ವಿಜಯನಗರ ಸಂಸ್ಥಾಪನಾ ದಿನಾಚರಣೆಗೆ ವಿರೋಧ: ಹೊಸಪೇಟೆಯಲ್ಲಿ ವಾಲ್ಮೀಕಿ ಸಮುದಾಯ ಪ್ರತಿಭಟನೆ

Vijayanagara Dist Valmiki Community Appeal
ಹೊಸಪೇಟೆಯಲ್ಲಿ ತಹಸೀಲ್ದಾರ್ ಎಚ್.ವಿಶ್ವನಾಥಗೆ ವಾಲ್ಮೀಕಿ ಸಮುದಾಯ ಮುಖಂಡರು ಸೋಮವಾರ ಮನವಿ ಸಲ್ಲಿಸಿದರು.
Published on

ಹೊಸಪೇಟೆ: ವಿಜಯನಗರ ಸ್ಥಾಪಕರಾದ ಹಕ್ಕಬುಕ್ಕರ ನೆನಪಿಗಾಗಿ ಕುರುಬರಿಂದ ಏ.18ರಂದು ಹಂಪಿಯಲ್ಲಿ ನಡೆಸಲು ಉದ್ದೇಶಿಸಿರುವ ಸಂಸ್ಥಾಪನಾ ದಿನಾಚರಣೆಗೆ ಅವಕಾಶ ನೀಡಬಾರದೆಂದು ಆಗ್ರಹಿಸಿ ವಾಲ್ಮೀಕಿ ಸಮುದಾಯದ ಮುಖಂಡರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಎಚ್.ವಿಶ್ವನಾಥಗೆ ಮನವಿ ಸಲ್ಲಿಸಿದರು.

ವಾಲ್ಮೀಕಿ ಗುರುಪೀಠದ ಜಿಲ್ಲಾ ಧರ್ಮದರ್ಶಿ ಜಂಬಯ್ಯ ನಾಯಕ ಮಾತನಾಡಿ, ಹಕ್ಕಬುಕ್ಕರು ವಾಲ್ಮೀಕಿ ಸಮುದಾಯಕ್ಕೆ ಸೇರಿದವರು. ಈ ಕುರಿತು ನಮ್ಮ ಬಳಿ ಅಗತ್ಯ ದಾಖಲೆಗಳಿವೆ. ನಾವು ಯಾವುದೇ ಸಮುದಾಯದ ವಿರುದ್ಧ ಹೋರಾಡುತ್ತಿಲ್ಲ. ಎಲ್ಲರೂ ಸಹೋದರರಂತೆ ಬಾಳುತ್ತಿದ್ದೇವೆ. ಕೆಲವರಿಂದ ಸಂಘರ್ಷ ಉಂಟುಮಾಡುವ ಕೆಲಸವಾಗುತ್ತಿದೆ ಎಂದರು ಆರೋಪಿಸಿದರು.

11 ವರ್ಷದ ಹಿಂದೆ ಮಾಜಿ ಸಂಸದ ವಿರೂಪಾಕ್ಷಪ್ಪ ನೇತೃತ್ವದಲ್ಲಿ ಹಕ್ಕಬುಕ್ಕರ ನೆನಪಿಗಾಗಿ ವಿಜಯನಗರ ಸಂಸ್ಥಾಪನಾ ದಿನ ಆಚರಿಸಲು ಮುಂದಾಗಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರಿಂದ ಕೈಬಿಡಲಾಗಿತ್ತು. ಈಗ ಮತ್ತೆ ಕಾರ್ಯಕ್ರಮ ನಡೆಸಲು ಹವಣಿಸಲಾಗುತ್ತಿದೆ. ಈ ಹಿಂದೆ ಕನ್ನಡ ವಿವಿಯಲ್ಲಿ ಹಕ್ಕಬುಕ್ಕರ ಅಧ್ಯಯನ ಪೀಠ ಸ್ಥಾಪನೆಗೆ ಪ್ರಯತ್ನಿಸಲಾಗಿತ್ತು. ಇದನ್ನೂ ವಾಲ್ಮೀಕಿ ಸಮುದಾಯ ವಿರೋಧಿಸಿದ್ದರಿಂದ ಹಾಲುಮತ ಅಧ್ಯಯನ ಪೀಠವೆಂದು ಬದಲಿಸಿದ್ದರು ಎಂದು ತಿಳಿಸಿದರು. ರಾಜಕೀಯ ಲಾಭಕ್ಕಾಗಿ ಎರಡು ಸಮುದಾಯಗಳ ನಡುವೆ ಒಡಕು ಉಂಟು ಮಾಡಲು ಸಂಸ್ಥಾಪನಾ ದಿನ ಆಚರಿಸಲಾಗುತ್ತಿದೆ. ಇದಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು ಎಂದು ಆಗ್ರಹಿಸಿದರು.

ಸಮುದಾಯದ ಮುಖಂಡ ಪಿ.ವೆಂಕಟೇಶ ಮಾತನಾಡಿ, ಜಾತಿ ಜಾತಿಗಳ ನಡುವೆ ಗಲಭೆ ಸೃಷ್ಟಿಸುವ ಕೆಲಸವಾಗುತ್ತಿದೆ. ಕುಲಶಾಸ್ತ್ರೀಯ ಅಧ್ಯಯನದ ವರದಿಯಲ್ಲಿ ಹಕ್ಕಬುಕ್ಕರು ಯಾವ ಸಮುದಾಯದವರೆಂದು ತಿಳಿದ ಮೇಲೆ ಸಂಸ್ಥಾಪನಾ ದಿನ ಆಚರಿಸಬೇಕು. ಇದಕ್ಕೆ ಅನುಮತಿ ಕೊಟ್ಟರೆ ಸ್ಥಳದಲ್ಲಿ ಗಲಾಟೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net