

ಶಿಗ್ಗಾಂವಿ: ಪಟ್ಟಣದಲ್ಲಿ ಫೆಬ್ರವರಿ 8ರಂದು ನಡೆಯಲಿರುವ ಶಿಗ್ಗಾಂವಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ನ 5ನೇ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಹಾವೇರಿ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವರಾದ ವಿಜಯಲಕ್ಷ್ಮೀ ತಿರ್ಲಾಪೂರ ಅವರನ್ನು ತಾಲೂಕು ಕಸಾಪ ಕಾರ್ಯಕಾರಿ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಕಸಾಪ ತಾಲೂಕು ಕೋಶಾಧ್ಯಕ್ಷ ಬಸವರಾಜ ಹೆಸರೂರ ತಿಳಿಸಿದರು.
ಪಟ್ಟಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಸಮ್ಮೇಳನದ ಯಶಸ್ವಿಗೆ ಪ್ರತಿಯೊಬ್ಬರೂ ಶ್ರಮಿಸಬೇಕು ಎಂದು ಮನವಿ ಮಾಡಿದರು.
ಕಸಾಪ ತಾಲೂಕಾಧ್ಯಕ್ಷ ನಾಗಪ್ಪ ಬೆಂತೂರ ಮಾತನಾಡಿ, ಜಿಲ್ಲಾಧ್ಯಕ್ಷರು ಜಿಲ್ಲಾ ಸಮ್ಮೇಳನದಲ್ಲಿ ಬ್ಯುಸಿಯಾಗಿದ್ದು, ಅವರ ಅಣತಿಯಂತೆ ತಾಲೂಕು ಸಮಿತಿಯ ಕೋಶಾಧ್ಯಕ್ಷ ಬಸವರಾಜ ಹೆಸರೂರ ಅವರು ಸಮ್ಮೇಳನ ಅಧ್ಯಕ್ಷರ ಹೆಸರು ಘೋಷಣೆ ಮಾಡಿದ್ದಾರೆ. ಫೆ. 8ರಂದು ನಡೆಯುವ ಸಮ್ಮೇಳನದಲ್ಲಿ ವಿವಿಧ ಪಂಡಿತ, ಪಾಮರ ಹಾಗೂ ಉಪನ್ಯಾಸಕರಿಂದ ಉಪನ್ಯಾಸಗಳು, ಕವಿಗೋಷ್ಠಿ, ಭವ್ಯ ಮೆರವಣಿಗೆ ಸೇರಿ ವಿವಿಧ ಕಾರ್ಯಕ್ರಮಗಳು ಜರುಗಲಿವೆ. ಅಂದು ಹುಲಗೂರ ರಸ್ತೆಯ ಪಾದಗಟ್ಟಿಯಿಂದ ಚನ್ನಮ್ಮ ಸರ್ಕಲ್ ಮೂಲಕ ಹಾಯ್ದು ಸಂಗನಬಸವ ಮಂಗಲ ಭವನದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಸಮ್ಮೇಳನಾಧ್ಯಕ್ಷರ ಘೊಷಣೆಯಾಗಿದ್ದು, ಜಿಲ್ಲಾ ಸಮ್ಮೇಳನ ಮುಗಿದ ಬಳಿಕ ಅವರನ್ನು ಅಧಿಕೃತವಾಗಿ ಆಹ್ವಾನಿಸಲಾಗುವುದು ಎಂದು ತಿಳಿಸಿದರು.
ಶಿಗ್ಗಾಂವಿ ಹೋಬಳಿ ಘಟಕದ ಅಧ್ಯಕ್ಷೆ ಲಲಿತಾ ಹಿರೇಮಠ ಮಾತನಾಡಿದರು. ನಿಕಟಪೂರ್ವ ಕಸಾಪ ಅಧ್ಯಕ್ಷ ಎಸ್.ಎನ್. ಮುಗಳಿ, ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಅರುಣ ಹುಡೇದಗೌಡ್ರ, ದುಂಡಶಿ ಹೋಬಳಿ ಘಟಕದ ಅಧ್ಯಕ್ಷ ಐ.ಎಲ್. ಭೋಸಲೆ, ಕಾರ್ಯದರ್ಶಿ ರಮೇಶ ಹರಿಜನ, ನಿಕಟಪೂರ್ವ ಕೆಎಸ್ಜಿಇಎ ಅಧ್ಯಕ್ಷ ಸಿ.ಡಿ. ಯತ್ನಳ್ಳಿ, ಸದಸ್ಯರಾದ ಲತಾ ನಿಡಗುಂದಿ, ಪ್ರತಿಭಾ ಗಾಂಜಿ, ಬಸವರಾಜ ಬಮ್ಮಿಗಟ್ಟಿ, ವಿನಾಯಕ ರೇವಣಕರ, ಶಿವನಾಗಪ್ಪ ಶೆಟ್ಟರ, ಎಂ.ಎಚ್. ಬೆಂಡಿಗೇರಿ, ಸಿ.ಎನ್. ಕಲಕೋಟಿ, ಮಲ್ಲಪ್ಪ ಬಾರಕೇರ, ಬಸವರಾಜ ಶಿಗ್ಗಾಂವಿ, ಇತರರಿದ್ದರು.