ದಸರಾ ಸ್ತಬ್ಧಚಿತ್ರದಲ್ಲಿ ವಿಜಯನಗರ ವೈಭವ!

DASARA SATHBDHA CHITRA
Published on


ಅವಿನಾಶ್ ಜೈನಹಳ್ಳಿ ಮೈಸೂರು
ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಜಂಬೂಸವಾರಿ ಮೆರವಣಿಗೆಯಲ್ಲಿ ಈ ಬಾರಿ ಶ್ರೀಕೃಷ್ಣದೇವರಾಯರ ಆಡಳಿತದಲ್ಲಿನ ವಿಜಯನಗರ ಸಾಮ್ರಾಜ್ಯದ ವೈಭವ ಅನಾವರಣವಾಗಲಿದೆ…
ಅಷ್ಟೇ ಅಲ್ಲ, ಹೊಯ್ಸಳರ ಕಾಲದ ಸೋಮನಾಥಪುರದ ಚನ್ನಕೇಶವ ದೇವಾಲಯದ ಶಿಲ್ಪಕಲಾ ಸೊಬಗನ್ನು ತಿಳಿಸುವ ಪ್ರಯತ್ನವೂ ನಡೆಯುತ್ತಿದೆ.ದಸರಾ ಉತ್ಸವದಲ್ಲಿ ಈ ಬಾರಿ ರಾಜ್ಯದ ಪ್ರಮುಖ ಪ್ರವಾಸಿ ತಾಣಗಳು, ಧಾರ್ಮಿಕ ಸ್ಥಳಗಳು, ಎಲ್ಲ ಜಿಲ್ಲೆಗಳ ಐತಿಹಾಸಿಕ ಮತ್ತು ಪ್ರಾಕೃತಿಕ ತಾಣಗಳನ್ನು ಪರಿಚಿಸುವ ಹಲವು ಸ್ತಬ್ಧಚಿತ್ರಗಳು ಜನಾಕರ್ಷಿಸಲಿವೆ. ಆಯಾ ಜಿಲ್ಲೆಯ ಜಿಐ (ಜಿಯಾಗ್ರಫಿಕಲ್ ಇಂಡಿಕೇಷನ್) ವಸ್ತುಗಳ ಬಗ್ಗೆ ತಿಳಿಸುವ ಹಾಗೂ ಕನ್ನಡ ನಾಡು-ನುಡಿ, ಸಂಸ್ಕೃತಿ ಬಿಂಬಿಸುವ ಸ್ತಬ್ಧಚಿತ್ರಗಳು ಗಮನ ಸೆಳೆಯಲಿವೆ.


ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ಸ್ತಬ್ಧಚಿತ್ರಗಳ ಮೆರವಣಿಗೆ ಈ ಬಾರಿ ಎಂದಿನಂತೆ ಆಯೋಜಿಸಲು ಸ್ತಬ್ಧಚಿತ್ರಗಳ ಉಪಸಮಿತಿ ಸಿದ್ಧತೆ ನಡೆಸುತ್ತಿದೆ. ವಿಜಯ ದಶಮಿಯಂದು ನಡೆಯುವ ಜಂಬೂಸವಾರಿ ಮೆರವಣಿಗೆಯಲ್ಲಿ 43 ಸ್ತಬ್ಧಚಿತ್ರಗಳು ಭಾಗವಹಿಸಲಿದ್ದು, ಮೈಸೂರು ಜಿಲ್ಲೆಯ ಸೋಮನಾಥಪುರ ದೇಗುಲ ಪ್ರಮುಖ ಆಕರ್ಷಣೆಯಾಗಿದೆ.
ತಿ.ನರಸೀಪುರ ತಾಲೂಕಿನ ಸೋಮನಾಥಪುರದಲ್ಲಿರುವ ಅತ್ಯದ್ಭುತ ವಾಸ್ತುಶಿಲ್ಪ, ಕಲೆಯನ್ನು ಹೊಂದಿರುವ ಚನ್ನಕೇಶವ ದೇಗುಲದ ಮಾದರಿಯ ಸ್ತಬ್ಧಚಿತ್ರವನ್ನು ಮೈಸೂರು ಜಿಲ್ಲಾ ಪಂಚಾಯಿತಿ ನಿರ್ಮಾಣ ಮಾಡುತ್ತಿದೆ. ಹಾಸನ ಜಿಲ್ಲೆಯಿಂದ ಹೊಯ್ಸಳರ ಕಾಲದ ಬೇಲೂರು, ಹಳೇಬೀಡು ದೇವಸ್ಥಾನದ ಜತೆಗೆ, ಮಲೆನಾಡಿನ ಸೌಂದರ್ಯ ತಿಳಿಸುವ ಸ್ತಬ್ಧಚಿತ್ರ ಸಿದ್ಧವಾಗಲಿದೆ.
ವಿಜಯನಗರ ಜಿಲ್ಲೆಯಿಂದ ಶ್ರೀಕೃಷ್ಣದೇವರಾಯರ ಆಡಳಿತದಲ್ಲಿನ ವಿಜಯನಗರ ಸಾಮ್ರಾಜ್ಯದ ವೈಭವ, ಹಂಪಿ ಬಗ್ಗೆ ತಿಳಿಸುವ ಸ್ತಬ್ಧಚಿತ್ರ ಸಿದ್ಧವಾಗುತ್ತಿದೆ. ಕಾರ್ಕಳದ ಗೊಮ್ಮಟೇಶ್ವರ, ಉಡುಪಿ ಜನರ ಜೀವನಾಧಾರವಾದ ಮೀನುಗಾರಿಕೆ, ಉತ್ತರ ಕನ್ನಡದ ಪ್ರಾಕೃತಿಕ ಸೊಬಗು, ಚಿಕ್ಕಮಗಳೂರಿನ ಐತಿಹಾಸಿಕ ತಾಣಗಳು, ಮಂಡ್ಯದ ಕೆಆರ್‌ಎಸ್, ಶ್ರೀರಂಗಪಟ್ಟಣ, ಮೇಲುಕೋಟೆ ಸೇರಿದಂತೆ ಇತರ ಧಾರ್ಮಿಕ ಸ್ಥಳಗಳು, ಕೊಡಗು ಜಿಲ್ಲೆಯ ಕೊಡವರ ವೀರ ಪರಂಪರೆ, ಚಾಮರಾಜನರದಿಂದ ವನ್ಯಸಂಪತ್ತು, ಶಿವಮೊಗ್ಗದಿಂದ ಶರಣ ಪರಂಪರೆ ಒಳಗೊಂಡ ಸ್ತಬ್ಧಚಿತ್ರಗಳು ಪ್ರಮುಖ ಆಕರ್ಷಣೆಯಾಗಿರಲಿವೆ. ಇದರ ಜತೆಗೆ ಉಳಿದ ಜಿಲ್ಲೆಗಳಿಂದ ‘ಒಂದು ಜಿಲ್ಲೆ-ಒಂದು ಉತ್ಪನ್ನ’ ಸಾರುವ ಸ್ತಬ್ಧಚಿತ್ರಗಳೂ ಇರಲಿವೆ. ದೇಶದ ಅಮೃತ ಮಹೋತ್ಸವ ಕುರಿತ ಸ್ತಬ್ಧಚಿತ್ರವೂ ಇರಲಿದೆ.


43 ಸ್ತಬ್ಧಚಿತ್ರಗಳು ಭಾಗಿ:
ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಉತ್ಸವಕ್ಕೆ ದಿನಗಣನೆ ಶುರುವಾಗಿದ್ದು, ಎಲ್ಲ ಉಪಸಮಿತಿಗಳಲ್ಲಿ ದಸರಾ ಸಿದ್ಧತೆಯ ಕಾರ್ಯ ಗರಿಗೆದರಿದೆ. ವಿಜಯದಶಮಿಯಂದು ನಡೆಯುವ ಮೆರವಣಿಗೆಯಲ್ಲಿ ಗಜಪಡೆಯಷ್ಟೇ ಸ್ತಬ್ಧಚಿತ್ರಗಳೂ ಪ್ರಾಮುಖ್ಯತೆ ಪಡೆದುಕೊಂಡಿದ್ದು, ರಾಜ್ಯದ ಎಲ್ಲ ಜಿಲ್ಲೆಗಳಿಂದ ತಲಾ ಒಂದರಂತೆ 31 ಹಾಗೂ ವಿವಿಧ ಇಲಾಖೆಗಳಿಂದ ಸೇರಿದಂತೆ ಒಟ್ಟು 43 ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ.
ಮೈಸೂರು ವಿಶ್ವವಿದ್ಯಾಲಯ, ಸೆಸ್ಕ್, ಲಿಡ್ಕರ್, ಕೌಶಲ ಕರ್ನಾಟಕ, ಕರ್ನಾಟಕ ಸಹಕಾರ ಹಾಲು ಉತ್ಪಾದಕ ಮಹಾಮಂಡಳಿ, ಕಾವೇರಿ ನೀರಾವರಿ ನಿಗಮ, ಸಮಾಜ ಕಲ್ಯಾಣ, ಪ್ರವಾಸೋದ್ಯಮ ಮತ್ತು ವಾರ್ತಾ ಇಲಾಖೆಗಳಿಂದ ತಲಾ ಒಂದು ಸ್ತಬ್ಧಚಿತ್ರ ಇರಲಿವೆ. 2019ರಲ್ಲಿ ಕೇವಲ 38 ಸ್ತಬ್ಧಚಿತ್ರಗಳು ಭಾಗವಹಿಸಿದ್ದವು. ಈ ಬಾರಿ ಹೆಚ್ಚುವರಿ 5 ಸ್ತಬ್ಧಚಿತ್ರಗಳು ಇರಲಿವೆ.


