ಮುಖ್ಯಶಿಕ್ಷಕರಿಗೆ ಹೊರೆ ಮೊಟ್ಟೆ

ಎಐ
ಎಐ
Published on

ಪ್ರಮುಖ ಮುಖ್ಯಾಂಶಗಳು

  • ದರ ಏರಿಕೆಯಿಂದ ಜೇಬಿಗೆ ಕತ್ತರಿ
  • ಬೇಡಿಕೆಗೆ ಸ್ಪಂದಿಸದ ಸರ್ಕಾರ
ಹೊಸಪೇಟೆ: ಮಾರುಕಟ್ಟೆಯಲ್ಲಿ ಮೊಟ್ಟೆ ಬೆಲೆ ಹೆಚ್ಚಳವಾಗಿದೆ. ಇದರಿಂದಾಗಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಜೇಬಿಗೆ ಕತ್ತರಿ ಬೀಳುತ್ತಿದೆ.
ರಾಜ್ಯ ಸರ್ಕಾರ ಒಂದು ಮೊಟ್ಟೆಗೆ 6 ರೂ. ನೀಡುತ್ತಿದ್ದು, ಮಾರುಕಟ್ಟೆಯಲ್ಲಿ ಮೊಟ್ಟೆ ಬೆಲೆ8ರೂ. ಆಗಿದೆ. ಇದರಿಂದಾಗಿ ಪ್ರತಿ ಮೊಟ್ಟೆಗೆ ಶಾಲೆಯ ಮುಖ್ಯ ಶಿಕ್ಷಕರು ಹೆಚ್ಚುವರಿಯಾಗಿ ಹಣ ಪಾವತಿಸಬೇಕಾಗಿದೆ. ಕನಿಷ್ಠ 100 ಮಕ್ಕಳಿರುವ ಶಾಲೆಯಲ್ಲಿ ತಿಂಗಳಿಗೆ ಕನಿಷ್ಠ 10 ಸಾವಿರ ರೂ. ಮುಖ್ಯ ಶಿಕ್ಷಕರಿಗೆ ಹೊರೆಯಾಗುತ್ತಿದೆ. ಮುಖ್ಯಕ್ಷಕರಿಗೆ ಮಾಸಿಕ ಸರಾಸರಿ 50ರಿಂದ 60 ಸಾವಿರ ರೂ. ನಿವ್ವಳ ಸಂಬಳ ಸಿಗುತ್ತದೆ. ಇದರಲ್ಲೇ 10 ಸಾವಿರ ರೂ.ವರೆಗೆ ಮೊಟ್ಟೆಗೆ ನೀಡಬೇಕಾಗಿದೆ.
ಸರ್ಕಾರ ಒಂದು ಮೊಟ್ಟೆಗೆ 6 ರೂ. ನೀಡುತ್ತಿದ್ದರೂ, ಈ ಪೈಕಿ 5 ರೂ. ಮೊಟ್ಟೆಗೆ, 50 ಪೈಸೆ ಅಡುಗೆ ಅನಿಲ ಬಳಕೆಗೆ, 20 ಪೈಸೆ ನಾಗಣೆ ವೆಚ್ಚ, 30 ಪೈಸೆ ಮೊಟ್ಟೆ ಸುಲಿಯುವವರಿಗೆ ನೀಡಬೇಕಾಗಿದೆ. ಇದೀಗ ಒಂದು ಮೊಟ್ಟೆಗೇ 8 ರೂಪಾಯಿ ನೀಡಬೇಕಾಗಿರುವುದರಿಂದ ಅಡುಗೆ ಅನಿಲ, ಮೊಟ್ಟೆ ಸುಲಿಯುವವರ ಹಣ ನೀಡುವುದು ಹೇಗೆ ಎಂಬ ಪ್ರಶ್ನೆ ಎದುರಾಗಿದೆ.
ಹೋಲ್‌ ಸೇಲ್ ದರದಲ್ಲಿ ಮೊಟ್ಟೆ ಖರೀದಿಸುವುದಾದರೆ ಮೊಟ್ಟೆಗಳನ್ನು ಸಂಗ್ರಹಿಸಿಡಲು ಶಾಲೆಗಳಲ್ಲಿ ವ್ಯವಸ್ಥೆ ಇಲ್ಲ. ಮೊಟ್ಟೆ ಅಥವಾ ಬಾಳೆಹಣ್ಣನ್ನು ಹೆಚ್ಚು ದಿನ ಸಂಗ್ರಹಿಸಿಡಲಾಗದು. ಇದರಿಂದಾಗಿ ಪ್ರತಿ ಮೊಟ್ಟೆಗೆ ನೀಡುತ್ತಿರುವ ಹಣವನ್ನು 9 ರೂ.ಗೆ ಏರಿಸಬೇಕೆಂದು ಶಿಕ್ಷಣ ಸಚಿವರು, ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಶಿಕ್ಷಕರು ಮನವಿ ಸಲ್ಲಿಸಿದ್ದಾರೆ. ಮಾರುಕಟ್ಟೆಗೆ ಅನುಗುಣವಾಗಿ ಮೊಟ್ಟೆ ದರ ಪರಿಷ್ಕರಿಸಬೇಕೆಂಬುದು ಶಿಕ್ಷಕರ ಕೋರಿಕೆಯಾಗಿದೆ.

