

ವಿಜಯವಾಣಿ ಸುದ್ದಿಜಾಲ ತುಮಕೂರು
ವಿಜಯದಶಮಿ ಅಂಗವಾಗಿ ನಗರ ವೀರಶೈವ ಸಮಾಜ ಸೇವಾ ಸಮಿತಿಯಿಂದ ಹಮ್ಮಿಕೊಂಡಿದ್ದ
ಶಮೀಪೂಜೆಯನ್ನು ದೇಶದ ಶೆಟ್ಟರು ಕೆ.ಎಸ್.ಚನ್ನಬಸಪ್ಪ ಹಾಗೂ ಅವರ ಪುತ್ರ ಟಿ.ಸಿ.ವಿಕಾಸ್ ನೆರವೇರಿಸಿದರು.
ನಗರದ ಶ್ರೀ ರೇಣುಕ ವಿದ್ಯಾಪಿಠ ಆವರಣದಲ್ಲಿ ಶನಿವಾರ ಮಧ್ಯಾಹ್ನ ಹಿರೇಮಠಾಧ್ಯಕ್ಷ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಅವರ ನೇತೃತ್ವದಲ್ಲಿ ಶಮೀಪೂಜೆ ನಡೆಯಿತು. ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್, ಮಾಜಿ ಸಚಿವ ಸೊಗಡು ಶಿವಣ್ಣ, ವೀರಶೈವ ಸಮಾಜದ ಅಧ್ಯಕ್ಷ ಟಿ.ಬಿ.ಶೇಖರ್, ಉಪಾಧ್ಯಕ್ಷ ಎಸ್.ಜಿ.ಚಂದ್ರಮೌಳಿ, ಗೌರವ ಕಾರ್ಯದರ್ಶಿ ಅತ್ತಿರೇಣುಕಾನಂದ ಸಮಾಜದ ವಿವಿಧ ಗಣ್ಯರು ಉಪಸ್ಥಿತರಿದ್ದರು.
ಶಮೀಪೂಜೆಗೆ ಮುನ್ನ ನಗರದ ಪ್ರಮುಖ ದೇವರುಗಳಾದ ದಿವಾನ ಬೀದಿಯ ಸಿದ್ದಲಿಂಗೇಶ್ವರ ಸ್ವಾಮಿ, ಅರಳೆಪೇಟೆಯ ಶ್ರೀ ರೆಣುಕಾಚಾರ್ಯರು, ಹೊರಪೇಟೆ ಬೆಣ್ಣೆ ಬಸವೇಶ್ವರ ಸ್ವಾಮಿ ಸೋಮೇಶ್ವರ ಸ್ವಾಮಿ, ಕೋಡಿಬಸವೇಶ್ವರ ಸ್ವಾಮಿ, ಬಿ.ಎಚ್.ರಸ್ತೆಯ ವೀರಭದ್ರಸ್ವಾಮಿ, ಸಂಗಮೇಶ್ವರ ಸ್ವಾಮಿ ದೇವರುಗಳು ವೈಭವದ ಉತ್ಸವವು ಚಿಕ್ಕಪೇಟೆ ವೃತ್ತ ಮಾರ್ಗವಾಗಿ ಮಾರ್ಕೆಟ್ ವೃತ್ತ, ಗುಂಚಿ ವೃತ್ತ, ಟೌನ್ ಪೊಲೀಸ್ ಸ್ಟೇಷನ್ ಮುಖಾಂತರ ಚರ್ಚ್ವೃತ್ತ, ಅಶೋಕ ರಸ್ತೆ, ಬಸವೇಶ್ವರ ರಸ್ತೆ ಮೂಲಕ ಸಂಚರಿಸಿ ಶ್ರೀ ರೇಣುಕ ವಿದ್ಯಾಪಿಠದ ಮಹಾನವಮಿ ಮಂಟಪದಲ್ಲಿ ಸಮಾವೇಶಗೊಂಡವು.
ಸಮಾರಂಭದ ದಿವ್ಯ ಸಾನಿಧ್ಯವಹಿಸಿದ್ದ ಹಿರೇಮಠದ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ದಕ್ಷಿಣ ಭಾರತದಲ್ಲಿ ದುಷ್ಟ ಸಂಹಾರ ಮಾಡಿದ ದೇವಿಯ ವಿಜಯವನ್ನು ವಿಜಯದಶಮಿಯಾಗಿ ಆಚರಿಸಿದರೆ, ಉತ್ತರ ಭಾರತದಲ್ಲಿ ರಾವಣ ಮೂರ್ತಿ ಸುಡುವ ಮೂಲಕ ರಾಮನ ವಿಜಯೋತ್ಸವವಾಗಿ ಆಚರಿಸಲಾಗುತ್ತದೆ ಎಂದರು. ವೀರಶೈವ ಸಮಾಜ ಸೂಕ್ಷ್ಮಸಂವೇದನೆಯ ಸಮಾಜ. ಜ್ಞಾನ, ತಂತ್ರಜ್ಞಾನ, ದಾನದಲ್ಲಿ ವೀರಶೈವ ಸಮಾಜದ ಕೊಡುಗೆಗೆ ಕೊರತೆಯಿಲ್ಲ. ಸಮಾಜದ ಸ್ವಾಮೀಜಿಗಳು ಶಿಕ್ಷಣವನ್ನು ಸಾರ್ವತ್ರಿಕಗೊಳಿಸದಿದ್ದರೆ ಸಮಾಜದಲ್ಲಿ ಇಷ್ಟು ಜ್ಞಾನವಂತರನ್ನು ಕಾಣಲು ಸಾಧ್ಯವಿರಲಿಲ್ಲ. ಮಠಾಧೀಶರುಗಳಲ್ಲದೆ ವೀರಶೈವ ಸಮಾಜದ ಹಲವು ಮುಖಂಡರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಸಮಾಜಕ್ಕೆ ಕೊಡುಗೆ ನೀಡಿದ್ದಾರೆ. ಎಷ್ಟೋ ಮಹನೀಯರು ಸಮಾಜಕ್ಕಾಗಿ ತಮ್ಮ ಆಸ್ತಿ, ಸಂಪತ್ತನ್ನು ದಾನ ಮಾಡಿದ್ದಾರೆ ಎಂದು ಹೇಳಿದರು.
ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, 7 ದಶಕಗಳಿಂದ ವೀರಶೈವ ಸಮಾಜ ನಗರದಲ್ಲಿ ದಸರಾ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದೆ. ಈಗಲೂ ಅದೇ ಸಂಪ್ರದಾಯದಲ್ಲಿ ಆಚರಣೆ ಮುಂದುವರಿದಿದೆ. ಧಾರ್ಮಿಕ
ಕಾರ್ಯಕ್ರಮ ವ್ಯವಸ್ಥೆ ಮಾಡುವುದರಲ್ಲಿ ವೀರಶೈವ ಸಮಾಜ ಯಾವತ್ತಿಗೂ ಮುಂದೆ ಇರುತ್ತದೆ ಎಂದು ಹೇಳಿದರು.
ಈ ವೇಳೆ ಹಂಪಿ ಕನ್ನಡ ವಿಶ್ವವಿದ್ಯಾಲಯ ಕುಲಪತಿ ಡಾ.ಡಿ.ವಿ.ಪರಶಿವಮೂರ್ತಿ ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾ ಸಭಾದ ಜಿಲ್ಲಾಧ್ಯಕ್ಷ ಡಾ.ಎಸ್.ಪರಮೇಶ್ರನ್ನು ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಜಂಟಿ ಕಾರ್ಯದರ್ಶಿ ಟಿ.ಎನ್.ರುದ್ರೇಶ್, ಖಜಾಂಚಿ ಶಿವಲಿಂಗಮ್ಮ, ಆಡಳಿತಾಧಿಕಾರಿ ರುದ್ರಕುಮಾರ್ ಆರಾಧ್ಯ, ಮುಖಂಡರಾದ ದಿಲೀಪ್ಕುಮಾರ್, ಕೆ.ವೈ.ಸಿದ್ಧಲಿಂಗಮೂರ್ತಿ, ಟಿ.ಸಿ.ಓಹಿಲೇಶ್ವರ್, ಕೆ.ಜೆ.ರುದ್ರಪ್ಪ, ಟಿ.ಆರ್.ನಟರಾಜು, ನಳಿನಾ ಶಿವಾನಂದ್, ಸುಮ ಪ್ರಸನ್ನ, ಡಿ.ಆರ್.ಮಲ್ಲೇಶಯ್ಯ, ಟಿ.ಆರ್.ಅನುಸೂಯಮ್ಮ , ಶಿವಲಿಂಗಮ್ಮ ಮತ್ತಿತರರು ಉಪಸ್ಥಿತರಿದ್ದರು.
ಜಾತಿಗಣತಿಯಂತೆ ದೀಕ್ಷಾಗಣತಿ ನಡೆಯಲಿ
ಜಾತಿ ಗಣತಿಯಂತೆ ವೀರಶೈವ ಸಮಾಜದಲ್ಲಿ ದೀಕ್ಷಾಗಣತಿ ನಡೆಸಬೇಕಾಗಿದೆ. ಸಮಾಜದ ಎಲ್ಲರೂ ದೀಕ್ಷೆ ಪಡೆಯಬೇಕು. ನಿತ್ಯ ಶಿವಪೂಜೆ ಮಾಡಲು ಸಾಧ್ಯವಾಗದೇ ಇರಬಹುದು, ಹೀಗಾಗಿ ವಾರಕ್ಕೊಮ್ಮೆ ಶ್ರೀ ಮಠದಲ್ಲಿ ಸಾಮೂಹಿಕ ಶಿವಪೂಜೆ ವ್ಯವಸ್ಥೆ ಮಾಡುವ ಆಲೋಚನೆ ತಮಗಿದೆ. ಮುಸ್ಲಿಮರು, ಕ್ರೆೃಸ್ತರು ಶುಕ್ರವಾರ, ಭಾನುವಾರ ಮಸೀದಿ, ಚರ್ಚ್ಗಳಲ್ಲಿ ಸೇರಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ರೀತಿಯಲ್ಲಿ ವಾರಕ್ಕೊಮ್ಮೆ ಸಾಮೂಹಿಕ ಶಿವಪೂಜೆ ಪದ್ಧತಿ ಶುರು ಮಾಡಬೇಕು. ಇದರಿಂದ ನಮ್ಮ ಧರ್ಮ, ಸಂಸತಿ ಉಳಿಯುತ್ತದೆ ಎಂದು ಹಿರೇಮಠದ ಡಾ.ಶಿವಾನಂದ ಶಿವಾಚರ್ಯ ಸ್ವಾಮೀಜಿ ಹೇಳಿದರು.