಾಗಿದ್ದರೆ ಮಾತ್ರ ಜಿಲ್ಲೆಯ ಪ್ರಗತಿ ಸಾಧ್ಯ ಎಂದರು.