ವಿಜಯನಗರ ಜಿಲ್ಲೆಗೆ ಕಂಪ್ಲಿ ಸೇರ್ಪಡೆಗೆ ಹೋರಾಟಗಾರರಲ್ಲೇ ಗೊಂದಲ

301120 Kampli Join to Vijayanagara District
ಕಂಪ್ಲಿಯನ್ನು ವಿಜಯನಗರ ಜಿಲ್ಲೆಗೆ ಸೇರಿಸುವಂತೆ ತಹಸೀಲ್ದಾರ್ ಗೌಸಿಯಾಬೇಗಂರಿಗೆ ಮನವಿ ಸಲ್ಲಿಸಲಾಯಿತು.
Published on

ಕಂಪ್ಲಿ: ಕಂಪ್ಲಿಯನ್ನು ವಿಜಯನಗರ ಜಿಲ್ಲೆಗೆ ಸೇರ್ಪಡಿಸುವಂತೆ ಒತ್ತಾಯಿಸಿ ಸೋಮವಾರ ಹೋರಾಟ ಸಮಿತಿ ಕರೆಕೊಟ್ಟಿದ್ದ ಕಂಪ್ಲಿ ಬಂದ್ ಪ್ರತಿಭಟನೆ ವಾಗ್ವಾದ, ತಳ್ಳಾಟ, ಪ್ರತ್ಯೇಕ ಹೋರಾಟ ಗೊಂದಲದಲ್ಲೇ ಸಾಗಿ ಅಂತಿಮದಲ್ಲಿ ತಹಸೀಲ್ದಾರ್ ಗೌಸಿಯಾಬೇಗಂರಿಗೆ ಮನವಿ ಸಲ್ಲಿಸುವುದರೊಂದಿಗೆ ಮುಕ್ತಾಯಗೊಂಡಿತು.

ಉದ್ಭವ ಮಹಾಗಣಪತಿ ದೇವಸ್ಥಾನದಿಂದ ಆರಂಭಗೊಂಡ ಮೆರವಣಿಗೆ, ಮುಖ್ಯರಸ್ತೆಗಳ ಮೂಲಕ ಸಾಗಿ ಗ್ರಾಮದೇವತೆ ಮಾರೆಮ್ಮ ದೇವಸ್ಥಾನ ಬಳಿ ಬಂದಾಗ, ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಇದನ್ನು ಆಕ್ಷೇಪಿಸಿದ ಬಿಜೆಪಿ ಸದಸ್ಯರು ಶಾಸಕ ಗಣೇಶ್ ಸಮ್ಮುಖದಲ್ಲೇ ಗಣೇಶ್ ವಿರುದ್ಧ ಘೋಷಣೆ ಕೂಗಿ ಶಾಸಕರ ರಾಜೀನಾಮೆಗೆ ಒತ್ತಾಯಿಸಿದರು. ಕಾಂಗ್ರೆಸ್ ಶಾಸಕ ಮತ್ತು ಕಾರ್ಯಕರ್ತರು ಹಾಗೂ ಬಿಜೆಪಿ ಕಾರ್ಯಕರ್ತರ ಮಧ್ಯೆ ನೂಕಾಟ, ಪರಸ್ಪರ ವಾಗ್ವಾದ ಜರುಗಿತು. ಪೊಲೀಸರು ಮಧ್ಯೆ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ ಬಳಿಕ ಪುನಃ ಮೆರವಣಿಗೆ ಸಾಗಿತು.

ಮೆರವಣಿಗೆ ಅಂಬೇಡ್ಕರ್ ವೃತ್ತದಲ್ಲಿ ಸಮಾವೇಶಗೊಂಡ ವಿವಿಧ ಮುಖಂಡರು ಮಾತನಾಡಿ, ಕಂಪ್ಲಿಯನ್ನು ಭೌಗೋಳಿಕವಾಗಿ ಸನಿಹವಿರುವ ವಿಜಯನಗರ ಜಿಲ್ಲೆಗೆ ಸೇರಿಸಬೇಕು ಎಂದರು.

