ವಿಜಯನಗರದಲ್ಲಿ ಸಡಗರದ ನಾಗರ ಪಂಚಮಿ

ಹೊಸಪೇಟೆ ಭಟ್ರಳ್ಳಿ ಆಂಜನೇಯ ದೇಗುಲದ ಆವರಣದಲ್ಲಿ ನಾಗರ ಮೂರ್ತಿಗಳಿಗೆ ಹಾಲೆರೆದು ಹರಿಕೆ ತೀರಿಸಿದ ಭಕ್ತರು.
ಹೊಸಪೇಟೆ ಭಟ್ರಳ್ಳಿ ಆಂಜನೇಯ ದೇಗುಲದ ಆವರಣದಲ್ಲಿ ನಾಗರ ಮೂರ್ತಿಗಳಿಗೆ ಹಾಲೆರೆದು ಹರಿಕೆ ತೀರಿಸಿದ ಭಕ್ತರು.
Published on
ಹೊಸಪೇಟೆ: ವಿಜಯನಗರ ಜಿಲ್ಲೆಯಾದ್ಯಂತ ಶ್ರಾವಣ ಮಾಸದ ಮೊದಲ ಸೋಮವಾರ ಹಾಗೂ ನಾಗರ ಪಂಚಮಿಯನ್ನು ಭಕ್ತಿ, ಶ್ರದ್ಧೆ ಮತ್ತು ಸಂಭ್ರಮದಿಂದ ಆಚರಿಸಲಾಯಿತು. ಜಿಲ್ಲಾ ಕೇಂದ್ರ ಸೇರಿದಂತೆ ಗ್ರಾಮೀಣ ಭಾಗಗಳ ನಾನಾ ಕಡೆಗಳಲ್ಲಿ ಹಬ್ಬದ ಕಳೆ ಮನೆಮಾಡಿತ್ತು.
ತಾಲೂಕಿನ ಐತಿಹಾಸಿಕ ಕ್ಷೇತ್ರವಾದ ಬುಕ್ಕಸಾಗರದ ಏಳು ಹೆಡೆ ನಾಗಪ್ಪ ದೇಗುಲದಲ್ಲಿ ಮುಂಜಾನೆಯಿಂದಲೇ ಭಕ್ತರ ದಂಡು ಜಮಾಯಿಸಿತ್ತು. ಭಕ್ತರು ಸರತಿ ಸಾಲಿನಲ್ಲಿ ನಿಂತು ನಾಗದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ದರ್ಶನ ಪಡೆದರು. ಪ್ರಮುಖ ದೇಗುಲಗಳು ಹಾಗೂ ವಿವಿಧ ಬಡಾವಣೆಗಳಲ್ಲಿರುವ ನಾಗ ದೇವತೆಗಳ ವಿಗ್ರಹಗಳಿಗೆ ಮತ್ತು ನೈಸರ್ಗಿಕ ಹುತ್ತಗಳಿಗೆ ಭಕ್ತರು ಭಕ್ತಿಯಿಂದ ಹಾಲೇರೆದರು.
ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳು ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿ, ನಾಗಪ್ಪನಿಗೆ ಹಾಲು, ಅರಿಶಿನ-ಕುಂಕುಮ, ಹೂ, ಕಾಯಿ, ಹಣ್ಣುಗಳನ್ನು ಸಮರ್ಪಿಸಿ ಪೂಜೆ ಸಲ್ಲಿಸಿದರು. ತಂಬಿಟ್ಟು, ಎಳ್ಳುಂಡೆ, ಅರಳಿನ ನೈವೇದ್ಯ ಅರ್ಪಿಸಿ ಕುಟುಂಬದ ಸುಖ-ಶಾಂತಿ ಹಾಗೂ ಸಮೃದ್ಧಿಗಾಗಿ ಪ್ರಾರ್ಥಿಸಿದರು.
ಹಬ್ಬದ ಪ್ರಯುಕ್ತ ಮಾರುಕಟ್ಟೆಗಳಲ್ಲಿ ಹೂವು-ಹಣ್ಣುಗಳ ಖರೀದಿ ಜೋರಾಗಿದ್ದರೆ, ದೇಗುಲಗಳಲ್ಲಿ ವಿಶೇಷ ಅಲಂಕಾರ ಹಾಗೂ ಪ್ರಸಾದ ವಿನಿಯೋಗ ವ್ಯವಸ್ಥೆ ಮಾಡಲಾಗಿತ್ತು. ಒಟ್ಟಾರೆಯಾಗಿ ಜಿಲ್ಲೆಯಾದ್ಯಂತ ನಾಗರ ಪಂಚಮಿ ಹಬ್ಬವು ಅತ್ಯಂತ ಶ್ರದ್ಧಾಭಕ್ತಿ ಹಾಗೂ ಸಡಗರದಿಂದ ಸಂಪನ್ನಗೊಂಡಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net