ವನ್ಯಜೀವಿಗಳ ಪಾಲಿಗೆ ಹೊಸ ಸಂತಾನದ ತವರುಮನೆ

ಹಂಪಿ ಜೂನಲ್ಲಿ ಲಡ್ಡು ಮರಿಯೊಂದಿಗೆ ಸೀತಾ (ಹಿಪ್ಪೋಪೊಟಮಸ್)
ಹಂಪಿ ಜೂನಲ್ಲಿ ಲಡ್ಡು ಮರಿಯೊಂದಿಗೆ ಸೀತಾ (ಹಿಪ್ಪೋಪೊಟಮಸ್)
Published on

ಪ್ರಮುಖ ಮುಖ್ಯಾಂಶಗಳು

  • ಹಂಪಿ ಮೃಗಾಲಯದಲ್ಲಿ ಹಮಾಡ್ರಿಯಾಸ್ ಬಾಬೂನ್‌ನಿಂದ ಲಡ್ಡು ಹಿಪ್ಪೋವರೆಗೆ ಸಂಭ್ರಮದ ಮರಿಗಳ ಕಲರವ
ಹೊಸಪೇಟೆ: ಐತಿಹಾಸಿಕ ಹಂಪಿಯ ಸಾಲುಮರಗಳ ನಡುವೆ ಮೈದಳೆದಿರುವ 'ಅಟಲ್ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನವನ' (ಹಂಪಿ ಜೂ), ಕೇವಲ ಪ್ರಾಣಿ-ಪಕ್ಷಿಗಳ ಪ್ರದರ್ಶನ ಕೇಂದ್ರವಾಗಿ ಉಳಿದಿಲ್ಲ. ಬದಲಾಗಿ, ಇದು ವನ್ಯಜೀವಿಗಳ ಪಾಲಿಗೆ ಅತ್ಯಂತ ಸುರಕ್ಷಿತ 'ತವರುಮನೆ'ಯಾಗಿ ಮಾರ್ಪಟ್ಟಿದೆ. ವನ್ಯಜೀವಿಗಳ ವೈಜ್ಞಾನಿಕ ನಿರ್ವಹಣೆಯ ಫಲವಾಗಿ ಇಲ್ಲಿ ಅಪರೂಪದ ಪ್ರಾಣಿಗಳ ಸಂತಾನೋತ್ಪತ್ತಿ ಯಶಸ್ವಿಯಾಗಿ ನಡೆಯುತ್ತಿದ್ದು, ಪ್ರಾಣಿಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಫಾರಿ ಸೌಲಭ್ಯ ಹೊಂದಿರುವ ಏಕೈಕ ಮೃಗಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಉದ್ಯಾನವನ, ಪ್ರಾಣಿಗಳಿಗೆ ನೈಸರ್ಗಿಕ ವಾತಾವರಣವನ್ನು ಒದಗಿಸುವಲ್ಲಿ ಯಶಸ್ವಿಯಾಗಿದೆ. ಇಲ್ಲಿನ ಹವಾಮಾನ ಮತ್ತು ಪೋಷಣಾ ಕ್ರಮಗಳು ವಿದೇಶಿ ಮೂಲದ ಪ್ರಾಣಿಗಳಿಗೂ ವರದಾನವಾಗಿ ಪರಿಣಮಿಸಿವೆ. ವಿದೇಶಿ ಪ್ರಾಣಿಗಳ 'ಬಾಣಂತನ'ದ ತಾಣ ಈ ಮೃಗಾಲಯದಲ್ಲಿ ವಿಶೇಷವಾಗಿ ಆಫ್ರಿಕಾ ಮೂಲದ ಹಮಾಡ್ರಿಯಾಸ್ ಬಾಬೂನ್‌ಗಳು, ಬಾರ್ಕಿಂಗ್ ಡೀರ್‌ಗಳು ಮತ್ತು ಹಿಪ್ಪೋಪೊಟಮಸ್‌ಗಳು ಸಂತಾನೋತ್ಪತ್ತಿ ನಡೆಸುವ ಮೂಲಕ ಎಲ್ಲರ ಗಮನ ಸೆಳೆದಿವೆ. ಆಫ್ರಿಕಾ ಮೂಲದ ಈ ಅಪರೂಪದ ಪ್ರಾಣಿಗಳು ಇಲ್ಲಿನ ಹವಾಮಾನಕ್ಕೆ ಅಚ್ಚುಕಟ್ಟಾಗಿ ಹೊಂದಿಕೊAಡಿವೆ. ಕಳೆದ ಎರಡು ವರ್ಷಗಳಲ್ಲಿ ಈ ಜೋಡಿ ಮೂರು ಮರಿಗಳಿಗೆ ಜನ್ಮ ನೀಡಿದ್ದು, ಸದ್ಯದಲ್ಲೇ ಮತ್ತೊಂದು ಮರಿಯ ಆಗಮನದ ನಿರೀಕ್ಷೆಯಿದೆ. ತನ್ನ ವಿಶಿಷ್ಟ ಕೂಗಿನಿಂದಲೇ ಗಮನ ಸೆಳೆಯುವ ಬಾರ್ಕಿಂಗ್ ಡೀರ್‌ಗಳ ಸಂಖ್ಯೆ ಇದೀಗ 9ಕ್ಕೆ ಏರಿಕೆಯಾಗಿದೆ. ಕಳೆದ ವರ್ಷ 6 ಇದ್ದ ಈ ಪ್ರಾಣಿಗಳ ಬಳಗಕ್ಕೆ, ಅಧಿಕಾರಿಗಳ ಮೈಕ್ರೋ ಕ್ರೈಮೇಟ್ ನಿರ್ವಹಣೆಯಿಂದಾಗಿ ಈ ವರ್ಷ ಮೂರು ಮರಿಗಳು ಹೊಸದಾಗಿ ಸೇರ್ಪಡೆಯಾಗಿವೆ. ಬನ್ನೇರುಘಟ್ಟದಿಂದ ಬಂದಿದ್ದ 32 ವರ್ಷದ ಸೀತಾ ಹೆಸರಿನ ಹೆಣ್ಣು ಹಿಪ್ಪೋ, ಗಂಡು ಮರಿಗೆ ಜನ್ಮ ನೀಡಿದ್ದು, ಅದಕ್ಕೆ 'ಲಡ್ಡು' ಎಂದು ನಾಮಕರಣ ಮಾಡಲಾಗಿದೆ. 8 ತಿಂಗಳಿನ ಈ ಮರಿ ಮತ್ತು ತಾಯಿ ಸೀತಾ ಆರೋಗ್ಯವಾಗಿವೆ.

