ಜನಮನ ಸೆಳೆದ ಜಾನಪದ ವಾಹಿನಿ

ಗುಡೇಕೋಟೆಯಲ್ಲಿ ಒನಕೆ ಓಬವ್ವ ಉತ್ಸವ ಹಿನ್ನೆಲೆಯಲ್ಲಿ ಅದ್ದೂರಿ ಶೋಭಾಯಾತ್ರೆ ನಡೆಯಿತು.
ಗುಡೇಕೋಟೆಯಲ್ಲಿ ಒನಕೆ ಓಬವ್ವ ಉತ್ಸವ ಹಿನ್ನೆಲೆಯಲ್ಲಿ ಅದ್ದೂರಿ ಶೋಭಾಯಾತ್ರೆ ನಡೆಯಿತು.
Published on
ಗುಡೇಕೋಟೆ (ಕಾನಹೊಸಹಳ್ಳಿ): ಗ್ರಾಮದ ಪ್ರಮುಖ ಬೀದಿಯಲ್ಲಿ ಜಾನಪದ ಕಲಾಲೋಕ ಮೇಳೈಸಿತು. ಜಿಲ್ಲೆಯ ನಾನಾ ಭಾಗಗಳಿಂದ ಬಂದಿದ್ದ ಕಲಾವಿದರು ಮತ್ತು ಕಲಾತಂಡಗಳು ಜಾನಪದ ಲೋಕ ಸೃಷ್ಟಿಸಿದರು. ಜಾನಪದ ಕಲಾ ಮೆರವಣಿಗೆಗೆ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಚಾಲನೆ ನೀಡಿದರು,
ಶಿವಪಾರ್ವತಿ ದೇವಸ್ಥಾನದಿಂದ ಆರಂಭವಾದ ಜಾನಪದ ವಾಹಿನಿ (ಶೋಭಾಯಾತ್ರೆ) ಮೆರವಣಿಗೆಯಲ್ಲಿ ಕಲಾವಿದರು ಹೆಜ್ಜೆ ಹಾಕಿದರು. ಸಿಂಗಾರಗೊಂಡ ಎತ್ತಿನಗಾಡಿಯಲ್ಲಿ ಕನ್ನಡ ತಾಯಿ ಭುವನೇಶ್ವರಿ, ಒನಕೆ ಓಬವ್ವ ಭಾವಚಿತ್ರ, ಗ್ರಾಮದ ಪರಿಸರದಲ್ಲಿರುವ ಸ್ಮಾರಕಗಳು, ಕರಡಿಧಾಮದಲ್ಲಿರುವ ವನ್ಯಜೀವಿಗಳ ಸ್ತಬ್ಧಚಿತ್ರಗಳು ಸಾಗಿದವು. ರಸ್ತೆಯ ಎರಡು ಬದಿ ನಿಂತಿದ್ದ ಸಾವಿರಾರು ಜನರು ಕಲಾವಿದರನ್ನು ಹುರಿದುಂಬಿಸಿದರು. ಜನರು ಫೋಟೋ, ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು. ಕಾಲೇಜ್ ಅವರಣದಲ್ಲಿನ ಒನಕೆ ಓಬವ್ವ ವೇದಿಕೆವರೆಗೆ ಮೆರವಣಿಗೆ ನಡೆಯಿತು.
ಚೌಡಪುರದ ಮಲ್ಲಿಕಾರ್ಜುನ ತಂಡದ ಸಮಾಳ, ನಂದಿಧ್ವಜ ಕುಣಿತ, ಮಂಜುನಾಥ, ಈಶ್ವರಪ್ಪ ತಂಡದ ಕೋಲಾಟ, ಓಬಳೇಶ್, ರಾಮಚಂದ್ರ, ರಾಮಣ್ಣ ಬಸಪ್ಪ ತಂಡ, ಕುದುರೆಡವು ರಾಜಣ್ಣ ಮತ್ತು ಮಾರಬನಹಳ್ಳಿ ಮಾರಪ್ಪ ಹಾಗೂ ಇಮಡಾಪುರದ ಲಕ್ಷ್ಮೀ ಮಹಿಳಾ ತಂಡದ ಉರುಮೆ ವಾದ್ಯ ವಾದನವು ಜನರ ಗಮನ ಸೆಳೆದವು. ಉಡುಪಿ ಹೃತಿಕ್ ತಂಡದ ಹುಲಿವೇಷ ಕುಣಿತ, ಸಿಡೇಗಲ್ಲು ರಾಜು, ಸಿಡೇಗಲ್ಲು ಹೊನ್ನೂರಸ್ವಾಮಿ ತಂಡದ ಚೌಡಿಕಿ ವಾದನ, ಹಂಪಾಪಟ್ಟಣದ ನಾಗರಾಜ ಗಂಟೆ ತಂಡದ ಜಾನಪದ ಕೈಚಳಕ ಬೆರಗು ಮೂಡಿಸಿತು.
ಓಬಳಾಪುರ ಓಬಣ್ಣ ಮತ್ತು ಗುಡೇಕೋಟೆ ಸಿದ್ದಮೂರ್ತಿ ತಂಡದ ಹಲಗೆವಾದನ, ಹರಪನಹಳ್ಳಿ ಮೂರ್ತಿ ಮತ್ತು ಕೂಡ್ಲಿಗಿ ಬಿಕ್ಷಾವತಿ ತಂಡದ ಹಗಲುವೇಷಗಾರರ ಕುಣಿತ, ಬೆಳ್ಳಕಟ್ಟೆ ಸಿದ್ದಪ್ಪ ತಂಡದ ಕಹಳೆ, ಶ್ರೀಧರ್‌ಆಚಾರ್ ತಂಡದ ರಾಮಡೊಳ್ಳು, ಗೊಂಬೆ ಕುಳಿತ, ಕೋಲಾಟ ನೃತ್ಯ ಶೋಭಾಯಾತ್ರೆಗೆ ಮೆರುಗು ತಂದವು.
ಶೋಭಾಯತ್ರೆಯಲ್ಲಿ 48 ಕಲಾ ತಂಡಗಳು ಭಾಗವಹಿಸಿದ್ದವು. ಮೆರವಣಗೆಯಲ್ಲಿ ಗ್ರಾಮದ 20ಕ್ಕೂ ಹೆಚ್ಚು ರೈತರು ಎತ್ತಿನಗಾಡಿ ಸಿಂಗರಿಸಿ ಭಾಗವಹಿಸಿದ್ದರು. ನೂರಾರು ಮಹಿಳೆಯರು ಪೂರ್ಣಕುಂಭ ಹೊತ್ತು ಸಾಗಿದರು. ತಹಸೀಲ್ದಾರ್ ವಿ.ಕೆ.ನೇತ್ರಾವತಿ, ತಾಪಂ ಇಒ ನರಸಪ್ಪ, ಗ್ರಾಪಂ ಅಧ್ಯಕ್ಷ ಎನ್.ಕೃಷ್ಣ, ಎನ್.ಟಿ.ತಮ್ಮಣ್ಣ, ಕೆಇಬಿ ಗೋವೀಂದಪ್ಪ, ತಾಲೂಕು ಮಟ್ಟದ ಅಧಿಕಾರಿಗಳು, ಸ್ಥಳೀಯ ಮುಖಂಡರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net