

ಹಾನಗಲ್ಲ : ವಿಜಯದಶಮಿ ಅಂಗವಾಗಿ ಹಾನಗಲ್ಲಿನ ವಿವಿಧ ಹಿಂದು ಮಂದಿರಗಳ ಪಲ್ಲಕ್ಕಿ ಉತ್ಸವ ಸಂಭ್ರಮದಿಂದ ಜರುಗಿದವು. ಸಂಜೆ ಪಿಳ್ಳನಗಟ್ಟಿ ಮಾರುತಿ ದೇವಸ್ಥಾನದ ಆವರಣದ ಬನ್ನಿಗಿಡಕ್ಕೆ ಪೂಜೆ ಸಲ್ಲಿಸುವ ಮೂಲಕ ಬನ್ನಿ ಮುಡಿಯುವ ಕಾರ್ಯ ಆರಂಭವಾಯಿತು.
ಗುರುವಾರ ಮಧ್ಯಾಹ್ನ 3 ಗಂಟೆಯ ಹೊತ್ತಿಗೆ ಪಟ್ಟಣದ ಎಲ್ಲ ದೇವಸ್ಥಾನಗಳ ಪಲ್ಲಕ್ಕಿಗಳು ಐತಿಹಾಸಿಕ ಪುರಾತನ ತಾರಕೇಶ್ವರ ದೇವಸ್ಥಾನದ ಬಳಿ ಸಮಾವೇಶಗೊಂಡು ಅಲ್ಲಿಂದ ಭವ್ಯ ಮೆರವಣಿಗೆ ಆರಂಭವಾಯಿತು. ಸಕಲವಾದ್ಯ ವೈಭವಗಳೊಂದಿಗೆ ನಗರದ ಯುವಕರು ಹಿರಿಯರು ಪಾಲಕಿ ಉತ್ಸವದಲ್ಲಿ ಪಾಲ್ಗೊಂಡಿದ್ದರು. ಪಲ್ಲಕ್ಕಿ ಉತ್ಸವ ಶತಮಾನಗಳ ಸಂಪ್ರದಾಯದಂತೆ ಸಿಂಪಿಗಲ್ಲಿ, ಕಂಚಗಾರ ಓಣಿ, ಸ್ಟೇಟ್ಬ್ಯಾಮಖ ರೋಡ, ಹೊಸಬಸ್ನಿಲ್ದಾಣದ ಮಾರ್ಗವಾಗಿ ಪಿಳ್ಳನಗಟ್ಟಿ ಮಾರುತಿ ದೇವಸ್ಥಾನ ತಲುಪಿದವು. ನಂತರ ಪಿಳ್ಳನಗಟ್ಟಿ ಮಾರುತಿ ದೇವಸ್ಥಾನದ ಬಳಿ ಶಮಿ ವೃಕ್ಷಕ್ಕೆ ಧಾಮಿರ್ಕ ನಡೆನುಡಿಯಂತ ಪೂಜೆ ಸಲ್ಲಿಸಿ ಬನ್ನಿ ಮುಡಿಯುವ ಕಾರ್ಯಕ್ಕೆ ಚಾಲನೆ ನೀಡಲಾಯಿತು. ನಂತರ ಪಲ್ಲಕ್ಕಿ ಉತ್ಸವವು ಪಟ್ಟಣದ ಹಳೇ ಬಸ್ನಿಲ್ದಾಣ ದ್ಯಾಮವ್ವನ ಪಾದಗಟ್ಟಿ, ಅರ್ಬನ್ ಬ್ಯಾಂಕ್ ರೋಡ್, ಗಜಾನನ ಭವನ ಕ್ರಾಸ್ ಮೂಲಕ ಪುನಃ ತಾರಕೇಶ್ವರ ದೇವಸ್ಥಾನ ತಲುಪಿ, ಸಂಪ್ರದಾಯದಂತೆ ತಮ್ಮ ತಮ್ಮ ದೇವಸ್ಥಾನಗಳ ಕಡೆಗೆ ನಡೆದವು. ಈ ಸಂದರ್ಭದಲ್ಲಿ ಹಿರಿಯರು ಯುವಕರು ತಾಯಂದಿರು ಪರಸ್ಪರ ಬನ್ನಿ ವಿನಿಮಯ ಮಾಡಿಕೊಂಡು ವಿಜಯ ದಶಮಿಯ ಶುಭಾಶಯಗಳನ್ನು ಕೋರಿದರು.
ಶಮಿವೃಕ್ಷಕ್ಕೆ ತಾಲೂಕು ತಹಸೀಲ್ದಾರ ಎಸ್.ರೇಣುಕಮ್ಮ ಸಂಪ್ರದಾಯದಂತೆ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಿಪಿಐ ಬಸವರಾಜ ಹಳಬನ್ನವರ, ಪಿಎಸ್ಐ ಸಂಪತ್ ಆನಿಕಿವಿ, ರವಿಚಂದ್ರ ಪುರೋಹಿತ, ಕಲ್ಯಾಣಕುಮಾರ ಶೆಟ್ಟರ, ಗಣೇಶ ಮೂಡ್ಲಿಯವರ, ಸುರೇಶ ಪೂಜಾರ, ದೀಪಕ ಕಿತ್ತೂರ, ಸಂತೋಷ ಟೀಕೋಜಿ, ಕೃಷ್ಣ ಪೂಜಾರ, ಮಂಜುನಾಥ ಅರ್ಕಸಾಲಿ, ಸಂಜು ಬೇದ್ರೆ, ಕೃಷ್ಣ ಬಾಗಲೆ, ಕಿರಣ ಮೂಡ್ಲಿ, ಗುರುರಾಜ ನಿಂಗೋಜಿ, ಹಮ್ಮಣ್ಣ ಬಾಳೂರ, ಬಸವರಾಜ ಹಾದಿಮನಿ ಮೊದಲಾದವರು ಪೂಜೆ ಅಲ್ಲಿಸುವ ಸಂದರ್ಭದಲ್ಲಿ ಇದ್ದರು.