ಹೊಸ ಕ್ರಸ್ಟ್ ಗೇಟ್‌ಗಳಿಗೆ ತಾಕಿತು 10 ಅಡಿ ನೀರು

ತುಂಗಭದ್ರಾ ಜಲಶಯದ ನೀರಿನ ಮಟ್ಟ
ತುಂಗಭದ್ರಾ ಜಲಶಯದ ನೀರಿನ ಮಟ್ಟ
Published on

ಪ್ರಮುಖ ಮುಖ್ಯಾಂಶಗಳು

  • ತುಂಗಭದ್ರಾ ಜಲಾಶಯದ ಎಂಜಿನಿಯರಿಂಗ್ ಕೌಶಲಕ್ಕೆ ಜಲರಾಶಿಯೇ ಸಾಕ್ಷಿ
  • ಆತಂಕದಿಂದ ನಿಟ್ಟುಸಿರೆಳೆದ ಕೋಟ್ಯಂತರ ರೈತರು
  • ಹನಿ ನೀರೂ ಸೋರಲ್ಲ
ಮಂಜುನಾಥ ಅಯ್ಯಸ್ವಾಮಿ ​

ಹೊಸಪೇಟೆ

​ಮೂರು ರಾಜ್ಯಗಳ ಜೀವನಾಡಿ ತುಂಗಭದ್ರಾ ಜಲಾಶಯದ ಭದ್ರತೆಗೆ ಎದುರಾಗಿದ್ದ ದೊಡ್ಡ ಆತಂಕ ಕೊನೆಗೂ ದೂರವಾಗಿದೆ. ನೂತನವಾಗಿ ಅಳವಡಿಸಲಾದ ಸ್ಟೀಲ್ ಕ್ರಸ್ಟ್ ಗೇಟ್‌ಗಳಿಗೆ ಪ್ರಥಮ ಬಾರಿಗೆ ಭಾರಿ ಪ್ರಮಾಣದ ನೀರು ತಾಗಿದ್ದು, ತಾಂತ್ರಿಕ ಪರೀಕ್ಷೆಯಲ್ಲಿ ಶೇ. 100ರಷ್ಟು ಯಶಸ್ಸು ಕಂಡಿದೆ. 10 ಅಡಿಯಷ್ಟು ನೀರು ಗೇಟ್‌ಗಳನ್ನು ಸ್ಪರ್ಶಿಸಿ ನಿಂತಿದ್ದರೂ ಹನಿ ನೀರು ಸೋರದಿರುವುದು ಮೂರೂ ರಾಜ್ಯಗಳ ಲಕ್ಷಾಂತರ ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ.
ಒಂದೂವರೆ ತಿಂಗಳ ಹಿಂದಷ್ಟೇ ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣ—ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಉಪಸ್ಥಿತಿಯಲ್ಲಿ ಲೋಕಾರ್ಪಣೆಗೊಂಡಿದ್ದ ನೂತನ ಗೇಟ್‌ಗಳನ್ನು ಸ್ಪರ್ಶಿಸಿ 10 ಅಡಿಯಷ್ಟು ಜಲರಾಶಿ ನಿಂತಿದ್ದು, ಎಲ್ಲೂ ಒಂದು ಹನಿ ನೀರೂ ಸೋರದೆ ಇಂಜಿನಿಯರಿಂಗ್ ಚಮತ್ಕಾರಕ್ಕೆ ಸಾಕ್ಷಿಯಾಗಿದೆ. ಕಳೆದ ಬಾರಿಯ ಆತಂಕವನ್ನು ಮೆಟ್ಟಿ ನಿಂತಿರುವ ತುಂಗಭದ್ರಾ ಜಲಾಶಯ ಇದೀಗ ಲಕ್ಷಾಂತರ ರೈತರ ಮೊಗದಲ್ಲಿ ಹಸನ್ಮುಖಿ ತಂದಿದ್ದು, ಮೂರು ರಾಜ್ಯಗಳ ಕೃಷಿ ಭೂಮಿಗೆ ಸಮೃದ್ಧಿಯ ಭರವಸೆ ನೀಡಿದೆ.
​ಜಲಾನಯನ ಪ್ರದೇಶಗಳಲ್ಲಿ ಸುರಿಯುತ್ತಿರುವ ಸತತ ಮಳೆಯಿಂದಾಗಿ ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಗಣನೀಯವಾಗಿ ಹೆಚ್ಚಾಗಿದೆ. ಇದರ ಪರಿಣಾಮವಾಗಿ ಜಲಾಶಯದ ನೀರಿನ ಮಟ್ಟ ಏರಿಕೆಯಾಗಿದ್ದು, ಹೊಸದಾಗಿ ಅಳವಡಿಸಲಾದ ಸ್ಟೀಲ್ ಕ್ರಸ್ಟ್ ಗೇಟ್‌ಗಳನ್ನು ಸ್ಪರ್ಶಿಸಿ ಸುಮಾರು 10 ಅಡಿಯಷ್ಟು ಎತ್ತರಕ್ಕೆ ನೀರು ಸಂಗ್ರಹವಾಗಿದೆ. ತಾಂತ್ರಿಕವಾಗಿ ಅತ್ಯಂತ ಸವಾಲಿನಿಂದ ಕೂಡಿದ್ದ ಈ ಗೇಟ್‌ಗಳ ಜೋಡಣೆ ಕಾರ್ಯ ನೂರಕ್ಕೆ ನೂರರಷ್ಟು ಯಶಸ್ವಿಯಾಗಿದೆ ಎಂಬುದಕ್ಕೆ ಈಗ ನಿಂತಿರುವ ಜಲರಾಶಿಯೇ ಸಾಕ್ಷಿ. ಗೇಟ್‌ನ ಯಾವುದೇ ಭಾಗದಲ್ಲೂ ಸಣ್ಣ ಹನಿ ನೀರು ಸೋರಿಕೆಯಾಗದಿರುವುದು ಎಂಜಿನಿಯರಿಂಗ್ ವಿಭಾಗದ ದಕ್ಷತೆಗೆ ಹಿಡಿದ ಕನ್ನಡಿಯಾಗಿದೆ.

