ಧರ್ಮದ ಕುರಿತು ತಪ್ಪು ಅಭಿಪ್ರಾಯಕ್ಕೆ ಯತ್ನ

ಹರಪನಹಳ್ಳಿ ತೆಗ್ಗಿನಮಠ ಸಂಸ್ಥಾನದ ಆವರಣದಲ್ಲಿ ಡಾ.ಚಂದ್ರಮೌಳೀಶ್ವರ ಶಿವಾಚಾರ್ಯ ಸ್ವಾಮೀಜಿ ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಆಶೀರ್ವಚನ ನೀಡಿದರು.
ಹರಪನಹಳ್ಳಿ ತೆಗ್ಗಿನಮಠ ಸಂಸ್ಥಾನದ ಆವರಣದಲ್ಲಿ ಡಾ.ಚಂದ್ರಮೌಳೀಶ್ವರ ಶಿವಾಚಾರ್ಯ ಸ್ವಾಮೀಜಿ ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಆಶೀರ್ವಚನ ನೀಡಿದರು.
Published on
ಹರಪನಹಳ್ಳಿ: ವೀರಶೈವ ಲಿಂಗಾಯತ ಧರ್ಮದ ಬಗ್ಗೆ ಕೆಲವರು ತಪ್ಪು ಅಭಿಪ್ರಾಯ ಮೂಡಿಸುವ ಹುನ್ನಾರ ನಡೆಸಿದ್ದು, ಅವರು ಈ ಕಾರ್ಯದಲ್ಲಿ ವಿಫಲ ಹೊಂದುವುದು ನಿಶ್ಚಿತವೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.
ಪಟ್ಟಣದ ತೆಗ್ಗಿನಮಠ ಸಂಸ್ಥಾನದ ಆವರಣದಲ್ಲಿ ಡಾ.ಚಂದ್ರಮೌಳೀಶ್ವರ ಶಿವಾಚಾರ್ಯ ಸ್ವಾಮೀಜಿ 11ನೇ ಪುಣ್ಯಾರಾಧನೆ ಮತ್ತು ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ಪಟ್ಟಾಧಿಕಾರದ ಮಂಗಲ ಸಾನ್ನಿಧ್ಯ ವಹಿಸಿ ಬುಧವಾರ ಆಶೀರ್ವಚನ ನೀಡಿದರು. ಹರಪನಹಳ್ಳಿಯಂತಹ ಬೆಂಗಾಡು ಸೀಮೆಯನ್ನು ಬಂಗಾರದ ನಾಡನ್ನಾಗಿ ಮಾಡುವಲ್ಲಿ ಚಂದ್ರಮೌಳೀಶ್ವರ ಶಿವಾಚಾರ್ಯರ ಪಾತ್ರ ಬಹು ಮುಖ್ಯವಾಗಿದೆ. ಚಂದ್ರಮೌಳೀಶ್ವರ ಶಿವಾಚಾರ್ಯರು ಬದುಕಿನುದ್ದಕ್ಕೂ ಕಷ್ಟ ಅನುಭವಿಸಿ ಬೇರೊಬ್ಬರ ಬದುಕಿಗೆ ದಾರಿದೀಪವಾದರು. ಬಹುಕಾಲದ ಪುಣ್ಯದ ಫಲದಿಂದ ಮಾನವರಾಗಿ ಜನ್ಮ ತಾಳಿದ್ದೇವೆ. ಹುಟ್ಟು ಸಾವುಗಳನ್ನು ದೇವನು ಮೊದಲೇ ನಿಶ್ಚಯಿಸಿರುತ್ತಾನೆ. ನಡುವಿನ ಕಾಲವನ್ನು ಸಮೃದ್ಧಗೊಳಿಸಿಕೊಳ್ಳುವುದು ನಮ್ಮ ಕೈಯಲ್ಲಿದೆ ಎಂದು ತಿಳಿಸಿದರು.
ತೆಗ್ಗಿನಮಠ ಸಂಸ್ಥಾನದ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಮಹಾತ್ಮರು ಭವಿಷ್ಯದ ದಿನಗಳ ಬಗ್ಗೆ ಸ್ಪಷ್ಟ ನಿಲುವು ಹೊಂದಿದ್ದರು. ಸತ್ಯ, ನ್ಯಾಯ, ನೀತಿಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಜೀವಿಸಿದರೆ ಆತ್ಮವಿಶ್ವಾಸ ವೃದ್ಧಿಸುತ್ತದೆ. ತೆಗ್ಗಿನಮಠ ಸಂಸ್ಥಾನ ಮತ್ತು ಆಡಳಿತ ಮಂಡಳಿ ಮಧ್ಯೆ ಕೆಲವರು ಹುಳಿ ಹಿಂಡುವ ಕಾರ್ಯ ಮಾಡುತ್ತಿದ್ದಾರೆ ಎಂದರು.
ಚಂದ್ರಮೌಳೀಶ್ವರ ಶಿವಾಚಾರ್ಯರು ಸಂಸ್ಥಾನವನ್ನು ಕಷ್ಟದಿಂದ ಕಟ್ಟಿದ್ದು, ಇದೀಗ ನಾಡಿನ ಪ್ರತಿಷ್ಠಿತ ಮಠಗಳ ಸಾಲಿನಲ್ಲಿ ನಿಂತಿದೆ. ಅಧಿಕಾರ ಮತ್ತು ಹಣದ ವ್ಯಾಮೋಹದಿಂದ ಕೆಲವರು ಸಂಚು ರೂಪಿಸುತ್ತಿದ್ದು, ಅದನ್ನು ಪರಿಗಣಿಸದೆ ಮಠದ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುವುದಾಗಿ ತಿಳಿಸಿದರು.
ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ್ ಮಾತನಾಡಿ, ಹರಪನಹಳ್ಳಿ ವಿದ್ಯಾಸಿರಿ ನಾಡೆಂದು ಪ್ರಸಿದ್ಧಿ ಹೊಂದಲು ತೆಗ್ಗಿನಮಠ ಸಂಸ್ಥಾನದ ಶಿಕ್ಷಣ ಸಂಸ್ಥೆಗಳೇ ಕಾರಣ. ಇಲ್ಲಿ ಶಿಕ್ಷಣ ಪಡೆದವರು-ದೇಶ ವಿದೇಶಗಳಲ್ಲಿ ಉನ್ನತ ಹುದ್ದೆ ಅಲಂಕರಿಸಿದ್ದಾರೆ ಎಂದು ತಿಳಿಸಿದರು.
ಉದ್ಯಮಿಗಳಾದ ಉತ್ತಮ್ ಚಂದ್ ಜೈನ್, ಪಿ.ಮಂಜುನಾಥ, ಪ್ರಮುಖರಾದ ಪಾರ್ವತಿ ಶಾಬಾದಿಮಠ, ಎಚ್.ಎಂ.ಕೊಟ್ರಯ್ಯ, ಟಿ.ಎಂ.ವಿಶ್ವನಾಥ ಇತರರಿದ್ದರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net