ಮೇಲುಕೋಟೆಯಲ್ಲಿ ವಿಜಯದಶಮಿ ವಿಜಯೋತ್ಸವ

13mlk3
2 ಕಲ್ಯಾಣನಾಯಕಿ ಅಮ್ಮನವರಿಗೆ ದೊಡ್ಡಶೇಷವಾಹನೋತ್ಸವ ಜರುಗಿತು.
Published on

ಮೇಲುಕೋಟೆ: ಶ್ರೀ ಚೆಲುವ ನಾರಾಯಣಸ್ವಾಮಿ ಅವರ ಬನ್ನಿ ಪೂಜಾ ಕಾರ್ಯಕ್ರಮ ಶನಿವಾರ ತಡರಾತ್ರಿ ಜರುಗಿತು.


ರಾತ್ರಿ 12ಕ್ಕೆ ಆರಂಭವಾದ ವಿಜಯದಶಮಿ ವಿಜಯೋತ್ಸವ ರಾತ್ರಿ 12.30ರವರೆಗೆ ನಡೆಯಿತು. ಬನ್ನೀ ಮಂಟಪದ ಬಳಿ ಲೋಕಕಲ್ಯಾಣಾರ್ಥವಾಗಿ ದಶದಿಕ್ಕುಗಳಿಗೆ ಬಾಣ ಪ್ರಯೋಗ ಮಾಡಿ ದಲಿತ ಭಕ್ತರಿಗೆ ಗೌರವ ಮಾಡಿದ ನಂತರ ಸ್ವಾಮಿಯ ವಿಜಯೋತ್ಸವ ಮೆರವಣಿಗೆ ಮೇಲುಕೋಟೆಯತ್ತ ಸಾಗಿತು. ಅಂಗಡಿ ಬೀದಿ ವೃತ್ತದಲ್ಲಿ ಕಲ್ಯಾಣ ನಾಯಕಿ ಅಮ್ಮನವರ ಶೇಷವಾಹನೋತ್ಸವ ಎದುರುಗೊಂಡ ನಂತರ ನಾಲ್ಕೂ ಬೀದಿಗಳಲ್ಲಿ ಉತ್ಸವ ಸಾಗಿತು.


ವ್ಯವಸ್ಥೆಗಳ ಅಧ್ವಾನದಿಂದ ನಡೆದ ಕುದುರೆ ವಾಹನೋತ್ಸವದಲ್ಲಿ ಬೆರಳೆಣಿಕೆ ಭಕ್ತರು ಭಾಗವಹಿಸಿದ್ದರು. ಒಂದೆಡೆ ಚೆಲುವನಾರಾಯಣನಿಗೆ ಆಕರ್ಷಕ ಪುಷ್ಪ ಹಾರ, ಜನರೇಟರ್ ದೀಪದ ವ್ಯವಸ್ಥೆಯಿಲ್ಲದೆ ಉತ್ಸವ ನಡೆದರೆ, ಬನ್ನೀಪೂಜೆ ಮಾಡುವ ವೇಳೆ ಬನ್ನೀಮಂಪದ ಬಳಿ ಯಾವುದೇ ಬೆಳಕಿನ ವ್ಯವಸ್ಥೆ ಮಾಡದ ಕಾರಣ ಪರದಾಡಿದ ದೇಗುಲದ ಸಿಬ್ಬಂದಿ ಭಕ್ತರು ತಂದಿದ್ದ ಕಾರಿನ ಹೆಡ್ ಲೈಟ್ ಹಾಕಿಸಿಕೊಂಡು ಶಮೀಪೂಜೆ ಮಾಡಿದರು.


ದೇವಾಲಯದ ಬಾಗಿಲಿಗೆ ವಿಜಯ ದಶಮಿಯಂದು ಕನಿಷ್ಠ ಮಾವಿನ ತೋರಣ ಕಟ್ಟುವ ಕಾರ್ಯವನ್ನೂ ಮಾಡಿರಲಿಲ್ಲ. ಆದರೆ ದಲಿತ ಭಕ್ತರು ಬನ್ನೀಮಂಟಪಕ್ಕೆ ಮಾವಿನತೋರಣಕಟ್ಟಿ ಸಲ್ವಮಟ್ಟಿಗೆ ಸ್ವಚ್ಛ ಮಾಡಿದ್ದು ಕಂಡು ಬಂತು. ಸ್ವಾಮಿಯ ವಿಜಯೋತ್ಸವ ಸಂಧಿಸಿದ ಅಂಗಡಿ ಬೀದಿ ವೃತ್ತ, ರಾಜಬೀದಿಗೂ ಹೆಚ್ಚಿನ ಬೆಳಕಿನ ವ್ಯವಸ್ಥೆ ಇರದೆ ಬೀದಿ ದೀಪಗಳಲ್ಲೇ ಉತ್ಸವ ದರ್ಶನ ಮಾಡುವಂತಾಗಿತ್ತು.


ಚೆಲವನಾರಾಯಣಸ್ವಾಮಿ ದೇವಾಲಯದಲ್ಲಿ ಪ್ರಮುಖ ಉತ್ಸಗಳನ್ನು ಆಕರ್ಷಕವಾಗಿ ಮಾಡಬೇಕಾದ ದೇವಾಲಯದ ಆಡಳಿತ ಉತ್ಸವಕ್ಕೆ ಬಜೆಟ್ ಇಲ್ಲ ಎಂಬ ನೆಪ ನೀಡಿ ಯಾವುದೇ ವ್ಯವಸ್ಥೆ ಮಾಡದ ಕಾರಣ ಅವ್ಯವಸ್ಥೆಗಳು ಮರುಕಳಿಸುತ್ತಲೇ ಇವೆ. ಮುಂಬರುವ ರಾಜಮುಡಿ ಬ್ರಹ್ಮೋತ್ಸವಕ್ಕಾದರೂ ದೇವಾಲಯದ ಆಡಳಿತ ಸೂಕ್ತ ವ್ಯವಸ್ಥೆ ಮಾಡಲಿ ಎಂದು ನಾಗರಿಕರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net