ಎಎಸ್‌ಐ ಹಂಪಿ ವೃತ್ತದ ಅಧೀಕ್ಷಕ ಕೆ.ರಾಮಕೃಷ್ಣ ರೆಡ್ಡಿ ಮಾತನಾಡಿ, ಹಂಪಿಯ ಸ್ಮಾರಕಗಳ ವೈಭವದ ಜತೆಗೆ ಪರಿಸರದ ಸಮತೋಲನ ಕಾಯ್ದುಕೊಳ್ಳುವುದು ನಮ್ಮ ಪ್ರಮುಖ ಧ್ಯೇಯ. ಹಂಪಿಯಲ್ಲಿ ವ್ಯಾಪಕ ಹಸಿರು ಸೌಂದರ್ಯೀಕರಣ ಕೈಗೊಳ್ಳುವ ದೃಢ ಸಂಕಲ್ಪವನ್ನು ನಾವು ಹೊಂದಿದ್ದೇವೆ. ಇಲ್ಲಿ ನೆಡುತ್ತಿರುವ ಹಣ್ಣಿನ ಗಿಡಗಳು ಬೆಳೆದಂತೆ, ಈ ಭಾಗದಲ್ಲಿರುವ ಕೋತಿಗಳು ಹಾಗೂ ವಿವಿಧ ಬಗೆಯ ವನ್ಯಜೀವಿ, ಪಕ್ಷಿ-ಸಂಕುಲಕ್ಕೆ ನೈಸರ್ಗಿಕ ಆಹಾರ ಮತ್ತು ಆಸರೆ ಒದಗಿಸಲು ಅತ್ಯಂತ ಸಹಕಾರಿಯಾಗಲಿವೆ. ಆದ್ದರಿಂದ ಹಂಪಿಯ ವಾತಾವರಣಕ್ಕೆ ಪೂರಕವಾದ ವಿವಿಧ ತಳಿಗಳ ಗಿಡಗಳನ್ನು ನೆಡಲಾಗಿದ್ದು ಸೀಬೆ 50 ಗಿಡಗಳು, ನೇರಳೆ 20 ಗಿಡಗಳು, 15 ಮಾವಿನ ಗಿಡಗಳು, ನೆಲ್ಲಿಕಾಯಿ 15 ಗಿಡಗಳು ನೆಡಲಾಯಿತು ಎಂದು ತಿಳಿಸಿದರು.