

ಹೊಸಪೇಟೆ : ಹೊಸ ಜಿಲ್ಲೆಯಾಗಿ ಎರಡು ವರ್ಷ ಕಳೆದರೂ, ಹಲವು ಇಲಾಖೆಗಳಿಗೆ ಕಚೇರಿಗಳಿಲ್ಲ. ಕೆಲ ಇಲಾಖೆಗಳಲ್ಲಿ ಪ್ರಭಾರ ಅಧಿಕಾರಿಗಳನ್ನಿಟ್ಟುಕೊಂಡು ಜಿಲ್ಲೆಯನ್ನು ಹೇಗೆ ನಡೆಸುತ್ತೀರಿ ಎಂದು ಜಿಲ್ಲಾಧಿಕಾರಿ ವೆಂಕಟೇಶ್‌ಗೆ ವಸತಿ, ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಜೆಡ್.ಜಮೀರ್ ಅಹ್ಮದ್ ಖಾನ್ ಪ್ರಶ್ನಿಸಿದರು.
ನಗರದ ಡಿಸಿ ಕಚೇರಿಯಲ್ಲಿ ಶನಿವಾರ ಜಿಲ್ಲಾ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದು. ಪ್ರಭಾರ ವಹಿಸಿಕೊಂಡ ಹಲವು ಇಲಾಖೆಗಳ ಅಧಿಕಾರಿಗಳು ಬಳ್ಳಾರಿಯಿಂದಲೇ ಕಾರ್ಯನಿರ್ವಹಿಸುತ್ತಿದ್ದಾರೆ. 19 ಇಲಾಖೆಗಳಿಗೆ ಕಚೇರಿಯಿಲ್ಲ. ಅಧಿಕಾರಿಗಳು ಹೇಗೆ ಕೆಲಸ ಮಾಡಬೇಕು. ಪ್ರಭಾರವಹಿಸಿಕೊಂಡವರು ಬಳ್ಳಾರಿಯಲ್ಲೂ ಇರಲ್ಲ. ವಿಜಯನಗರದಲ್ಲೂ ಇರಲ್ಲ. ಅಂಥವರಿಂದ ಜಿಲ್ಲೆಯ ಅಭಿವೃದ್ಧಿ ಹೇಗೆ ನಿರೀಕ್ಷಿಸಲು ಸಾಧ್ಯ ಎಂದು ತರಾಟೆಗೆ ತೆಗೆದುಕೊಂಡರು. ಬಳಿಕ ಇಲಾಖಾವಾರು ಪ್ರಭಾರ ಅಧಿಕಾರಿಗಳು ಮತ್ತು ಕಚೇರಿಗಳ ಕೊರತೆ ಪಟ್ಟಿ ಮಾಡಿ, ಅಧಿಕಾರಿಗಳ ಹುದ್ದೆಗಳ ಭರ್ತಿಗೆ ಬಜೆಟ್ ಅಧಿವೇಶನದ ಬಳಿಕ ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಜಿಲ್ಲಾ ಉಸ್ತುವಾರಿ ಸಚಿವರಿಗಾಗಿ ಪ್ರವಾಸಿ ಮಂದಿರದಲ್ಲಿ ದೊಡ್ಡ ಕಚೇರಿ ಮೀಸಲಿಡಲಾಗಿದೆ. ತಿಂಗಳಿಗೊಮ್ಮೆ ಬರುವ ನನಗೆ ಅಷ್ಟು ದೊಡ್ಡ ಕಚೇರಿ ಬೇಕಿಲ್ಲ. ನನ್ನ ಸಹಾಯಕ ಕುಳಿತುಕೊಳ್ಳಲು ಒಂದು ಟೇಬಲ್, ಕುರ್ಚಿ ಸಾಕು. ನಾನು ಬಂದಾಗ ಡಿಸಿ ಕಚೇರಿಯಲ್ಲೇ ಇರುತ್ತೇನೆ. ನನಗಾಗಿ ಮೀಸಲಿಟ್ಟಿರುವ ಐಬಿಯಲ್ಲಿ ಕ್ಯಾಬಿನ್‌ಗಳನ್ನಾಗಿಸಿ ಐದಾರು ಇಲಾಖೆಗಳಿಗೆ ಕಚೇರಿಯಾಗುತ್ತವೆ. ಅಧಿಕಾರಿಗಳು ಕೆಲಸ ಮಾಡಿದರೆ, ಜಿಲ್ಲೆ ಅಭಿವೃದ್ಧಿಯಾಗುತ್ತದೆ. ಈ ನಿಟ್ಟಿನಲ್ಲಿ ಒಂದು ವಾರದಲ್ಲಿ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿಗೆ ಜಮೀರ್ ಸೂಚಿಸಿದರು.
ಶಾಸಕರಾದ ಎಚ್.ಆರ್.ಗವಿಯಪ್ಪ, ಎಂ.ಪಿ.ಲತಾ ಮಲ್ಲಿಕಾರ್ಜುನ, ಡಾ.ಎನ್.ಟಿ.ಶ್ರೀನಿವಾಸ್, ಕೃಷ್ಣನಾಯ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕೆ.ಪಿ.ಮೋಹನ್ ರಾಜ್, ಜಿಲ್ಲಾಧಿಕಾರಿ ವೆಂಕಟೇಶ್ ಟಿ., ಜಿಪಂ ಸಿಇಒ ಸದಾಶಿವ ಪ್ರಭು ಬಿ., ಪ್ರಾದೇಶಿಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಅರ್ಸಲನ್ ಇದ್ದರು.