ಎಲ್‌ಜಿ-ಯುಕೆಜಿ ಮಕ್ಕಳಿಗೂ ಮೊಟ್ಟೆ

ರಾಜ್ಯ ಸರ್ಕಾರ ಎಲ್‌ಜಿ, ಯುಕೆಜಿ ಮಕ್ಕಳಿಗೂ ಮೊಟ್ಟೆ ನೀಡಲು ಆದೇಶಿಸಿದೆ. ಸರ್ಕಾರಿ ಶಾಲೆಗಳಲ್ಲಿನ ಎಲ್‌ ಕೆಜಿ, ಯುಕೆಜಿ ಮಕ್ಕಳಿಗೆ ಮೊಟ್ಟೆ ಕೊಡಬೇಕೆಂಬ ಬೇಡಿಕೆಗೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿರುವುದು ಸ್ವಾಗತಾರ್ಹ. ಆದರೆ ದರ ಏರಿಕೆಯಿಂದಾಗಿ ಶಿಕ್ಷಕರು ಹೆಚ್ಚುವರಿ ಖರ್ಚು ಮಾಡಬೇಕಾಗಿದೆ.
"

ಮೊಟ್ಟೆ ದರ ಏರಿಕೆಯಾಗಿದೆ. ಶಿಕ್ಷಕರು ಮೊಟ್ಟೆ ಅಥವಾ ಬಾಳೆಹಣ್ಣು ಹಣವನ್ನು ಹೊಂದಾಣಿಕೆ ಮಾಡಿಕೊಂಡು ಮಕ್ಕಳಿಗೆ ಪೂರೈಸುತ್ತಿದ್ದಾರೆ. ದರ ಪರಿಷ್ಕರಣೆ ಬಗ್ಗೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಹೆಚ್ಚು ಅನುದಾನ ನೀಡುವ ನಿರೀಕ್ಷೆ ಇದೆ.

"

ಸರ್ಕಾರ ಮೊಟ್ಟೆ ಖರೀದಿ, ಸಾಗಣೆ-ಅಡುಗೆ ಅನಿಲ ವೆಚ್ಚ ಹಾಗೂ ಸುಲಿಯುವವರಿಗೆ 30 ಪೈಸೆ ಒಳಗೊಂಡಂತೆ ಆರು ರೂ. ನೀಡುತ್ತಿದೆ. ಇದೀಗ ಮಾರುಕಟ್ಟೆಯಲ್ಲಿ ಮೊಟ್ಟೆ ದರ 8 ರೂ. ಆಗಿದೆ. ಆದ್ದರಿಂದ ನಾನಾ ವೆಚ್ಚಗಳು ಒಳಗೊಂಡಂತೆ ಪ್ರತಿ ಮೊಟ್ಟೆಗೆ ಕನಿಷ್ಠ ಒಂಬತ್ತು ರೂ. ನೀಡಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net