ಅಗಳಿಯಲ್ಲಿದೆ ವಿಜಯನಗರದ ಶಾಸನ

3
Published on

ವಿಜಯವಾಣಿ ಸುದ್ದಿಜಾಲ ತುಮಕೂರು
ವಿಜಯನಗರ ಸಾಮ್ರಾಜ್ಯದ ಅಧೀನದಲ್ಲಿ ಆಳ್ವಿಕೆ ಮಾಡುತ್ತಿದ್ದ ಹರತಿ-ನಿಡುಗಲ್​ ಪಾಳೇಗಾರ ದೇವಪ್ಪನಾಯಕನ ಕಾಲದ ತಾಮ್ರ ಶಾಸನ ಮಧುಗಿರಿ ತಾಲೂಕಿನ ಗಡಿಭಾಗದ ಅಗಳಿಯಲ್ಲಿ ಪತ್ತೆಯಾಗಿದೆ.


ಈ ಶಾಸನವನ್ನು ಗ್ರಾಮಸ್ಥ ಸದಾಶಿವಯ್ಯ ಸಂರಕ್ಷಿಸಿಟ್ಟುಕೊಂಡಿದ್ದು, ತಾಮ್ರ ಲೋಹದ ಹಲಗೆಯ ಎರಡೂ ಮುಖದಲ್ಲಿ ಕನ್ನಡ ಲಿಪಿಯಲ್ಲಿ ಬರೆದಿದ್ದರೂ ಭಾಷೆ ಮಾತ್ರ ಸಂಸತ ಮತ್ತು ತೆಲುಗು ಆಗಿದೆ. ಈ ತಾಮ್ರಶಾಸನವು ಒಟ್ಟು 49 ಸಾಲುಗಳಿಂದ ಕೂಡಿದೆ ಎಂದು ತುಮಕೂರಿನ ಇತಿಹಾಸ ಸಂಶೋಧಕ ಡಾ.ಡಿ.ಎನ್​. ಯೋಗೀಶ್ವರಪ್ಪ ವಿಶ್ಲೇಷಿಸಿದ್ದಾರೆ. ಈ ತಾಮ್ರ ಶಾಸನವನ್ನು ಜಯಪತ್ರಿಕೆ ಎಂದು ಕರೆಯಲಾಗಿದ್ದು, ವಿಜಯನಗರದ ಚಕ್ರವರ್ತಿ ಬುಕ್ಕರಾಯನನ್ನು (1399&-1406) ಉಲ್ಲೇಖಿಸುತ್ತದೆ. ಶಾರದಾ ಸ್ತುತಿಯಿಂದ ಆರಂಭವಾಗುವ ಈ ಶಾಸನವು ಸಂಸತ ಶ್ಲೋಕಗಳಿಂದ ಕೂಡಿದ್ದು, ಆ ನಂತರ ತೆಲುಗು ಭಾಷೆಯನ್ನು ಕನ್ನಡ ಲಿಪಿಯಲ್ಲಿ ಬರೆಯಲಾಗಿದೆ. ಇದು, ಅಗಳಿ ಗ್ರಾಮದ ಶಂಕರೇಶ್ವರ ದೇವರಿಗೆ ಸಂಬಂಧಪಟ್ಟಿದ್ದು, ಹರತಿ-ನಿಡುಗಲ್​ ಪಾಳೇಗಾರರ ವಂಶದ ದೇವಪ್ಪನಾಯಕನು ತನ್ನ ರಾಜ್ಯಕ್ಕೆ ಸೇರಿದ್ದ ಅಗಳಿಯ ಶಂಕರೇಶ್ವರ ದೇವರಿಗೆ ದೇವಮಾನ್ಯವಾಗಿ ಆ ಊರಿಗೆ ಸೇರಿದ್ದ ಕೆರೆ, ಕಟ್ಟೆ, ಕುಂಟೆ, ಬಾವಿ, ಹೊಲ, ಗದ್ದೆಯ ಜತೆಗೆ ಆ ಊರಿನ ಜನರಿಂದ ಸಂಗ್ರಹವಾದ ತೆರಿಗೆಯನ್ನು ದಾನ ಮಾಡಿದ್ದನು. ಈ ದಾನವನ್ನು ಆತ ಆ ದೇವಾಲಯದ ಆಡಳಿತವನ್ನು ನೋಡಿಕೊಳ್ಳುತ್ತಿದ್ದ ಹದಿನೆಂಟು ಜನರಿಗೆ ಒಂದೊಂದು ವೃತ್ತಿಯನ್ನಾಗಿ ವಿಂಗಡಿಸಿ ನೀಡಿದನೆಂದು ಶಾಸನದಲ್ಲಿ ಉಲ್ಲೇಖಿಸಲಾಗಿದೆ. ಅನಂತರ ಈ ದಾನವನ್ನು ಮತ್ತೆ ಹದಿಮೂರು ಜನರಿಗೆ ವಿಸ್ತರಿಸಿ ನೀಡಿದ್ದನ್ನು ದಾಖಲಿಸಿರುವುದರಿಂದ ಇದನ್ನು ಹೆಚ್ಚಿನ ಜಯಪತ್ರಿಕೆ ಎಂದು ಕರೆಯಲಾಗಿದೆ.

