

ಹಳಿಯಾಳ: ಮಾಡುವ ಕೆಲಸದ ಮೇಲೆ ಪ್ರೀತಿ, ಗುಣಮಟ್ಟದ ಸೇವೆ ಹಾಗೂ ಸಮಯ ಪಾಲನೆ ಇದೇ ಯಶಸ್ಸಿನ ಗುಟ್ಟು. ಇದಕ್ಕೆ ಜ್ವಲಂತ ನಿದರ್ಶನ ವಿಆರ್ಎಲ್ ಸಮೂಹ ಸಂಸ್ಥೆಯ ಚೇರ್ಮನ್ ಡಾ. ವಿಜಯ ಸಂಕೇಶ್ವರ ಅವರು ಎಂದು ಯುನಿಯನ್ ಬ್ಯಾಂಕ್ ಆಪ್ ಇಂಡಿಯಾದ ನಿರ್ದೇಶಕ ಮತ್ತು ಕ್ಲಾಸಿಕ್ ಗ್ರುಪ್ ಆಫ್ ಆರ್ಗನೈಸೇಶನ್ ಧಾರವಾಡದ ವ್ಯವಸ್ಥಾಪಕ ನಿರ್ದೇಶಕ ಲಕ್ಷ್ಮಣ ಉಪ್ಪಾರ ಹೇಳಿದರು.
ಪಟ್ಟಣದ ಉದ್ಯೋಗ ವಿದ್ಯಾನಗರದಲ್ಲಿರುವ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿಯ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿಯ 19ನೇ ವಾರ್ಷಿಕ ವರದಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಉದ್ಯೋಗದಲ್ಲಿ ಯಶಸ್ಸು ಕಾಣಬೇಕಾದರೆ ಎಲ್ಲ ಹಂತದಲ್ಲೂ ತಾಳ್ಮೆ, ನಮೃತೆ, ಶಿಸ್ತು ಬೇಕು. ಶಿಸ್ತು ಪ್ರಗತಿಯ ಅಡಿಗಲ್ಲು. ಒಬ್ಬ ಸಾಮಾನ್ಯ ವ್ಯಕ್ತಿ ಸಣ್ಣ ಉದ್ಯಮದೊಂದಿಗೆ ಅತ್ಯುತ್ತಮ ಕಾರ್ಯಶೈಲಿಯ ಮೂಲಕ 40 ವರ್ಷಗಳಲ್ಲಿ ದೇಶವೇ ತಿರುಗಿ ನೋಡುವಂತೆ ವಿಆರ್ಎಲ್ ಸಮೂಹ ಸಂಸ್ಥೆಯಂಥಹ ದೊಡ್ಡ ಸಾಮ್ರಾಜ್ಯ ಕಟ್ಟಿರುವ ಸಂಕೇಶ್ವರರಂತಹ ವ್ಯಕ್ತಿಗಳು ಯುವ ಪೀಳಿಗೆಗೆ ಆದರ್ಶವಾಗಿದ್ದಾರೆ ಎಂದರು.
ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ ಕಾರ್ಯಕಾರಿಣಿ ಮಂಡಳಿ ಅಧ್ಯಕ್ಷ ಪ್ರಸಾದ ದೇಶಪಾಂಡೆ ಮಾತನಾಡಿ, ನಮ್ಮ ಸಂಸ್ಥೆಯಲ್ಲಿ ತರಬೇತಿ ಪಡೆದಿರುವ ಶೇ. 76 ರಷ್ಟು ಜನ ಬ್ಯಾಂಕುಗಳಿಂದ ಸಾಲ, ಸೌಲಭ್ಯ ಪಡೆದು ಸ್ವಂತ ಉದ್ಯೋಗ ಪ್ರಾರಂಭಿಸಿ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ ಎಂದರು.
ಕೆನರಾ ಬ್ಯಾಂಕ್ನ ಜನರಲ್ ಮ್ಯಾನೇಜರ್ ಎಂ.ಜಿ. ಪಂಡಿತ ಮಾತನಾಡಿ, ಕೆನರಾ ಬ್ಯಾಂಕ್ ಯಾವತ್ತೂ ಪ್ರಾಮಾಣಿಕವಾಗಿ ದುಡಿಯುವ ಪ್ರತಿಯೊಬ್ಬನಿಗೂ ಸಾಲ ಸೌಲಭ್ಯ ನೀಡಲು ಬದ್ಧವಾಗಿದೆ ಎಂದರು.
ಸಂಸ್ಥೆಯಿಂದ ತರಬೇತಿ ಪಡೆದು ಯಶಸ್ವಿಯಾಗಿರುವ 5 ಶಿಬಿರಾರ್ಥಿ, ಸ್ವಸಹಾಯ ಸಂಘದ 5 ಯಶಸ್ವಿ ಮಹಿಳಾ ಉದ್ಯಮಿ, ಸಂಸ್ಥೆಯೊಂದಿಗೆ ಸಹಭಾಗಿತ್ವ ಹೊಂದಿರುವ ಕಾರ್ಪೆರೇಟ್ ಸಂಸ್ಥೆಗಳ ಅಧಿಕಾರಿಗಳಿಗೆ ಪ್ರಶಂಸಾ ಪತ್ರ ನೀಡಿ ಸನ್ಮಾನಿಸಲಾಯಿತು.
ಸಂಸ್ಥೆಯ ಹಿರಿಯ ಮಾರ್ಗದರ್ಶಕರಾದ ಅನಂತಯ್ಯಾ ಆಚಾರ್, ವಿಆರ್ಡಿಎಂ ಟ್ರಸ್ಟ್ನ ಸದಸ್ಯ ಕಾರ್ಯದರ್ಶಿ ಶ್ಯಾಮ ಕಾಮತ್, ಕೆನರಾ ಬ್ಯಾಂಕ್ ಎಜಿಎಂ ನಂದಕಿಶೋರ ಕಸ್ಕರ್, ವಾಸುದೇವರಾವ ದೇಶಪಾಂಡೆ, ಪ್ರಶಾಂತ ಬಡ್ಡಿ ಇತರರು ಇದ್ದರು.