ಹಾಲಿ-ಮಾಜಿ ಶಾಸಕರ ನಡುವೆ ವಾಗ್ವಾದ

ತೆಕ್ಕಲಕೋಟೆಯಲ್ಲಿ ಪಟ್ಟಣ ಪಂಚಾಯಿತಿ ಕಟ್ಟಡ ನಿರ್ಮಾಣ ಕುರಿತು ಶಾಸಕ ಬಿ.ಎಂ. ನಾಗರಾಜ ಮತ್ತು ಮಾಜಿ ಶಾಸಕ ಎಂ.ಎಸ್. ಸೋಮಲಿಂಗಪ್ಪ ನಡುವೆ ವಾಗ್ವಾದ ನಡೆಯಿತು. ಕಾಂಗ್ರೆಸ್ ಮುಖಂಡರಾದ ಮಲ್ಲಿಕಾರ್ಜುನ ಬಾಲಪ್ಪ, ನರೇಂದ್ರಸಿಂಹ ಇತರರಿದ್ದರು.
ತೆಕ್ಕಲಕೋಟೆಯಲ್ಲಿ ಪಟ್ಟಣ ಪಂಚಾಯಿತಿ ಕಟ್ಟಡ ನಿರ್ಮಾಣ ಕುರಿತು ಶಾಸಕ ಬಿ.ಎಂ. ನಾಗರಾಜ ಮತ್ತು ಮಾಜಿ ಶಾಸಕ ಎಂ.ಎಸ್. ಸೋಮಲಿಂಗಪ್ಪ ನಡುವೆ ವಾಗ್ವಾದ ನಡೆಯಿತು. ಕಾಂಗ್ರೆಸ್ ಮುಖಂಡರಾದ ಮಲ್ಲಿಕಾರ್ಜುನ ಬಾಲಪ್ಪ, ನರೇಂದ್ರಸಿಂಹ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ನಿಗದಿತ ಸ್ಥಳದಲ್ಲಿ ಪಪಂ ಕಟ್ಟಡ ನಿರ್ಮಾಣಕ್ಕೆ ಎಂ.ಎಸ್. ಸೋಮಲಿಂಗಪ್ಪ ವಿರೋಧ

ಸಿರಗುಪ್ಪ:

ಬಡ ಕುಟುಂಬಗಳ ಗುಡಿಸಲುಗಳನ್ನು ತೆರವುಗೊಳಿಸಿ ಅದೇ ಜಾಗದಲ್ಲಿ ಪಟ್ಟಣ ಪಂಚಾಯಿತಿಯ ನೂತನ ಕಾರ್ಯಾಲಯ ಕಟ್ಟಡ ನಿರ್ಮಾಣಕ್ಕೆ ಮುಂದಾಗಿರುವುದಕ್ಕೆ ಶಾಸಕ ಬಿ.ಎಂ. ನಾಗರಾಜ ಹಾಗೂ ಮಾಜಿ ಶಾಸಕ ಎಂ.ಎಸ್. ಸೋಮಲಿಂಗಪ್ಪ ನಡುವೆ ವಾಗ್ವಾದ ನಡೆಯಿತು.

