

ಮೇಲುಕೋಟೆ: ಚಕ್ರವರ್ತಿಯಂತೆ ರಾಜಾಲಂಕಾರದಲ್ಲಿ ಕಂಗೊಳಿಸಿದ ಮೈಸೂರು ಯದುವಂಶದ ಕುಲದೈವ ಮಹಾವಿಷ್ಣು ಮೇಲುಕೋಟೆ ಶ್ರೀ ಚೆಲುವನಾರಾಯಣಸ್ವಾಮಿಯ ವಿಜಯದಶಮಿಯ ಉತ್ಸವ ಶನಿವಾರ ವೈಭವದಿಂದ ಜರುಗಿತು. ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ 25 ಸಾವಿರಕ್ಕೂ ಹೆಚ್ಚು ಭಕ್ತರು ಸ್ವಾಮಿಯ ದರ್ಶನ ಪಡೆದು ಕಣ್ತುಂಬಿಕೊಂಡರು.
ವಿಜಯದಶಮಿ ದಿನವಾದ ಶನಿವಾರ ಶಂಖ, ಚಕ್ರ, ಗದೆ, ಪದ್ಮ ಕತ್ತಿ, ಬಿಲ್ಲುಬಾಣ ಮುಂತಾದ ದಿವ್ಯಾಯುಧಗಳನ್ನು ಧರಿಸಿ ಮೈಸೂರು ಪೇಟ, ಜರತಾರಿ ರೇಷ್ಮೆ ಪಂಚೆಯೊಂದಿಗೆ ಭವ್ಯವಾಗಿ ಅಲಂಕೃತನಾದ ಮೂಲಮೂರ್ತಿ ಚೆಲ್ವತಿರುನಾರಾಯಣಸ್ವಾಮಿ ದಿವ್ಯಸುಂದರ ರೂಪವನ್ನು ಭಕ್ತರು ಜಯಘೋಷ ಹಾಕುತ್ತ ಕಣ್ತುಂಬಿಕೊಂಡರು.
ಬೆಳಗ್ಗೆಯಿಂದಲೇ ಸಹಸ್ರಾರು ಸಂಖ್ಯೆಯ ಭಕ್ತರು ದೇವಾಲಯಕ್ಕೆ ಆಗಮಿಸಿ ಸಾಲಿನಲ್ಲಿ ನಿಂತು ಚೆಲುವನ ದರ್ಶನ ಪಡೆದರು. ಬೆಟ್ಟದೊಡೆಯ ಕುಂತಸಿಂಗ್ರಿ, ಯೋಗನರಸಿಂಹಸ್ವಾಮಿಗೂ ಪಾರಂಪರಿಕವಾದ ಮಹಾರಾಜರ ಅಲಂಕಾರ ಮಾಡಲಾಯಿತು. ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಶೀಲಾ, ಪಾರುಪತ್ತೇಗಾರ ಸ್ಥಾನಾಚಾರ್ಯ ಶ್ರೀನಿವಾಸನರಸಿಂಹನ್ ಗುರೂಜಿ, ದೇಗುಲದ ಕೈಂಕರ್ಯ ಪರರು ಮತ್ತು ಸಿಬ್ಬಂದಿ ಸಹಕಾರದಲ್ಲಿ ವಿಜಯದಶಮಿಯನ್ನು ಯಶಸ್ವಿಯಾಗಿ ನಡೆಸಿದರು.
ಮೇಲುಕೋಟೆಯ ವಿಜಯದಶಮಿ ಉತ್ಸವವನ್ನು ಮರೆತ ಪೊಲೀಸ್ ಇಲಾಖೆ ಮತ್ತು ಗ್ರಾಮ ಪಂಚಾಯಿತಿ ಭಕ್ತರ ವಾಹನಗಳಿಗೆ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಮಾಡದ ಕಾರಣ ವಾಹನ ದಟ್ಟಣೆ ಉಂಟಾಯಿತು. ಶನಿವಾರ, ಭಾನುವಾರ ಹಬ್ಬದ ದಿನಗಳಂದು ಆರೋಗ್ಯ ಕೇಂದ್ರದ ಮುಂಭಾಗ ಪಾರ್ಕಿಂಗ್ ಮಾಡಬೇಕೆಂದು ಕಳೆದ ವಾರವಷ್ಟೇ ಶಾಸಕ ದರ್ಶನ್ ಪುಟ್ಟಣ್ಣಯ್ಯ ನೀಡಿದ ಸಲಹೆ ಜಾರಿಗೆ ಬಾರದ ಕಾರಣ ಮತ್ತೆ ಪಾರ್ಕಿಂಗ್ ಅವ್ಯವಸ್ಥೆ ಉಂಟಾಗಿತ್ತು.
ವೇದಾಂತ ದೇಶಿಕರ ತಿರುನಕ್ಷತ್ರ ಮಹೋತ್ಸವ ಶಠಾರಿ ಮೆರವಣಿಗೆಗೂ ಅಡ್ಡಾದಿಡ್ಡಿಯಾಗಿ ನಿಲ್ಲಿಸಿದ್ದ ಭಕ್ತರ ವಾಹನಗಳಿಂದ ಅಡಚಣೆಯಾಯಿತು. ಭಕ್ತರ ದಟ್ಟಣೆ ನಿಯಂತ್ರಿಸಲು ದೇವಾಲಯಕ್ಕೆ ಪೋಲೀಸ್ ಸಿಬ್ಬಂದಿ ನಿಯೋಜಿಸದ ಕಾರಣ ದೇವಾಲಯದಲ್ಲೂ ಕೆಲಕಾಲ ನೂಕುನುಗ್ಗಲು ಉಂಟಾಗಿತ್ತು.
ಈ ವರ್ಷ ನವರಾತ್ರಿ ವಿಜಯ ದಶಮಿಗೆ ರಾಜಗೋಪುರ ಮತ್ತು ರಾಜಗೋಪುರಕ್ಕೆ ದೀಪಾಲಂಕಾರ ಇರಲಿಲ್ಲ. ಜತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು, ರಂಗೋಲಿ ಸ್ಪರ್ಧೆಯೂ ಸ್ಥಗಿತಗೊಂಡಿತು. ಭಾರತದ ಪ್ರಮುಖ ಶ್ರೀ ವೈಷ್ಣವ ಕ್ಷೇತ್ರವಾದ ಮೇಲುಕೋಟೆಯ ಚೆಲುವನಾರಾಯಣಸ್ವಾಮಿ ಸನ್ನಿಧಿಯಲ್ಲಿ ವಿಜಯದಶಮಿ-ನವರಾತ್ರಿ ಮಹೋತ್ಸವ ಆಕರ್ಷಕವಾಗಿ ನಡೆದರೂ ಜನಪ್ರತಿನಿಧಿಗಳು ಅಧಿಕಾರಿಗಳ ನಿರಾಸಕ್ತಿಯಿಂದ ವ್ಯವಸ್ಥೆ ಬದಲಾಗದ ಕಾರಣ ಉತ್ಸವದ ಆಚರಣೆ ಸಾಂಕೇತಿಕವಾಗಿ ನಡೆಯುವಂತಾಯಿತು. ಕಲ್ಯಾಣನಾಯಕಿ ಅಮ್ಮನವರು, ಚೆಲುವನಾರಾಯಣಸ್ವಾಮಿ ಉತ್ಸವಕ್ಕೆ ಭಕ್ತರೇ ತೋಮಾಲೆ ಕೊಡುಗೆ ನೀಡಿದ್ದರು.