

ವೀರೇಂದ್ರ ನಾಗಲದಿನ್ನಿ ಹೊಸಪೇಟೆ
ಜಿಲ್ಲೆಯ ಆರೂ ತಾಲೂಕುಗಳು ಶೇ.30 ಮಳೆ ಅಭಾವ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಬರ ಪೀಡಿತವೆಂದು ಘೊಷಿಸಿದೆ. ಈಗಾಗಲೇ ಮಳೆ- ಬೆಳೆಯಿಲ್ಲದೆ ಕೈಸುಟ್ಟುಕೊಂಡಿರುವ ರೈತರಿಗೆ ಬರ ಘೋಷಣೆಯಿಂದ ಕೊಂಚ ಸಮಾಧಾನ ತಂದಿದೆ.
ಇದನ್ನೂ ಓದಿ: ತಾಲೂಕನ್ನು ಬರ ಪೀಡಿತವೆಂದು ಘೊಷಿಸಿ
ಹೊಸಪೇಟೆ ತಾಲೂಕಿನ ಭಾಗಶಃ ಹಳ್ಳಿಗಳನ್ನು ಹೊರತುಪಡಿಸಿ ಜಿಲ್ಲೆಯ ಆರೂ ತಾಲೂಕುಗಳು ಮಳೆಯಾಶ್ರಿತವಾಗಿವೆ. ಮಳೆ ಇದ್ದರೆ ಮಾತ್ರ ಬೆಳೆ ಎನ್ನುವಂತಾಗಿದೆ. ಹೀಗಾಗಿ ಈ ಭಾಗದ ರೈತರು ಮಳೆರಾಯನನ್ನೇ ನಂಬಿಕೊಂಡು ಕೃಷಿಯಲ್ಲಿ ತೊಡಗುತ್ತಾರೆ.
ಮಳೆಯಾದರೆ, ಬೆಳೆ ಇಲ್ಲದಿದ್ದರೆ ಗುಳೆ ಎಂಬುದು ಇಲ್ಲಿನ ರೈತರ ಪರಿಸ್ಥಿತಿ. ಕಳೆದ ಬಾರಿ ಅತಿವೃಷ್ಟಿಯಿಂದ ಬೆಳೆ ಹಾನಿ ಅನುಭವಿಸಿದ್ದ ರೈತರು ಈ ಬಾರಿ ಮುಂಗಾರು ಕೈಹಿಡಿಯುವ ಹುಮ್ಮಸ್ಸಿನಲ್ಲಿದ್ದರು. ಆದರೆ, ಅವರ ನಿರೀಕ್ಷೆ ತಲೆ ಕೆಳಗಾಗಿದೆ.
ವಿಳಂಬವಾಗಿ ಬಂದ ಮುಂಗಾರು ಮಳೆ ಜುಲೈನಲ್ಲಿ ಚುರುಕು ಪಡೆಯಿತು. ಇದರಿಂದ ಚೈತನ್ಯಗೊಂಡ ರೈತರು ಇನ್ನೇನು ಉತ್ತಮ ಮಳೆಯಾಗುತ್ತದೆ ಎಂಬ ಭರವಸೆಯೊಂದಿಗೆ ಮೆಕ್ಕೆಜೋಳ, ಸಜ್ಜೆ, ಶೇಂಗಾ ಬಿತ್ತನೆ ಮಾಡಿದ್ದರು.
ಈ ಬೆಳೆಗಳು ಮೊಳಕೆಯೊಡೆದು, ಎದೆ ಎತ್ತರಕ್ಕೆ ಬೆಳೆದರೂ, ಮಳೆ ಬಾರದ್ದರಿಂದ ತೆನೆ ಕಟ್ಟದೆ ಒಣಗಿವೆ. ಇದರಿಂದಾಗಿ ರೈತರು ಬಿತ್ತನೆಗೆ ಮಾಡಿದ ಖರ್ಚು ಕೂಡಾ ಮರಳದೆ, ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ.
ಮಳೆ- ಬೆಳೆ ಇಲ್ಲದೆ ರೈತಾಪಿ ಕುಟುಂಬಗಳು ಮತ್ತೆ ಬೆಂಗಳೂರು, ಗೋವಾ ಸೇರಿದಂತೆ ಪ್ರಮುಖ ಪಟ್ಟಣಗಳತ್ತ ಗುಳೆ ಹೋಗುವಂತಾಗಿದೆ.
ಜಿಲ್ಲೆಯ ಆರೂ ತಾಲೂಕುಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗಿಲ್ಲ. ಮುಂಗಾರು ಜೂನ್‌ನಿಂದ ಸೆಪ್ಟೆಂಬರ್‌ವರೆಗೆ 306 ಮಿಮೀ ಮಳೆ ದಾಖಲಾಗಬೇಕಿತ್ತು. ಆದರೆ, 214 ಮಿಮೀ ಮಳೆ ಸುರಿದಿದೆ. ಪರಿಣಾಮ 31 ಮಿಮೀ ಮಳೆ ಕೊರತೆಯಾಗಿದೆ.
