ಶೋಕ ಯಾತ್ರೆಯಾದ ವಿಜಯ ಯಾತ್ರೆ

4 vikram 5
Published on

ಶೋಕ ಯಾತ್ರೆಯಾದ ವಿಜಯ ಯಾತ್ರೆ

ವಿಜಯವಾಣಿ ಸುದ್ದಿಜಾಲ ಧಾರವಾಡ

ಸರ್ಕಾರದ ನಿರ್ಲಕ್ಷ್ಯದಿಂದ ರಾಯಲ್​ ಚಾಲೆಂಜರ್ಸ್​ (ಆರ್​ಸಿಬಿ) ತಂಡದ ವಿಜಯಯಾತ್ರೆಯು ಶೋಕಯಾತ್ರೆಯಾಗಿ ಪರಿವರ್ತಿತವಾಗಿದೆ ಎಂದು ವಿಧಾನಸಭೆ ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ ಟೀಕಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, 18 ವರ್ಷಗಳ ಬಳಿಕ ಆರ್​ಸಿಬಿ ಐಪಿಎಲ್​ ಜಯಗಳಿಸಿದ್ದರಿಂದ ಎಲ್ಲೆಡೆ ಸಂಭ್ರಮ ಮುಗಿಲು ಮುಟ್ಟಬೇಕಿತ್ತು. ಆದರೆ ಕಾಂಗ್ರೆಸ್​ ಸರ್ಕಾರದ ವೈಫಲ್ಯ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅಸಮರ್ಥ ಆಡಳಿತದಿಂದ ಸಂಭವಿಸಿದ ನೂಕುನುಗ್ಗಲಿನಲ್ಲಿ ಅಮಾಯಕರು ಮೃತಪಡುವಂತಾಗಿದೆ ಎಂದು ದೂರಿದ್ದಾರೆ.

ಅಮಾಯಕರ ಸಾವುಗಳಿಗೆ ಕಾಂಗ್ರೆಸ್​ ಸರ್ಕಾರ, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಗೃಹ ಸಚಿವರೇ ನೇರ ಹೊಣೆ. ಸರ್ಕಾರ ಪೂರ್ವ ಸಿದ್ಧತೆ ಹಾಗೂ ಹೆಚ್ಚಿನ ಭದ್ರತೆಯೊಂದಿಗೆ ವಿಜಯಯಾತ್ರೆ, ಸನ್ಮಾನ ಸಮಾರಂಭ ಆಯೋಜಿಸಬಹುದಿತ್ತು. ಆದರೆ ರಾಜಕೀಯ ಸ್ವಾರ್ಥಕ್ಕಾಗಿ ಅಮಾಯಕರ ಬಲಿ ಪಡೆದು ಸರ್ಕಾರ ಬೇಳೆ ಬೇಯಿಸಿಕೊಳ್ಳುತ್ತಿದೆ. ಇಂತಹ ಸರ್ಕಾರಕ್ಕೆ ಧಿಕ್ಕಾರವಿರಲಿ ಎಂದು ಕಿಡಿಕಾರಿದ್ದಾರೆ.

ಆರ್​ಸಿಬಿ ತಂಡದ ಅಭಿಮಾನಿಗಳಿಗೆ ನನ್ನದೊಂದು ಮನವಿ. ಗೆಲುವಿನ ಸಂಭ್ರಮದಲ್ಲಿ ಮಿಂದೇಳಿ ಅಡ್ಡಿ ಇಲ್ಲ. ಆದರೆ ಅಭಿಮಾನಿಗಳ ಸಾಗರವೇ ಹರಿದುಬಂದ ಸಂದರ್ಭದಲ್ಲಿ ಮುನ್ನೆಚ್ಚರಿಕೆಯಿಂದ ಇರಿ. ನಿಮ್ಮ ಮನೆಗಳಲ್ಲಿ ನಿಮಗಾಗಿ ಕಾಯುತ್ತಿರುತ್ತಾರೆ ಎಂಬುದನ್ನು ಮರೆಯಬೇಡಿ ಎಂದು ಬೆಲ್ಲದ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net