ಮೂರು ರಾಜ್ಯಗಳಿಗೆ ವರ

ಕಳೆದ ಬಾರಿಯ ತಾಂತ್ರಿಕ ಅಡಚಣೆಯಿಂದಾಗಿ ರೈತರಲ್ಲಿ ಮೂಡಿದ್ದ ಭೀತಿ ಇದೀಗ ಸಂಪೂರ್ಣವಾಗಿ ದೂರವಾಗಿದೆ. ತಜ್ಞರ ಮಾರ್ಗದರ್ಶನದಲ್ಲಿ ನಿರ್ಮಿಸಲಾದ ಈ ನೂತನ ಗೇಟ್‌ಗಳು ಭಾರಿ ಜಲಒತ್ತಡವನ್ನು ಸುಲಭವಾಗಿ ತಡೆದಿಂತಿವೆ. 10 ಅಡಿ ನೀರು ನೇರವಾಗಿ ಗೇಟ್‌ಗೆ ತಾಗಿದ್ದರೂ ಯಾವುದೇ ರೀತಿಯ ನಡುಕವಾಗಲಿ, ನೀರು ಸೋರುವುದಾಗಲಿ ಕಂಡುಬಂದಿಲ್ಲ. ಕರ್ನಾಟಕದ ಬಳ್ಳಾರಿ, ಕೊಪ್ಪಳ, ರಾಯಚೂರು ಸೇರಿದಂತೆ ಆಂಧ್ರ ಹಾಗೂ ತೆಲಂಗಾಣದ ಕೋಟ್ಯಂತರ ಎಕರೆ ಕೃಷಿ ಭೂಮಿಗೆ ನೀರಾವರಿ ಭರವಸೆ ಸಿಕ್ಕಂತಾಗಿದೆ. ಜಲಾಶಯದ ನೀರಿನ ಸಾಮರ್ಥ್ಯವನ್ನು ಯಶಸ್ವಿಯಾಗಿ ನಿರ್ವಹಿಸುತ್ತಿರುವ ಹೊಸ ಗೇಟ್‌ಗಳ ಕಾರ್ಯಕ್ಷಮತೆಗೆ ನೀರಾವರಿ ತಜ್ಞರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅಚ್ಚುಕಟ್ಟು ಪ್ರದೇಶದಲ್ಲಿ ಹೊಸ ಸಂಭ್ರಮ