ಇದನ್ನು ಪಡೆದವರು: 1.ತೆಲುಗು ಬಣಜಿಗ ಮದನಗೌಡ (ಗೌಡ) 2.ವುಳಿ ಕುಂಚಿಟಿಗ ರಂಗನಗೌಡ (ಪಟೇಲ) 3. ಕರಣಂಭದ್ರಪ್ಪ (ಶ್ಯಾನುಭೋಗ) 4.ಜಾಯಸ್ಯ ನಾರಾಯಣಭಟ್ಟ (ಜ್ಯೋತಿಷ) 5.ತಲಾರ ಮಾಧ (ಪಹರೆ, ತಳವಾರ) 6. ಕಮ್ಮಾರ ಚನ್ನಯ್ಯ 7.ಬಡಗಿ ಕೆಂಪಯ್ಯ 8. ಚಾಕಲ ಚನ್ನ (ಅಕ್ಕಸಾಲಿ) 9. ಮಂಗಳ ಭದ್ರ (ನಾಯಿಂದ) 10. ಅಂಗಜಾಲ ಕೊಂಡ (ರಕ್ಷಕ) 11. ಕುಂಬಾರ ಮಲ್ಲ 12. ತೋಟಿ ಕದ್ರಿ (ಸೇವಕ, ಜಾಡಮಾಲಿ) 13. ಎಡಗೈ ಓಬ ಇವರೆಲ್ಲ ದೇವರ ಕಾರ್ಯವನ್ನು ವಂಶಪಾರಂಪರ್ಯವಾಗಿ ನಡೆಸಿಕೊಂಡು ಹೋಗಬೇಕೆಂದು ಮಧನಗೌಡ, ವುಳಿ ರಂಗನಗೌಡನ ಹೆಸರಿನಲ್ಲಿ ಹೆಚ್ಚಿನ ಜಯಪತ್ರಿಕೆಯನ್ನು ಬರೆದುಕೊಡಲಾಗಿದೆ.

ಈಗಲೂ ಸಹ ಆ ಊರಿನಲ್ಲಿ ಮಹಾನವಮಿ ಹಬ್ಬದ ಸಂದರ್ಭದಲ್ಲಿ ತಾಮ್ರ ಶಾಸನದಲ್ಲಿ ತಿಳಿಸಿರುವ ವ್ಯಕ್ತಿಗಳ ವಂಶಸ್ಥರು ಶಂಕರೇಶ್ವರ ದೇವಾಲಯದ ಆವರಣದಲ್ಲಿ ಸಭೆ ಸೇರಿ ಮಹಾನವಮಿಯ 9 ದಿನದ ಧಾರ್ಮಿಕ ಆಚರಣೆಯ ಬಗ್ಗೆ ಚರ್ಚಿಸಿ ತಮಗೆ ನಿಗದಿಯಾಗಿರುವ ಸೇವೆಗಳನ್ನು ಮಾಡುತ್ತಿದ್ದಾರೆ. ಈಗ ಇವರನ್ನೆಲ್ಲಾ ದೇವರ ಕೈವಾಡದವರು ಎಂದು ಕರೆಯಲಾಗುತ್ತಿದೆ. ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಆರಂಭವಾದ ಈ ಪರಂಪರೆ ಆ ಊರಿನಲ್ಲಿ ಈಗಲೂ ಮುಂದುವರಿಯುತ್ತಿರುವುದು ವಿಶೇಷವಾಗಿದೆ. | ಡಾ. ಡಿ.ಎನ್​.ಯೋಗೀಶ್ವರಪ್ಪ, ಇತಿಹಾಸ ಸಂಶೋಧಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net