ಶಾಸಕ ಜೆ.ಎನ್.ಗಣೇಶ್ ಮಾತನಾಡಿ, ವಿಜಯನಗರ ಜಿಲ್ಲೆ ರಚನೆಯಲ್ಲಿ ಪಾಲ್ಗೊಳ್ಳದಿರುವಂತೆ ಬಿಜೆಪಿ ಶಾಸಕರು ಒತ್ತಡ ತಂದಿದ್ದರು. ಆದರೂ, ಆನಂದ್‌ಸಿಂಗ್‌ರಿಗೆ ಬೆಂಬಲ ನೀಡಿದೆ. ಕಂಪ್ಲಿ ಕೈಬಿಟ್ಟುವುದನ್ನು ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ಹಮ್ಮಿಕೊಳ್ಳಬೇಕಿದೆ ಎಂದ ಕಾಂಗ್ರೆಸ್ ಕಾರ್ಯಕರ್ತರು ಕೂಗಿದ ಘೋಷಣೆಯನ್ನು ಸಮರ್ಥಿಸಿಕೊಂಡರು. ಪೊಲೀಸರು ಸರಿಯಾದ ರಕ್ಷಣೆ ಕೊಡಬೇಕು. ಕಂಪ್ಲಿ ಸೇರ್ಪಡೆ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಭರವಸೆ ನೀಡಿದರು.

ತಾಲೂಕು ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಅರವಿ ಬಸವನಗೌಡ, ಅಧ್ಯಕ್ಷ ಕೆ.ಎಂ.ಹೇಮಯ್ಯಸ್ವಾಮಿ ಮಾತನಾಡಿ, ಕಂಪ್ಲಿ ಸೇರಿಸದ ವಿರುದ್ಧ ಆಕ್ಷೇಪಣೆ ಸಲ್ಲಿಸುತ್ತೇವೆ, ಮುಖ್ಯಮಂತ್ರಿಯನ್ನು ಪ್ರಶ್ನಿಸುತ್ತೇವೆ. ವಿಜಯನಗರ ಜಿಲ್ಲೆಗೆ ಸೇರಿಸುವತನಕ ಹೋರಾಟ ನಡೆಸುತ್ತೇವೆ ಎಂದರು.

ಪ್ರಮುಖರಾದ ಬಿ.ಸಿದ್ದಪ್ಪ, ಇಟಗಿ ಬಸವರಾಜಗೌಡ, ಡಾ.ಎ.ಸಿ.ದಾನಪ್ಪ, ಪಿ.ಬ್ರಹ್ಮಯ್ಯ, ಜಿ.ರಾಮಣ್ಣ, ಬಿ.ವಿ.ಗೌಡ, ಎನ್.ಪುರುಷೋತ್ತಮ, ವಿ.ವಿದ್ಯಾಧರ, ಕೆ.ಎಸ್.ಚಾಂದ್‌ಬಾಷಾ, ಸಿ.ಆರ್.ಹನುಮಂತ, ಜಿ.ಜಿ.ಚಂದ್ರಣ್ಣ, ವಿ.ಎಲ್.ಬಾಬು, ಹಬೀಬ್ ರೆಹಮಾನ್, ಟಿ.ವಿ.ಸುದರ್ಶನರೆಡ್ಡಿ, ಕರೇಕಲ್ ಮನೋಹರ, ಅಬ್ದುಲ್ ಮುನಾಫ್, ಜಿ.ರಾಜಾರಾವ್, ಭಟ್ಟ ಪ್ರಸಾದ್, ಬಿ.ನಾರಾಯಣಪ್ಪ, ಬಿ.ರಮೇಶ್, ಎ.ಸಿ.ಮೋಹನ್‌ಕುಮಾರ್ ಸೇರಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಕಾರ್ಯಕರ್ತರು ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಪುರಸಭೆ ಸದಸ್ಯರಿದ್ದರು.

ಬಂದ್ ನೀರಸ: ಎರಡು ಪಕ್ಷಗಳ ಕಾರ್ಯಕರ್ತರ ತಳ್ಳಾಟ, ವಾಗ್ವಾದದಿಂದ ಪ್ರತಿಭಟನಾ ಮೆರವಣಿಗೆ ಗಂಭೀರತೆ ಕಳೆದುಕೊಂಡಿತು. ರಸ್ತೆ ಸಂಚಾರ ತಡೆ ನಡೆಸಿದರೂ ಖಾಸಗಿ ವಾಹನಗಳು ಸಂಚರಿಸಿದವು. ಕೆಲ ಅಂಗಡಿಗಳು ತೆರೆದಿದ್ದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net