ಪ್ರಮುಖ ವಾಣಿಜ್ಯ ಬೆಳೆಗಳಾದ ಮೆಕ್ಕೆಜೋಳ, ಶೇಂಗಾ ಹಾಗೂ ಸಜ್ಜೆ ಬೆಳೆ ಸಂಪೂರ್ಣ ನೆಲಕ್ಕಚ್ಚಿದ್ದು, ರಾಗಿ ಮಾತ್ರ ಶೇ.30 ಅನ್ನದಾತನ ಕೈಹಿಡಿಯುವ ನಿರೀಕ್ಷೆಗಳಿವೆ ಎನ್ನಲಾಗಿದೆ.
ಬೆಳೆ ಹಾನಿಗೆ ಸಂಬಂಧಿಸಿ ಕೃಷಿ, ತೋಟಗಾರಿಕೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸುತ್ತಿದ್ದು, ಸಮೀಕ್ಷೆ ಪೂರ್ಣಗೊಂಡ ಬಳಿಕವಷ್ಟೇ ಬೆಳೆ ಹಾನಿಯ ನಿಖರ ಮಾಹಿತಿ ಗೊತ್ತಾಗಲಿದೆ.
ಈಗಾಗಲೇ ರಾಜ್ಯ ಸರ್ಕಾರ ಬರ ಪೀಡಿತವೆಂದು ಘೋಷಿಸಿರುವ ಹಿನ್ನೆಲೆಯಲ್ಲಿ ಮುಂದಿನ ವಾರ ಕೇಂದ್ರ ಅಧ್ಯಯನ ತಂಡ ಆಗಮಿಸುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.
ವಿಜಯನಗರ ಜಿಲ್ಲೆಯ 6 ತಾಲೂಕುಗಳ ಪೈಕಿ ಈ ಹಿಂದೆ ಹರಪನಹಳ್ಳಿ ಮತ್ತು ಕೊಟ್ಟೂರು ತಾಲೂಕುಗಳನ್ನು ಮಾತ್ರ ಬರ ಪೀಡಿತವೆಂದು ಘೋಷಿಸಿಲಾಗಿತ್ತು.
ಆದರೆ, ಜಿಲ್ಲೆಯ ಎಲ್ಲ ತಾಲೂಕಿನಲ್ಲಿ ಬರ ಆವರಿಸಿದ್ದರಿಂದ ಅವುಗಳನ್ನೂ ಬರ ಪೀಡಿತವೆಂದು ಘೊಷಿಸಲು ಸ್ಥಳೀಯ ರೈತ ಪರ ಸಂಘಟನೆಗಳು ಒತ್ತಾಯಿಸಿ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದವು.
ಈ ಆಯಾ ಕ್ಷೇತ್ರದ ಶಾಸಕರು ಕೂಡಾ ಪಕ್ಷಾತೀತವಾಗಿ ಸರ್ಕಾರದ ಮೇಲೆ ಒತ್ತಡ ತಂದಿದ್ದರಿಂದ ಜಿಲ್ಲೆಯ ಹೊಸಪೇಟೆ, ಹೂವಿನಹಡಗಲಿ, ಕೊಟ್ಟೂರು, ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ ಹಾಗೂ ಹರಪನಹಳ್ಳಿಯನ್ನೂ ಬರ ಪೀಡಿತವೆಂದು ಘೋಷಿಸಿರುವುದು ಈ ಭಾಗದ ರೈತಾಪಿ ಜನರಲ್ಲಿ ಸಮಾಧಾನ ಮೂಡಿಸಿದೆ.
ಬರಗಾಲವೆಂದು ಘೋಷಿಸಿದರೆ ಸಾಲದು. ಬರ ಪೀಡಿತ ತಾಲೂಕಿನ ರೈತರ ಸಹಕಾರ ಮತ್ತು ರಾಷ್ಟ್ರೀಕೃತ ಬ್ಯಾಂಕ್‌ಗಳ ಸಾಲ ಮನ್ನಾ ಮಾಡಬೇಕು. ರೈತರ ಅಭಿವೃದ್ಧಿ ದೃಷ್ಟಿಯಿಂದ ಹೊಸ ಸಾಲ ಮಂಜೂರು ಮಾಡಬೇಕು. ಇದು ರಾಜ್ಯ ಮತ್ತು ಕೇಂದ್ರ ಸರ್ಕಾರ ಮಾಡಬೇಕು.| ಸಿ.ಎ. ಗಾಳೆಪ್ಪ, ಅಧ್ಯಕ್ಷ, ರೈತ ಸಂಘ ಹಾಗೂ ಹಸಿರು ಸೇನೆ(ವಾಸುದೇವ ಮೇಟಿ ಬಣ)