

ಉಪ್ಪಿನಂಗಡಿ: ಮಾರ್ಚ್ 22 ಮತ್ತು 23ರಂದು ನಡೆಯಲಿರುವ 39ನೇ ವರ್ಷದ ವಿಜಯ-ವಿಕ್ರಮ ಕಂಬಳವನ್ನು ಉಬಾರ್ ಕಂಬಳೋತ್ಸವವಾಗಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ನಡೆಸಲು ಭರದ ಸಿದ್ಧತೆ ನಡೆಯುತ್ತಿದ್ದು, ಶಾಸಕ ಅಶೋಕ್ ಕುಮಾರ್ ರೈ ಆಶಯದಂತೆ ಕಂಬಳದ ಪರಿಸರದಲ್ಲಿ ಸಸ್ಯ ಮೇಳ, ಆಹಾರ ಮೇಳದೊಂದಿಗೆ ಮಕ್ಕಳ ಮನೋರಂಜನೆ, ಬೋಟಿಂಗ್ ವ್ಯವಸ್ಥೆ ಆಯೋಜಿಸಲಾಗಿದೆ ಎಂದು ಕಂಬಳ ಸಮಿತಿ ಕಾರ್ಯಾಧ್ಯಕ್ಷ ಅಶೋಕ್ ಕುಮಾರ್ ರೈ ಅರ್ಪಿಣಿಗುತ್ತು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 22ರ ಮುಂಜಾನೆ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ಅಮ್ಮನವರ ಸನ್ನಿಧಿಯಲ್ಲಿ ಪುತ್ತೂರು ಸಹಾಯಕ ಆಯುಕ್ತೆ ಸ್ಪೆಲ್ಲಾ ವರ್ಗಿಸ್ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಕಂಬಳ ಕರೆಯಲ್ಲಿ ಕಂಬಳವನ್ನು ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ರಾಧಾಕೃಷ್ಣ ನಾಕ್ ಉದ್ಘಾಟಿಸಲಿದ್ದಾರೆ. ಬೆಂಗಳೂರಿನ ಉದ್ಯಮಿ ನಟೇಶ್ ಪೂಜಾರಿ ಅಧ್ಯಕ್ಷತೆ ವಹಿಸುವರು. ಗ್ರಾ.ಪಂ. ಅಧ್ಯಕ್ಷೆ ಲಲಿತಾ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಮಲ್ಲಿಕಾ ಶೆಟ್ಟಿ, ಉದ್ಯಮಿ ಧನ್ಯಕುಮಾರ್ ರೈ, ಕರುಣಾಕರ ಸುವರ್ಣ, ದೀನರ ಕನ್ಯಾಮಾತೆ ದೇಗುಲದ ಧರ್ಮಗುರು ಜೆರಾಲ್ಡ್ ಡಿಸೋಜ, ಕೇಂದ್ರ ಜುಮ್ಮಾ ಮಸೀದಿ ಅಧ್ಯಕ್ಷ ಯೂಸುಫ್ ಹಾಜಿ ಉಪಸ್ಥಿತರಿರುತ್ತಾರೆ ಎಂದರು.
ಸಂಜೆ ಸಭಾ ಕಾರ್ಯಕ್ರಮದಲ್ಲಿ ಶಾಸಕ ಅಶೋಕ್ ಕುಮಾರ್ ರೈ, ಸ್ಪೀಕರ್ ಯು.ಟಿ.ಖಾದರ್, ಇಂಧನ ಸಚಿವ ಕೆ.ಜೆ. ಜಾರ್ಜ್, ಅಲ್ಪಸಂಖ್ಯಾತ ಖಾತೆ ಸಚಿವ ಜಮೀರ್ ಅಹ್ಮದ್, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ ಗುಂಡುರಾವ್ ಸಹಿತ ಹಲವು ಗಣ್ಯರು ಪಾಲ್ಗೊಳಲಿದ್ದಾರೆ. 23ರಂದು ಬಹುಮಾನ ವಿತರಣೆ ಕಾರ‌್ಯಕ್ರಮದಲ್ಲಿ ಪುತ್ತೂರು ತಾಲೂಕು ದಂಡಾಧಿಕಾರಿ ಪುರಂದರ ಹೆಗ್ಡೆ, ನಿವೃತ್ತ ಕಮಾಂಡೆಂಟ್ ಚಂದಪ್ಪ ಮೂಲ್ಯ, ವಕೀಲ ಮಹೇಶ್ ಕಜೆ ಮತ್ತಿತರರು ಭಾಗವಹಿಸಲಿದ್ದಾರೆ ಎಂದರು.
ಕಂಬಳ ಸಮಿತಿ ಗೌರವಾಧ್ಯಕ್ಷ ನಂದಾವರ ಉಮೇಶ ಶೆಣೈ, ಪ್ರಧಾನ ಕಾರ್ಯದರ್ಶಿ ಕೇಶವ ಭಂಡಾರಿ ಕೈಪಾ, ನಿರಂಜನ್ ಮಠಂತಬೆಟ್ಟು, ಯೋಗೀಶ್ ಸಾಮಾನಿ ಉಪಸ್ಥಿತರಿದ್ದರು.
ಎಲ್ಲ ಸ್ತರದ ಭಾಗೀದಾರರಿಗೆ ಬಹುಮಾನ
ಆರು ವಿಭಾಗಗಳಲ್ಲಿ ನಡೆಯುವ ಕಂಬಳ ಸ್ಪರ್ಧೆಯಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನಿಗಳಿಗೆ ಚಿನ್ನದ ಬಹುಮಾನ ಲಭಿಸಿದರೆ, ವಿಜೇತ ಕೋಣಗಳ ಮಾಲೀಕರಿಗೆ ವಿಜಯ-ವಿಕ್ರಮ ಟ್ರೋಫಿ ನೀಡಿ ಗೌರವಿಸಲಾಗುವುದು. ಮಾತ್ರವಲ್ಲದೆ ಈ ಬಾರಿ ವಿಜೇತ ಕೋಣಗಳ ರಕ್ಷಕರಿಗೂ ಬಹುಮಾನದ ಗೌರವ ನೀಡುವ ಯೋಜನೆ ಇದ್ದು, ತನ್ಮೂಲಕ ಕಂಬಳದ ಎಲ್ಲ ಸ್ತರದ ಪ್ರಮುಖರಿಗೂ ಮಾನ್ಯತೆ ನೀಡಲಾಗುವುದು ಎಂದು ಅಶೋಕ್ ಕುಮಾರ್ ರೈ ಅರ್ಪಿಣಿಗುತ್ತು ತಿಳಿಸಿದರು.