ಕೇವಲ ಒಂದೂವರೆ ತಿಂಗಳ ಹಿಂದೆ ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಲೋಕಾರ್ಪಣೆಗೊಂಡ ಈ ಯೋಜನೆ, ಈಗ ಪ್ರತ್ಯಕ್ಷವಾಗಿ ತನ್ನ ಶಕ್ತಿಯನ್ನು ಸಾಬೀತುಪಡಿಸಿದೆ. ಜಲಾಶಯದಲ್ಲಿ ಭಾರಿ ನೀರು ಸಂಗ್ರಹವಾಗುತ್ತಿರುವುದು ಮತ್ತು ಹೊಸ ಗೇಟ್‌ಗಳು ಸುರಕ್ಷಿತವಾಗಿರುವುದು ಕಂಡು ಕೃಷಿಕರು ನಿಟ್ಟುಸಿರು ಬಿಟ್ಟಿದ್ದಾರೆ. ತುಂಗಭದ್ರಾ ಜಲಾಶಯವು ಮತ್ತೆ ತನ್ನ ಪೂರ್ಣ ವೈಭವಕ್ಕೆ ಮರಳಿದ್ದು, ಈ ಬಾರಿಯ ಬೆಳೆಗೆ ಯಾವುದೇ ನೀರಿನ ಅಭಾವ ಎದುರಾಗುವುದಿಲ್ಲ ಎಂಬ ವಿಶ್ವಾಸ ಮೂಡಿದೆ.

ಭರ್ತಿಗೆ 33 ಟಿಎಂಸಿ ಬಾಕಿ

ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ತುಂಗಭದ್ರಾ ಜಲಾಶಯಕ್ಕೆ ಜೀವಕಳೆ ಬಂದಿದ್ದು, 105.788 ಟಿಎಂಸಿ ನೀರು ಸಂಗ್ರಹಣಾ ಸಾಮರ್ಥ್ಯ ಹೊಂದಿರುವ ತುಂಗಭದ್ರಾ ಜಲಾಶಯದಲ್ಲಿ ಶನಿವಾರದ ವೇಳೆಗೆ ಭರಪೂರ 72.264 ಟಿಎಂಸಿಗೆ ಏರಿಕೆಯಾಗಿದೆ. ಸಂಪೂರ್ಣ ಭರ್ತಿಯಾಗಲು ಇನ್ನು ಕೇವಲ 33 ಟಿಎಂಸಿ ನೀರು ಮಾತ್ರ ಅಗತ್ಯವಿದೆ. ಜಲಾಶಯದಲ್ಲಿ ಸದ್ಯ 42 ಸಾವಿರ‌ ಕ್ಯೂಸೆಕ್ ಒಳಹರಿವು ಇದೆ. 1623.68 ಅಡಿ ನೀರು ಸಂಗ್ರವಾಗಿದೆ. ಪ್ರಸ್ತುತ ಹರಿದು ಬರುತ್ತಿರುವ ಒಳಹರಿವಿನ ವೇಗ ನೋಡಿದರೆ, ಇನ್ನು ಕೆಲವೇ ದಿನಗಳಲ್ಲಿ ಜಲಾಶಯ ಸಂಪೂರ್ಣವಾಗಿ ಕೋಡಿ ಬೀಳುವ ಹಂತಕ್ಕೆ ತಲುಪಲಿದೆ.
"

ಹೊಸದಾಗಿ ಅಳವಡಿಸಲಾದ ಸ್ಟೀಲ್ ಕ್ರಸ್ಟ್ ಗೇಟ್‌ಗಳ ತಾಂತ್ರಿಕ ಸಾಮರ್ಥ್ಯ ಅತ್ಯುತ್ತಮವಾಗಿದೆ. ಜಲಾಶಯದಲ್ಲಿ 10 ಅಡಿಯಷ್ಟು ನೀರು ನಿಂತಿದ್ದರೂ ಎಲ್ಲೂ ಹನಿ ಸೋರಿಕೆ ಕಂಡುಬಂದಿಲ್ಲ. ಜಲಒತ್ತಡ ನಿರ್ವಹಣೆ ಸಂಪೂರ್ಣ ಯಶಸ್ವಿಯಾಗಿದ್ದು, ಒಳಹರಿವು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಣೆಕಟ್ಟಿನ ಭದ್ರತೆಯನ್ನು ನಿರಂತರವಾಗಿ ಕಟ್ಟುನಿಟ್ಟಾಗಿ ಪರಿಶೀಲಿಸಲಾಗುತ್ತಿದೆ.

— ನಾರಾಯಣ ನಾಯ್ಕ, ಇಇ, ಟಿಬಿಡ್ಯಾಂ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net