ಉತ್ತಮ ಹವಾಮಾನ

ಪ್ರಾಣಿಗಳು ಒತ್ತಡ ಮುಕ್ತವಾಗಿ ಲವಲವಿಕೆಯಿಂದ ಇರಲು ಇಲ್ಲಿನ ಹವಾಮಾನ ಮತ್ತು ಅಧಿಕಾರಿಗಳ ಕಾಳಜಿ ಪ್ರಮುಖ ಕಾರಣವಾಗಿದೆ. ಪೌಷ್ಟಿಕ ಆಹಾರ ಪೂರೈಕೆ, ದೈಹಿಕ ಚಟುವಟಿಕೆಗೆ ಸೂಕ್ತ ವ್ಯವಸ್ಥೆ ಮತ್ತು ಉಷ್ಣಾಂಶದ ನಿರ್ವಹಣೆ ಪ್ರಾಣಿಗಳ ಸಂತಾನೋತ್ಪತ್ತಿಗೆ ಪೂರಕವಾಗಿದೆ. ಮುಂಬರುವ ದಿನಗಳಲ್ಲಿ ಜಿರಾಫೆ ಮತ್ತು ಸಿಂಹಗಳ ಸಂತಾನೋತ್ಪತ್ತಿಯ ನಿರೀಕ್ಷೆಯಲ್ಲೂ ಮೃಗಾಲಯದ ಆಡಳಿತ ಮಂಡಳಿಯಿದೆ. ಮೃಗಾಲಯದ ಅಕರ್ಷಣೆಯನ್ನು ಹೆಚ್ಚಿಸಲು ಆಫ್ರಿಕನ್ ಪಕ್ಷಿಗಳನ್ನು ತರಿಸುವ ಯೋಜನೆಯೂ ಜಾರಿಯಲ್ಲಿದೆ.
"

ಪ್ರಾಣಿಗಳಿಗೆ ಪೌಷ್ಟಿಕ ಆಹಾರ, ಮನರಂಜನೆ ಹಾಗೂ ಸೂಕ್ತ ಹವಾಮಾನ ಒದಗಿಸಲಾಗುತ್ತಿದೆ. ಮೃಗಾಲಯವನ್ನು ಉತ್ತಮ ಸಂರಕ್ಷಣಾ ಮತ್ತು ಸಂವರ್ಧನಾ ಕೇಂದ್ರವಾಗಿ ರೂಪಿಸುವುದೇ ನಮ್ಮ ಗುರಿ.

— ಡಾ.ಎಸ್.ರಾಜೇಶ್ ನಾಯ್ಕ, ಉಪ ಅರಣ್ಯ ಸಂರಕ್ಷಣಾಧಿಕಾರಿ, ಹಂಪಿ ಜೂ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net