

ಹೂವಿನಹಡಗಲಿ : ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ನೂತನ ಕಂಚಿನ ಪುತ್ತಳಿ ನಿರ್ಮಾಣ ಮಾಡುವ ಹಿನ್ನಲೆಯಲ್ಲಿ ಜಾಲರಿಯಲ್ಲಿದ್ದಅಂಬೇಡ್ಕರ್ ಪುತ್ತಳಿಯನ್ನು ತಾಲೂಕು ಆಡಳಿತದ ಸಮ್ಮುಖದಲ್ಲಿ ಬುಧವಾರ ತೆರವುಗೊಳಿಸಿ,ಸ್ಥಳಾಂತರಿಸಲಾಯಿತು.
ತಾಲೂಕು ಆಡಳಿತದಿಂದ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ತಳಿಯನ್ನು ತೆರವು ಗೊಳಿಸಿ ಪಟ್ಟಣದ ಗ್ರಂಥಾಲಯದ ಹಳೆ ಕಟ್ಟಡದಲ್ಲಿ ಇರಿಸಲಾಗಿದೆ. ಪುತ್ತಳಿಯನ್ನು ಜಾಲರಿ ಮುಕ್ತಗೊಳಿಸುವಂತೆ ಒತ್ತಾಯಿಸಿ ಅನೇಕ ದಲಿತಪರ ಸಂಘಟನೆಗಳು ಒತ್ತಾಯಿಸಿದ್ದವು.ಇನ್ನು ದಲಿತ ಸಮಾಜದವರು ಅಂಬೇಡ್ಕರ್ ಜಯಂತಿಯ ಪೂರ್ವಬಾವಿ ಸಭೆಯನ್ನು ಬಹಿಷ್ಕರಿಸಿ ಜಾಲರಿ ತೆರವಿಗೆ ಒತ್ತಾಯಿಸಿದ್ದರು.
ಶಾಸಕ ಕೃಷ್ಣನಾಯ್ಕ ಅವರು ನೂತನ ಪುತ್ತಳಿ ನಿರ್ಮಾಣದ ಭರವಸೆ ನೀಡಿದ್ದು ಅದಕ್ಕೆ ಪೂರಕವಾಗಿ ಪುತ್ತಳಿಯನ್ನು ಸ್ಥಳಾಂತರಿಸಲಾಗಿದೆ.
ಈ ಸಂದರ್ಭದಲ್ಲಿ ತಹಸೀಲ್ದಾರ್ ಕೆ.ಎಂ.ಗುರುಬಸವರಾಜ, ಪುರಸಭೆ ಮುಖ್ಯಾಧಿಕಾರಿ ಹನುಮಂತಪ್ಪ, ಸಮಾಜಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಆನಂದ ಡೊಳ್ಳಿನ, ಸಿಪಿಐ ಮಲ್ಲಪ್ಪ ಹೂಗಾರ ಇತರರಿದ್ದರು.