ಭೌಗೋಳಿಕ, ಪರಿಸರ, ಐತಿಹಾಸಿಕ ಹಿನ್ನೆಲೆಗೆ ಒತ್ತು:
ಪ್ರತಿವರ್ಷ ರಾಜ್ಯದ ಎಲ್ಲ ಜಿಲ್ಲೆಗಳಿಂದ ಸರ್ಕಾರದ ವಿವಿಧ ಯೋಜನೆ ಹಾಗೂ ಆಯಾ ಜಿಲ್ಲೆಯ ಸಂಸ್ಕೃತಿ ಒಳಗೊಂಡ ಸ್ತಬ್ಧಚಿತ್ರಗಳು ದಸರಾ ಉತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದವು. ಆದರೆ, ಈ ಬಾರಿ ವಿಭಿನ್ನವಾಗಿ ಸ್ತಬ್ಧಚಿತ್ರ ಮೆರವಣಿಗೆ ಆಯೋಜಿಸಲು ದಸರಾ ಸ್ತಬ್ಧಚಿತ್ರಗಳ ಉಪಸಮಿತಿ ನಿರ್ಧರಿಸಿದೆ. ಈ ಬಾರಿಯ ದಸರಾ ಮೆರವಣಿಗೆಯಲ್ಲಿ ರಾಜ್ಯದ ಪ್ರತಿ ಜಿಲ್ಲೆಯಿಂದ ಪಾಲ್ಗೊಳ್ಳುವ ಸ್ತಬ್ಧಚಿತ್ರಗಳಿಗೆ ಆಯಾ ಜಿಲ್ಲೆಯ ಭೌಗೋಳಿಕ, ಐತಿಹಾಸಿಕ ಮತ್ತು ಪ್ರಾಕೃತಿಕ ಅಂಶಗಳನ್ನೇ ವಿಷಯವಸ್ತುವನ್ನಾಗಿಸಿಕೊಂಡು ನಿರ್ಮಿಸುವಂತೆ ತಿಳಿಸಲಾಗಿದೆ.
ಈಗಾಗಲೇ ನಗರದ ಎಪಿಎಂಸಿ ಆವರಣದಲ್ಲಿ ಸ್ತಬ್ಧಚಿತ್ರ ನಿರ್ಮಾಣ ಕಾರ್ಯ ಆರಂಭವಾಗಿದೆ. ಅ.3ರ ಒಳಗೆ ಪೂರ್ಣಗೊಳಿಸಲು ಸೂಚಿಸಲಾಗಿದೆ. 106 ವರ್ಷಗಳ ಸಂಸ್ಥಾಪನಾ ದಿನ ಆಚರಿಸಿಕೊಂಡ ಮೈಸೂರು ವಿಶ್ವವಿದ್ಯಾಲಯವೂ ತನ್ನ ಇತಿಹಾಸದ ಬಗ್ಗೆ ತಿಳಿಸಲಿದೆ. ವಿವಿ ಆರಂಭದಿಂದ ಇಲ್ಲಿಯವರೆಗಿನ ಎಲ್ಲ ಬೆಳವಣಿಗೆ ತಿಳಿಸುವಂತಹ ಸ್ತಬ್ಧಚಿತ್ರ ನಿರ್ಮಾಣವಾಗಲಿದೆ.

ವಿಜಯದಶಮಿ ಜಂಬೂಸವಾರಿಯಂದು ಸ್ತಬ್ಧಚಿತ್ರ ಮೆರವಣಿಗೆಯಲ್ಲಿ ರಾಜ್ಯದ 31 ಜಿಲ್ಲೆಗಳಿಂದ ತಲಾ ಒಂದರಂತೆ 31 ಸ್ತಬ್ಧಚಿತ್ರ, ಸ್ತಬ್ಧಚಿತ್ರ ಉಪಸಮಿತಿಯಿಂದ 3, ಮೈಸೂರು ವಿಶ್ವವಿದ್ಯಾಲಯ, ಸೆಸ್ಕ್, ಸಮಾಜ ಕಲ್ಯಾಣ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಲಿಡ್ಕರ್, ಕೌಶಲ ಕರ್ನಾಟಕ, ಕರ್ನಾಟಕ ಸಹಕಾರ ಹಾಲು ಉತ್ಪಾದಕ ಮಹಾಮಂಡಳಿ, ಕಾವೇರಿ ನೀರಾವರಿ ನಿಗಮ ಹಾಗೂ ವಾರ್ತಾ ಇಲಾಖೆಯಿಂದ ತಲಾ ಒಂದರಂತೆ ಒಟ್ಟು 43 ಸ್ತಬ್ಧಚಿತ್ರಗಳು ಇರಲಿವೆ.-ಎಸ್.ಧನುಷ್, ಉಪ ವಿಶೇಷಾಧಿಕಾರಿ, ಸ್ತಬ್ಧಚಿತ್ರ ಉಪ ಸಮಿತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net