

ಪಾಂಡವಪುರ: ತಾಲೂಕು ರೈತ ಸಂಘದ ನೂತನ ಅಧ್ಯಕ್ಷರಾಗಿ ಕೆನ್ನಾಳು ವಿಜಯಕುಮಾರ್ ಅವರನ್ನು ಶಾಸಕ ದರ್ಶನ್ ಪುಟ್ಟಣ್ಣಯ್ಯ ಸೂಚನೆಯಂತೆ ಸಂಘಟನೆ ಮುಖಂಡರು ಆಯ್ಕೆ ಮಾಡಿದ್ದಾರೆ.
ಕಳೆದ ಎರಡು ದಶಕಗಳಿಂದ ರೈತ ಸಂಘಟನೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡು ರೈತ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದ ವಿಜಯಕುಮಾರ್ ಅವರು ಕಳೆದ ಬಾರಿ ತಾಲೂಕು ರೈತ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಸಂಘಟನೆಯ ಬಲವರ್ಧನೆ, ಸಂಘಟನಾತ್ಮಕ ಹೋರಾಟ ಉದ್ದೇಶದಿಂದ ರೈತ ಸಂಘ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ನಿಕಟಪೂರ್ವ ತಾಲೂಕು ಅಧ್ಯಕ್ಷ ನಾಗರಾಜು ಅವರು ವಿಜಯಕುಮಾರ್ ಅವರನ್ನು ಆಯ್ಕೆ ಮಾಡಿದ್ದಾರೆ.
ನೂತನ ಅಧ್ಯಕ್ಷ ವಿಜಯಕುಮಾರ್ ಮಾತನಾಡಿ, ಸಂಘಟನೆಯ ಎಲ್ಲ ಹಿರಿಯ ಹೋರಾಟಗಾರರು, ಮುಖಂಡರು, ಕಾರ್ಯಕರ್ತರು ಒಕ್ಕೊರಲಿನಿಂದ ನನ್ನನ್ನು ತಾಲೂಕು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ. ಎಲ್ಲರ ಆಶಯದಂತೆ ರೈತ ಸಂಘ ಬಲವರ್ಧನೆಗೆ ಶಕ್ತಿಮೀರಿ ಶ್ರಮಿಸುವುದಾಗಿ ತಿಳಿಸಿದರು.