ಹಿನ್ನೆಲೆ: ತಾಲೂಕಿನ ತೆಕ್ಕಲಕೋಟೆ 2ನೇ ವಾರ್ಡ್ ನಿಟ್ಟೂರು ರಸ್ತೆಯಲ್ಲಿರುವ ಪೌರಕಾರ್ಮಿಕರ ವಸತಿಗೃಹ ಜಾಗದಲ್ಲಿ ಪಪಂ ಕಚೇರಿ ಕಟ್ಟಡ ನಿರ್ಮಿಸಲು ಅನಧಿಕೃತ ಗುಡಿಸಲುಗಳ ತೆರವು ಕಾರ್ಯಾಚರಣೆ ನಡೆದ ಸ್ಥಳದ ಪಕ್ಕದಲ್ಲಿ ದೇವರಾಜ ಅರಸು ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ ಕಟ್ಟಡ ಕಾಮಗಾರಿ ಭೂಮಿಪೂಜೆ ನೆರವೇರಿಸಲು ಶಾಸಕ ನಾಗರಾಜ ಆಗಮಿಸಿದ್ದರು. ಈ ವೇಳೆ ಸ್ಥಳಕ್ಕಾಗಮಿಸಿದ ಮಾಜಿ ಶಾಸಕ ಸೋಮಲಿಂಗಪ್ಪ, ಪಪಂ ಕಟ್ಟಡ ನಿರ್ಮಾಣ ಕುರಿತು ತೀವ್ರ ವಿರೋಧ ವ್ಯಕ್ತಪಡಿಸಿದರು.
ಎರಡು ಎಕರೆ ಜಾಗದಲ್ಲಿ ಈಗಾಗಲೇ ಪೊಲೀಸ್ ವಸತಿಗೃಹ, ನೀರಾವರಿ ಇಲಾಖೆ ವಸತಿಗೃಹ, ಪಶು ಆಸ್ಪತ್ರೆ ಹಾಗೂ ಇಂದಿರಾ ಕ್ಯಾಂಟೀನ್‌ಗೆ ಬಹುತೇಕ ಜಾಗ ಬಳಕೆಯಾಗಿದೆ. ಪೌರಕಾರ್ಮಿಕರ ವಸತಿಗೃಹಕ್ಕೆ ಮೀಸಲಿಟ್ಟಿರುವ ಜಾಗದಲ್ಲಿ ಪಪಂ ಕಚೇರಿ ಕಟ್ಟಡ ನಿರ್ಮಾಣ ಸರಿಯಲ್ಲ. ಮುಂದಿನ ದಿನಗಳಲ್ಲಿ ಪಟ್ಟಣದ ಜನಸಂಖ್ಯೆ ಹೆಚ್ಚಾದಂತೆ ರಸ್ತೆ ವಿಸ್ತರಣೆಗೊಳ್ಳುವ ಸಂಭವ ಇದೆ. ಹೀಗಾಗಿ ರಾಷ್ಟ್ರೀಯ ಹೆದ್ದಾರಿ ಸಮೀಪ ಕೆಇಬಿ ಹಿಂಭಾಗದಲ್ಲಿರುವ ಜಾಗದಲ್ಲಿ ಕಚೇರಿ ನಿರ್ಮಿಸುವಂತೆ ಆಗ್ರಹಿಸಿದರು.
ಸ್ಥಳದಲ್ಲಿ ಧರಣಿ ನಡೆಸುತ್ತಿದ್ದ ಕುಟುಂಬಗಳನ್ನು ಶಾಸಕ ಬಿ.ಎಂ. ನಾಗರಾಜ ಭೇಟಿ ಮಾಡಿ, ಸರ್ಕಾರದಿಂದ ಪರಿಹಾರ ಹಾಗೂ ನಿವೇಶನ ಕಲ್ಪಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.
ಸಿಪಿಐಗಳಾದ ಚಂದನ್ ಗೋಪಾಲ, ಹನುಮಂತಪ್ಪ, ಪಿಎಸ್‌ಐಗಳಾದ ಸದ್ದಾಂ ಹುಸೇನ್, ಪರಶುರಾಮ, ಶಶಿಧರ ನಾಯಕ ನೇತೃತ್ವದಲ್ಲಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು.
ಕಾಂಗ್ರೆಸ್ ಮುಖಂಡರಾದ ಮಲ್ಲಿಕಾರ್ಜುನ ಬಾಲಪ್ಪ, ನಾಗಪ್ಪ, ನರೇಂದ್ರಸಿಂಹ, ಶ್ಯಾಮಸುಂದರ, ಖಾದರ್‌ಬಾಷಾ, ಬಿಜೆಪಿ ತಾಲೂಕು ಅಧ್ಯಕ್ಷ ಕುಂಟ್ನಾಳ್ ಮಲ್ಲಿಕಾರ್ಜುನಸ್ವಾಮಿ, ಮಂಜುನಾಥ, ರಾಘವೇಂದ್ರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net