ಐದು ವರ್ಷವಾದರೂ ಕಟ್ಟಡ ಸಿಕ್ಕಿಲ್ಲವೇ? : ಹೊಸಪೇಟೆ ತಾಲೂಕಿನ ಕಾಳಗಟ್ಟದ ಮುರಾರ್ಜಿ ದೇಸಾಯಿ ಶಾಲೆಯ ಒಂದೇ ಕಟ್ಟಡದಲ್ಲಿ ಬಾಲಕರು ಮತ್ತು ಬಾಲಕಿಯರಿದ್ದಾರೆ. ಏನಾದರೂ ಅನಾಹುತ ಸಂಭವಿಸಿದರೆ, ಯಾರು ಹೊಣೆ? ಐದು ವರ್ಷ ಕಳೆದರೂ, ಪ್ರತ್ಯೇಕ ಕಟ್ಟಡ ಒದಗಿಸಿಲ್ಲವೆಂದರೆ ನಿಮ್ಮ ಕಾರ್ಯವೈಖರಿ ಗೊತ್ತಾಗುತ್ತದೆ ಎಂದು ಅಲ್ಪಸಂಖ್ಯಾತ ಇಲಾಖೆ ಅಧಿಕಾರಿ ವಿರುದ್ಧ ಸಚಿವ ಕಿಡಿಕಾರಿದರು. ಒಂದು ತಿಂಗಳಲ್ಲಿ ಪ್ರತ್ಯೇಕ ಕಟ್ಟಡ ಒದಗಿಸಬೇಕು. ಸರ್ಕಾರಿ ಕಟ್ಟಡ ಲಭ್ಯವಿಲ್ಲದಿದ್ದರೆ, ಬಾಡಿಗೆ ಪಡೆದುಕೊಳ್ಳುವಂತೆ ತಾಕೀತು ಮಾಡಿದರು.
ಅಕ್ರಮ ಚಟುವಟಿಕೆಗೆ ಕಡಿವಾಣ ಹಾಕಿ: ಆರ್‌ಟಿಒ ಅಧಿಕಾರಿಗಳು ಮೈಮರೆತಿದ್ದಕ್ಕೆ ವಡ್ರಹಳ್ಳಿ ಬಳಿ ಸಂಭವಿಸಿದ ಅಪಘಾತದಲ್ಲಿ 9 ಜನ ಅಮಾಯಕರು ಜೀವ ಕಳೆದುಕೊಂಡಿದ್ದಾರೆ. ಒಂದು ಆಟೋದಲ್ಲಿ 20-25 ಜನರನ್ನು ಹೇಗೆ ತುಂಬುತ್ತಾರೆ? ಆರ್‌ಟಿಒ ಅಧಿಕಾರಿಗಳ ನಿರ್ಲಕ್ಷೃವೇ ಇದಕ್ಕೆ ಕಾರಣ. ಅಪಘಾತ ಪ್ರಕರಣಕ್ಕೆ ನಿಮ್ಮನ್ನೇ ಯಾಕೆ ಹೊಣೆ ಮಾಡಬಾರದು ಎಂದು ಆರ್‌ಟಿಒ ವಿರುದ್ಧ ಜಮೀರ್ ಸಿಡಿಮಿಡಿಗೊಂಡರು. ಜಿಲ್ಲೆಯಲ್ಲಿ ಅಕ್ರಮ ಮೈನಿಂಗ್, ಮರಳುಗಾರಿಕೆ, ಮದ್ಯ ಮಾರಾಟ, ಗಾಂಜಾ, ಡ್ರಗ್ಸ್ ಎಗ್ಗಿಲ್ಲದೇ ಸಾಗುತ್ತಿದ್ದು, ಸಂಬಂಧಿಸಿದ ಇಲಾಖೆಗಳು ಕಡಿವಾಣ ಹಾಕಬೇಕು ಎಂದು ತಾಕೀತು ಮಾಡಿದರು.
ಮಾದರಿ ಜಿಲ್ಲೆಯ ಕನಸಿಗೆ ಸಹಕರಿಸಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನನ್ನ ಮೇಲೆ ವಿಶ್ವಾಸವಿಟ್ಟು ನೂತನ ವಿಜಯನಗರ ಜಿಲ್ಲೆಯ ಉಸ್ತುವಾರಿ ವಹಿಸಿದ್ದಾರೆ. ರಾಜ್ಯದಲ್ಲಿ ಮಾದರಿ ಜಿಲ್ಲೆಯನ್ನಾಗಿಸುವ ಕನಸು ಹೊಂದಿದ್ದೇನೆ. ಇಲಾಖೆ ಕಾರ್ಯಚಟುವಟಿಗೆಳನ್ನು ಚುರುಕುಗೊಳಿಸಲು ಜು.24 ರಿಂದ ಒಂದು ವಾರ ತಾಲೂಕುವಾರು ಕೆಡಿಪಿ ಸಭೆಗಳನ್ನು ನಡೆಸುತ್ತೇನೆ. ಎಲ್ಲ ಇಲಾಖೆಗಳ ಅಧಿಕಾರಿಗಳು ಜಿಲ್ಲೆಯ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಮನವಿ ಮಾಡಿದರು.